ತಿ.ನರಸೀಪುರದಲ್ಲಿ ಕಣ್ಣೀರಿಡುತ್ತಿರುವ ಜಯಲಲಿತಾ ಸಹೋದರ ವಾಸುದೇವನ್

ತಿ.ನರಸೀಪುರ, ಡಿ.5: ತಮಿಳುನಾಡು ಮುಖ್ಯಮಂತ್ರಿ ಜೆಯಲಲಿತಾ ಅವರನ್ನು ಜೀವಿತಾವಧಯಲ್ಲಿ ಸಂಪರ್ಕಿಸಲು ಸಾಧ್ಯವಾಗಲಿಲ್ಲ. ಅವರು ನಿಧನರಾಗಿರುವ ಸುದ್ದಿ ತಿಳಿದು ದಿಗ್ಬ್ರಾಂತನಾಗಿದ್ದೇನೆ ಎಂದು ಜಯಲಲಿತಾ ಸಹೋದರ ವಾಸುದೇವನ್ ತಿಳಿಸಿದ್ದಾರೆ.
ತಾಲೂಕಿನ ಶ್ರೀರಂಗರಾಜಪುರದಲ್ಲಿರುವ ಅವರ ನಿವಾಸದಲ್ಲಿ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಜಯಲಲಿತಾ ಅವರು, ಮೂರು ವರ್ಷವಿದ್ದಾಗಲೇ ನಮ್ಮಿಂದ ಬೇರೆಯಾಗಿ ಅವರ ತಾಯಿ ವೇದಮ್ಮ ಆಲಿಯಾಸ್ ಸಂದ್ಯಾ ಜೊತೆ ಮದ್ರಾಸ್‌ಗೆ ತೆರಳಿದರು. ಅಲ್ಲಿಂದ ಇಲ್ಲಿಯವರೆಗೂ ನನ್ನಿಂದ ಅವರನ್ನು ಮಾತನಾಡಿಸಲಿಕ್ಕೆ ಸಾಧ್ಯವಾಗಲೇ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ನನ್ನ ಸಹೋದರಿ ಜಯಲಲಿತಾಳನ್ನು ಹಲವು ಬಾರಿ ಸಂಪರ್ಕಿಸಲು ಪತ್ರ ವ್ಯವಹಾರ ನಡೆಸಿದ್ದೆ ಹಾಗೂ ತಮಿಳುನಾಡಿನ ನಕ್ಕೀರನ್ ಪತ್ರಿಕೆ ಸಂದರ್ಶನ ಸಹ ನೀಡಿದ್ದೆ. ಆದರೂ ಸಹ ಸಂಪರ್ಕ ಸಾಧಿಸಲು ಸಾಧ್ಯವಾಗಲಿಲ್ಲ. ಅವರು ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾದ ನಂತರ ನನ್ನ ಸಹೋದರಿ ಗುಣಮುಖವಾಗಿ ತಮಿಳುನಾಡಿನ ಜನತೆಗೆ ಹೆಚ್ಚಿನ ಸೇವೆಯನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸಿ, ಹಲವು ಪೂಜೆಯನ್ನು ಸಹ ಮಾಡಿಸಿದ್ದೆ. ಅದು ಫಲಿಸಲಿಲ್ಲ ಎಂದು ಕಣ್ಣೀರಿಟ್ಟರು.
ಸಹೋದರಿ ಬದುಕಿದ್ದಾಗ ನೋಡಿ ಮಾತನಾಡಲು ಸಾಧ್ಯವಾಗಲಿಲ್ಲ. ಈಗ ಅವರ ಪಾರ್ಥಿವ ಶರೀರವನ್ನಾದರೂ ನೋಡಿ ಕಣ್ತುಂಬಿಕೊಳ್ಳಬೇಕೆಂಬ ಆಸೆ ಇದೆ. ಆದರೆ ನಾನು ಆರ್ಥಿಕವಾಗಿ ಸಂಕಷ್ಟದಲ್ಲಿದ್ದೇನೆ ಅಲ್ಲಿಗೆ ತೆರಳು ಸಾಧ್ಯವಿಲ್ಲ. ಆದ್ದರಿಂದ ಯಾರಾದರು ನನಗೆ ನೆರವು ನೀಡಿದರೆ ಅಂತಿಮ ದರ್ಶನ ಪಡೆಯುತ್ತೇನೆ ಎಂದು ನೊಂದು ನುಡಿದರು.







