ರಿಕ್ಷಾಕ್ಕೆ ಬಸ್ ಢಿಕ್ಕಿ : ಚಾಲಕ ಸಾವು
6 ಮಂದಿಗೆ ಗಂಭೀರ ಗಾಯ
.jpg)
ಮುಲ್ಕಿ, ಡಿ.5: ಬಸ್ಸೊಂದು ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದು ರಿಕ್ಷಾ ಚಾಲಕ ಮೃತ ಪಟ್ಟು ಇಬ್ಬರು ಮಕ್ಕಳು ಸಹಿತ 6 ಮಂದಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗದ ಘಟನೆ ಹಳೆಯಂಗಡಿ ಬೊಳ್ಳೂರು ಜಂಕ್ಷನ್ ಬಳಿ ಸೋಮವಾರ ಸಂಜೆ ನಡೆದಿದೆ.
ಮೃತಪಟ್ಟ ರಿಕ್ಷಾ ಚಾಲಕನನ್ನು ಹಳೆಯಂಗಡಿ ಇಂದಿರಾನಗರ ನಿವಾಸಿ ಸಾದಿಕ್(35) ಎಂದು ಗುರುತಿಸಲಾಗಿದೆ.
ಪಕ್ಷಿಕೆರೆ ಸಮೀಪದ ಪಂಜ ಉಲ್ಯ ನಿವಾಸಿಗಳಾದ ರೀತಾ(32), ಉಮಾವತಿ(37), ಕಸ್ತೂರಿ ಪೂಜಾರಿ(34), ರೇಣುಕ(28), ದಿಶಾನ್(2), ವೈಭವ್(8) ಎಂಬವರು ಗಂಭೀರ ಗಾಯಗೊಂಡು ಸಮೀಪದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪಕ್ಷಿಕೆರೆ ಸಮೀಪದ ಪಂಜ ಉಲ್ಯ ನಿವಾಸಿಗಳನ್ನು ತನ್ನ ಆಟೋ ರಿಕ್ಷಾದಲ್ಲಿ ಸಮೀಪದ ತೋಕೂರು ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವಕ್ಕೆ ತೆರಳುತ್ತಿದ್ದ ವೇಳೆ , ಮಂಗಳೂರಿನಿಂದ ಕಿನ್ನಿಗೋಳಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಮುಂದಿನಿಂದ ಬರುತ್ತಿದ್ದ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಮುಂದಿನಿಂದ ಬರುತ್ತಿದ್ದ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ರಭಸಕ್ಕೆ ರಿಕ್ಷಾ ಸಂಪೂರ್ಣ ನಜ್ಜು ಗುಜ್ಜಾಗಿದೆ. ಘಟನೆಯಲ್ಲಿ ರಿಕ್ಷಾದಲ್ಲಿ ದೇವಸ್ಥಾನಕ್ಕೆ ತೆರಳುತ್ತಿದ್ದ ರೀತಾ, ಉಮಾವತಿ, ಕಸ್ತೂರಿ ಪೂಜಾರಿ, ರೇಣುಕ, ದಿಶಾನ್, ವೈಭವ್ ಸೇರಿ ರಿಕ್ಷಾ ಚಾಲಕ ಸಾದಿಕ್ ಗಂಭೀರ ಗಾಯಗೊಂಡು ರಿಕ್ಷಾದ ಒಳಭಾಗದಲ್ಲಿ ಸಿಲುಕಿಕೊಂಡಿದ್ದರು.
ತಕ್ಷಣ ಸ್ಥಳೀಯರು ಎಲ್ಲಾ ಗಾಯಗೊಂಡವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ, ತಲೆಯ ಭಾಗಕ್ಕೆ ಗಂಭೀರ ಗಾಯಗಳಾಗಿದ್ದ ಸಾದಿಕ್ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಬಸ್ ಚಾಲಕನ ಅತಿಯಾದ ವೇಗ ಮತ್ತು ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.







