ಪಡಿತರ ಚೀಟಿಗೆ ಆಧಾರ್ ಸಂಖ್ಯೆ ಜೋಡಣೆ ಪ್ರಕ್ರಿಯೆ ಪೂರ್ಣಗೊಳಿಸಿ: ಸಚಿವ ಖಾದರ್
ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ

ಮಂಗಳೂರು, ಡಿ.5: ಪಡಿತರ ಚೀಟಿಯೊಂದಿಗೆ ಆಧಾರ್ ಸಂಖ್ಯೆ ಜೋಡಿಸುವ ಪ್ರಕ್ರಿಯೆಯು ಈ ತಿಂಗಳೊಳಗೆ ಪೂರ್ಣಗೊಳ್ಳಬೇಕು. ಬಾಕಿ ಇರುವ ಪಡಿತರ ಕಾರ್ಡ್‌ಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಯು.ಟಿ.ಖಾದರ್ ಸೂಚನೆ ನೀಡಿದ್ದಾರೆ.
ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಯಲ್ಲಿ ಅವರು ಮಾತನಾಡಿದರು.
ಗ್ರಾಮೀಣ ಭಾಗದಲ್ಲಿ ಪಡಿತರ ಪಡೆಯಲು ಜನತೆ ಸಾಕಷ್ಟು ದೂರ ಕ್ರಮಿಸಬೇಕಾದ ಸ್ಥಿತಿಯಿದೆ. ಹಾಗಾಗಿ ಆಹಾರ ಇಲಾಖೆಯು ಕಂದಾಯ ಅಧಿಕಾರಿಗಳ ಜೊತೆ ಸಮಾಲೋಚಿಸಿ ಜನತೆಗೆ ಅನುಕೂಲವಾಗುವಂತ ಸ್ಥಳಗಳಲ್ಲಿ ಪಡಿತರ ವಿತರಿಸುವ ವ್ಯವಸ್ಥೆ ಮಾಡಬೇಕು. 500ರಿಂದ 600 ಮಂದಿಗೆ ಒಂದು ಪಡಿತರ ಕೇಂದ್ರ ಇರಬೇಕಾದ ಅವಶ್ಯಕತೆ ಇದೆ. ಜನತೆ ಪಡಿತರಕ್ಕಾಗಿ ಮೈಲುಗಟ್ಟಲೆ ಕ್ರಮಿಸುವುದು ತಪ್ಪಬೇಕು ಎಂದು ಸಚಿವ ಖಾದರ್ ಹೇಳಿದರು.
ಉಪ್ಪಿನ ಬಣ್ಣ ಮುಖ್ಯವಲ್ಲ
ಕೆಲವೆಡೆ ಉಪ್ಪಿನ ಬಣ್ಣ ಬದಲಾವಣೆಯಿಂದ ಸಾರ್ವಜನಿಕರು ಆತಂಕಕ್ಕೊಳಗಾಗಿದ್ದಾರೆ. ಬಿಳಿ ಮತ್ತು ನೀಲಿ ಹಾಗೂ ಇತರ ಬಣ್ಣಗಳಲ್ಲಿ ಉಪ್ಪು ಪೂರೈಕೆಯಾಗುತ್ತಿದೆ. ಆದರೆ ಉಪ್ಪಿನ ರುಚಿಯಲ್ಲಿ ವ್ಯತ್ಯಾಸವಿಲ್ಲ. ಜನತೆಯಲ್ಲಿ ಗೊಂದಲ ಇರುವುದರಿಂದ ಆರೋಗ್ಯ ಇಲಾಖೆ ತಕ್ಷಣ ಜನತೆಯ ಸಂಶಯ ನಿವಾರಿಸುವ ಕೆಲಸವನ್ನು ಮಾಡಬೇಕು ಎಂದು ಖಾದರ್ ಸೂಚಿಸಿದರು.
ಉಳ್ಳಾಲ ಕೋಟೆಪುರದಲ್ಲಿ 3.50 ಕೋ.ರೂ. ವೆಚ್ಚದಲ್ಲಿ ಮೀನುಗಾರಿಕಾ ಜೆಟ್ಟಿ ಕಾಮಗಾರಿ ಪೂರ್ಣಗೊಂಡಿದೆ. ಹೂಳೆತ್ತುವ ಕೆಲಸ ನಡೆಯುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲಾಧಿಕಾರಿ ಡಾ.ಕೆ.ಜಿ. ಜಗದೀಶ್ ಮಾತನಾಡಿ, ಇಷ್ಟರಲ್ಲೇ ಡ್ರೆಜ್ಜಿಂಗ್ ಕೆಲಸ ಮುಗಿಯಬೇಕಿತ್ತು. ಇನ್ನೂ ಯಾಕೆ ವಿಳಂಬ ಮಾಡುತ್ತಿದ್ದೀರಿ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಪರ ಜಿಲ್ಲಾಧಿಕಾರಿ ಕುಮಾರ್, ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್ ಉಪಸ್ಥಿತರಿದ್ದರು.







