ಸಿಆರ್‌ಝೆಡ್ ವ್ಯಾಪ್ತಿಯ ಮಿತಿ ಇಳಿಕೆ: ಸೊರಕೆ ಭರವಸೆ

ಉಡುಪಿ, ಡಿ.5: ಉದ್ಯಾವರದಲ್ಲಿ ನೂತನವಾಗಿ ನಿರ್ಮಿಸಲಾದ 55 ಲಕ್ಷ ರೂ. ವೆಚ್ಚದ ಜೂನಿಯರ್ ಕಾಲೇಜು ಕಟ್ಟಡ, 28 ಲಕ್ಷ ರೂ. ವೆಚ್ಚದ ಪಶು ವೈದ್ಯಾಲಯ ಮತ್ತು 30 ಲಕ್ಷ ರೂ. ವೆಚ್ಚದ ಪ್ರಾಥಮಿಕ ಉಪ ಆರೋಗ್ಯ ಕೇಂದ್ರವನ್ನು ಕಾಪು ಶಾಸಕ ವಿನಯಕುಮಾರ್ ಸೊರಕೆ ಸೋಮವಾರ ಉದ್ಘಾಟಿಸಿದರು.
94ಸಿ ಮತ್ತು 94ಸಿಸಿ ಕಾಯಿದೆಯಡಿ ಅರ್ಜಿ ಸಲ್ಲಿಸಿರುವ ಫಲಾನುಭವಿ ಗಳಿಗೆ ಶೀಘ್ರದಲ್ಲೆ ಹಕ್ಕುಪತ್ರ ವಿತರಿಸಲಾಗುವುದು. ನಗರಸಭೆಗೆ 5ಕಿ.ಮೀ ವ್ಯಾಪ್ತಿಯೊಳಗೆ ಬರುವ ಅರ್ಜಿದಾರರಿಗೆ ಒಂದೂವರೆ ಸೆಂಟ್ಸ್ ಭೂಮಿ ನೀಡಬೇಕೆಂಬ ನಿಯಮವಿದ್ದು, ಅದನ್ನು ಮೂರು ಸೆಂಟ್ಸ್‌ಗೆ ಏರಿಸುವಂತೆ ಮತ್ತು ಗ್ರಾಮೀಣ ಪ್ರದೇಶದಲ್ಲಿನ ಫಲಾನುಭವಿಗಳಿಗೆ ಕನಿಷ್ಟ ಐದು ಸೆಂಟ್ಸ್ ಭೂಮಿ ನೀಡುವಂತೆ ಕಂದಾಯ ಸಚಿವರಿಗೆ ಮನವಿ ಮಾಡಲಾಗಿದೆ. ಇದಕ್ಕೆ ಸಚಿವರಿಂದ ತಾತ್ವಿಕ ಒಪ್ಪಿಗೆ ಸಿಕ್ಕಿದೆ ಎಂದು ವಿನಯ ಕುಮಾರ್ ಸೊರಕೆ ತಿಳಿಸಿದರು.
ಸಿಆರ್‌ಝಡ್ ವ್ಯಾಪ್ತಿ ಮಿತಿಯನ್ನು ಗೋವಾ, ಕೇರಳ ರಾಜ್ಯದಲ್ಲಿರುವಂತೆ 50 ಮೀ.ಗೆ ಸೀಮಿತಗೊಳಿಸುವ ರಾಜ್ಯ ಸರಕಾರದ ಇರಾದೆಗೆ ಪರಿಸರ ಇಲಾಖೆಯಿಂದ ಅನುಮೋದನೆ ದೊರೆತಿದೆ. ಅದನ್ನು ಪ್ರಧಾನ ಮಂತ್ರಿಯ ವರ ಅಂಕಿತ ಕಳುಹಿಸಿಕೊಡಲಾಗಿದೆ. ಇದರಿಂದ ಕಡಲ ತಡಿಯ ಅನೇಕ ಮಂದಿಯ ಭೂಮಿ ಮತ್ತು ಮನೆಗಳು ಸಿಂಧುಗೊಳ್ಳಲಿವೆ ಎಂದರು.
ಕಾಪು ಕ್ಷೇತ್ರ ವ್ಯಾಪ್ತಿಯಲ್ಲಿ 35 ಕೋಟಿ ವೆಚ್ಚದಲ್ಲಿ ಐದು ಸೇತುವೆಗಳು ನಿರ್ಮಾಣಗೊಳ್ಳಲಿದ್ದು, ಉದ್ಯಾವರ ಪಿತ್ರೋಡಿ ರಸ್ತೆಯನ್ನು ಸದ್ಯವೇ ಅಗಲೀಕರಣ ಮಾಡಲಾಗುವುದು. ಉದ್ಯಾವರದಲ್ಲಿ ದಿನದ 24 ಗಂಟೆಯೂ ಶುಧ್ಧ ಕುಡಿಯುವ ನೀರು ನೀಡುವ ಯೋಜನೆಗೆ ಯೋಜನೆ ರೂಪಿಲಾಗಿದೆ ಎಂದು ಅವರು ಹೇಳಿದರು.
ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು, ಆರ್.ಎಂ.ಎಸ್.ಸಿ. ಪ್ರವೀಣ್ ಶೆಟ್ಟಿ, ಉದ್ಯಾವರ ಗ್ರಾಪಂ ಅಧ್ಯಕ್ಷೆ ಸುಗಂಧಿ ಶೇಖರ್, ಉಪಾಧ್ಯಕ್ಷ ರಿಯಾಝ್ ಪಳ್ಳಿ, ತಾಪಂ ಸದಸ್ಯೆ ರಜನಿ ಆರ್., ಪಿ.ನಾಗರಾಜ್, ಸರ್ವೋ ತ್ತಮ ಉಡುಪ, ಡಾ.ಮೋಹನ್, ಕೃಷ್ಣ, ಕಿರಣ್ ಕುಮಾರ್ ಉದ್ಯಾವರ ಮೊದಲಾದವರು ಉಪಸ್ಥಿತರಿದ್ದರು.







