ನೋಟು ಗದ್ದಲ ಮುಂದುವರಿಕೆ: ಲೋಕಸಭೆ ಕಲಾಪ ಮುಂದೂಡಿಕೆ

ಹೊಸದಿಲ್ಲಿ, ಡಿ.5: ಯಾವ ನಿಯಮದಡಿ ನೋಟು ಅಮಾನ್ಯ ನಿರ್ಧಾರ ಕುರಿತ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕು ಎಂಬ ಬಗ್ಗೆ ನಿರ್ಧಾರಕ್ಕೆ ಬರಲಾಗದೆ ಲೋಕಸಭೆಯಲ್ಲಿ ದಿನದ ಕಲಾಪ ರದ್ದಾಯಿತು.
ನೋಟು ಅಮಾನ್ಯ ನಿರ್ಧಾರದ ಅನುಷ್ಠಾನದಲ್ಲಿ ಯಾವುದಾದರೂ ಕೊರತೆಯಾಗಿದ್ದರೆ ಈ ಕುರಿತು ವಿಪಕ್ಷಗಳು ನೀಡುವ ಸಲಹೆಯನ್ನು ಸ್ವೀಕರಿಸಲು ಸಿದ್ಧ ಎಂದು ಸರಕಾರ ತಿಳಿಸಿತು. ಯಾವ ನಿಯಮದಡಿ ಚರ್ಚೆ ನಡೆಸಬೇಕೆಂದು ಸ್ಪೀಕರ್ ನಿರ್ಧರಿಸಲಿ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಆದರೆ ನಿಮಯ 184ರಡಿ ಚರ್ಚೆ ನಡೆಯಬೇಕೆಂದು ವಿಪಕ್ಷಗಳು ಪಟ್ಟು ಹಿಡಿದವು. ಈ ನಿಯಮದಡಿಯ ಚರ್ಚೆಯಲ್ಲಿ ಧ್ವನಿಮತಕ್ಕೆ ಅವಕಾಶವಿದೆ. ಅದಾಗ್ಯೂ ಧ್ವನಿಮತಕ್ಕೆ ಅವಕಾಶ ನೀಡದ ನಿಯಮ 193ರಡಿ ಚರ್ಚೆ ನಡೆಯಲು ಯತ್ನ ನಡೆಯಿತು ಮತ್ತು ಟಿಆರ್‌ಎಸ್ ನಾಯಕ ಎ.ಪಿ.ಜಿತೇಂದರ್ ರೆಡ್ಡಿಯನ್ನು ಚರ್ಚೆ ಆರಂಭಿಸಲು ಸ್ವೀಕರ್ ಆಹ್ವಾನಿಸಿದರು. ಇದನ್ನು ವಿಪಕ್ಷಗಳು ಒಪ್ಪಲಿಲ್ಲ. ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಮಾತನಾಡಿ, ಕಳೆದ ಎರಡು ವಾರಗಳಿಂದ ನೋಟು ಅಮಾನ್ಯ ನಿರ್ಧಾರದ ಬಗ್ಗೆ ಸದಸ್ಯರು ಚರ್ಚೆಗೆ ಕಾಯುತ್ತಿದ್ದಾರೆ. ಈಗ ನಿಯಮ 193ರಡಿ ಚರ್ಚೆ ಆರಂಭಿಸಲಾಗಿದೆ ಎಂದರು.
ಜಿತೇಂದರ್ ರೆಡ್ಡಿ ಮಾತನಾಡಲು ಮುಂದಾದಾಗ ಅವರನ್ನು ಸುತ್ತುವರಿದ ತೃಣಮೂಲ ಕಾಂಗ್ರೆಸ್ ಸದಸ್ಯರು ಅವರ ಮೈಕ್ರೋಫೋನ್ ಎಳೆದುಕೊಂಡು ಘೋಷಣೆ ಕೂಗುತ್ತಾ ಗದ್ದಲ ಆರಂಭಿಸಿದರು. ಈ ಮಧ್ಯೆ ಸದನದ ಬಾವಿಗೆ ಇಳಿದ ಕಾಂಗ್ರೆಸ್ ಸದಸ್ಯರು ಸರಕಾರದ ವಿರುದ್ಧ ಘೋಷಣೆ ಆರಂಭಿಸಿದರು. ಈ ಗದ್ದಲದ ಮಧ್ಯೆ ರೆಡ್ಡಿ ಚರ್ಚೆ ಆರಂಭಿಸದರೂ ಅವರ ಮಾತು ಗದ್ದಲದಲ್ಲಿ ಮುಳುಗಿ ಹೋಯಿತು. ಅನಿವಾರ್ಯವಾಗಿ ಸದನದ ಕಲಾಪವನ್ನು ಅಪರಾಹ್ನ 2.10ಕ್ಕೆ ಮುಂದೂಡಲಾಯಿತು. ಕಲಾಪ ಮುಂದೂಡಿದ ಬಳಿಕ ರೆಡ್ಡಿಯರನ್ನು ಸುತ್ತುವರಿದಿದ್ದ ತೃಣಮೂಲ ಕಾಂಗ್ರೆಸ್ ಸದಸ್ಯರು ರೆಡ್ಡಿಯವರಿಗೆ ಹಸ್ತಲಾಘವ ನೀಡುತ್ತಿದ್ದುದು ಕಂಡು ಬಂದಿತು. ಬಳಿಕ ಗೃಹಸಚಿವ ರಾಜನಾಥ್ ಸಿಂಗ್ ಅವರ ಬಳಿ ಹೋದ ರೆಡ್ಡಿ ಕೆಲ ಹೊತ್ತು ಮಾತಾಡಿದರು.







