ರೂ. 500ರ ನೋಟುಗಳು ಬಂದರೆ ಬ್ಯಾಂಕ್‌ಗಳಲ್ಲಿ ಸರತಿಯ ಸಾಲು ಅಂತ್ಯ: ಎಸ್‌ಬಿಐ ಅಧಿಕಾರಿ

ಹೊಸದಿಲ್ಲಿ, ಡಿ.5: ಬ್ಯಾಂಕ್‌ಗಳಲ್ಲಿ ಉದ್ದನೆಯ ಸರತಿಯ ಸಾಲುಗಳು ಅಂತ್ಯಗೊಳ್ಳಬೇಕಾದರೆ ಕನಿಷ್ಠ ರೂ. 10 ಲಕ್ಷ ಕೋಟಿ ಚಲಾವಣೆಯಲ್ಲಿರಬೇಕು. ಆದರೆ, ಕಾಣೆಯಾಗಿರುವ ರೂ. 500ರ ನೋಟುಗಳು ಭಾರೀ ಅಗತ್ಯವಾಗಿವೆಯೆಂದು ಎಸ್‌ಬಿಐಯ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ತಮ್ಮ ಅಧ್ಯಯನದ ಪ್ರಕಾರ, ಎರಡು ತಿಂಗಳಿಗೆ ಬೇಕಾಗುವ ರೂ. 10 ಲಕ್ಷ ಕೋಟಿ ಮಾರುಕಟ್ಟೆಯಲ್ಲಿ ಚಲಾವಣೆಯಲ್ಲಿರುವ ಅಗತ್ಯವಿದೆ. ಆಗ ಸರತಿಯ ಸಾಲುಗಳು ಕೊನೆಗೊಳ್ಳುತ್ತವೆಂದು ಎಸ್‌ಬಿಐಯ ಆಡಳಿತ ನಿರ್ದೇಶಕ ರಜನೀಶ್ ಕುಮಾರ್ ತಿಳಿಸಿದ್ದಾರೆ.
ಇದರಲ್ಲಿ ಕನಿಷ್ಠ ರೂ. 3-4 ಲಕ್ಷ ಕೋಟಿ ಡಿಜಿಟಲ್ ಅಥವಾ ಆನ್‌ಲೈನ್ ಮಾಧ್ಯಮದಲ್ಲಿ ಚಲಾವಣೆಯಾಗಬೇಕು ಎಂದವರು ಹೊಸದಿಲ್ಲಿಯಲ್ಲಿ ನಡೆದ ಅಡಕ ಆರ್ಥಿಕತೆಯ ಭಾರತ ಸಮ್ಮೇಳನದಲ್ಲಿ ಹೇಳಿದ್ದಾರೆ.
ಹಣದ ವೇಗದ ಚಲಾವಣೆಗೆ ರೂ. 500ರ ನೋಟುಗಳ ಅಭಾವ ತಡೆಯಾಗಿದೆ. ಪ್ರಕೃತ ರೂ. 100 ಹಾಗೂ 2 ಸಾವಿರದ ನೋಟುಗಳ ನಡುವೆ ಬೇರೆ ಯಾವುದೇ ನೋಟುಗಳಿಲ್ಲ. ಅದರಿಂದ ಸಮಸ್ಯೆಯಾಗುತ್ತಿದೆ. ರೂ. 500ರ ನೋಟುಗಳು ಚಲಾವಣೆಗೆ ಬಂದರೆ ಪರಿಸ್ಥಿತಿ ಸುಧಾರಿಸುತ್ತದೆ. ಆದರೆ, ರೂ. 500ರ ನೋಟುಗಳು ಸಿಗುತ್ತಿಲ್ಲವೆಂದು ರಜನೀಶ್ ತಿಳಿಸಿದ್ದಾರೆ.
ಎಸ್‌ಬಿಐಯ 49 ಸಾವಿರ ಎಟಿಎಂಗಳಲ್ಲಿ 43 ಸಾವಿರ ಎಟಿಎಂಗಳನ್ನು ಮರು ಹೊಂದಾಣಿಕೆ ಮಾಡಲಾಗಿದೆ. ಎಸ್‌ಬಿಎಂನ ಎಟಿಎಂಗಳು ಪ್ರತಿ ದಿನ ರೂ. 17ರಿಂದ 19 ಸಾವಿರ ಕೋಟಿ ಹಂಚುತ್ತಿವೆಯೆಂದು ಅವರು ಹೇಳಿದ್ದಾರೆ.







