ಜಿಲ್ಲೆಯ ರೈತರಿಗೆ ‘ಮಣ್ಣು ಆರೋಗ್ಯ ಕಾರ್ಡ್’ ವಿತರಣೆಗೆ ಕ್ರಮ: ಕೆಂಪೇಗೌಡ
ವಿಶ್ವ ಮಣ್ಣು ದಿನಾಚರಣೆ

ಮಂಗಳೂರು, ಡಿ.5: ದ.ಕ.ಜಿಲ್ಲೆಯ 2.09 ಲಕ್ಷ ರೈತ ಕುಟುಂಬಗಳಿದ್ದು, 2018ರ ಮಾರ್ಚ್‌ನೊಳಗೆ ಎಲ್ಲ ರೈತರಿಗೂ ಮಣ್ಣು ಆರೋಗ್ಯ ಕಾರ್ಡ್ ವಿತರಿಸಲು ಕ್ರಮ ಜರಗಿಸಲಾಗುವುದು ಎಂದು ಕೃಷಿ ಇಲಾಖೆಯ ಜಿಲ್ಲಾ ಜಂಟಿ ನಿರ್ದೇಶಕ ಕೆಂಪೇಗೌಡ ಎಚ್. ಹೇಳಿದ್ದಾರೆ.
ಐಸಿಎಆರ್- ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ, ಆತ್ಮ ಯೋಜನೆ ಹಾಗೂ ಜಿಪಂ ಸಂಯುಕ್ತ ಆಶ್ರಯದಲ್ಲಿ ನಗರದ ಎಕ್ಕೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಜರಗಿದ ‘ವಿಶ್ವ ಮಣ್ಣು ದಿನಾಚರಣೆ’ ಮತ್ತು ‘ಹಿಂಗಾರು ಪೂರ್ವ ಹಂಗಾಮು ಮಾಹಿತಿ ಕಾರ್ಯಕ್ರಮ’ದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಜಿಲ್ಲೆಯ 75 ಸಾವಿರ ಕುಟುಂಬಗಳ ಜಮೀನಿನ ಮಣ್ಣು ಪರೀಕ್ಷೆ ನಡೆಸಲಾಗಿದೆ. ಪ್ರತಿ 3 ವರ್ಷಕ್ಕೊಮ್ಮೆ ರೈತರ ಮಣ್ಣಿನ ಕಾರ್ಡುಗಳ ಮರು ಪರಿಶೀಲನೆ ನಡೆಸಲಾಗುವುದು. ಈ ಸಂದರ್ಭ ರೈತರ ಜಮೀನಿನ ಫಲವತ್ತತೆಯನ್ನು ದೃಢೀಕರಿಸುವ ಕಾರ್ಯ ನಡೆಯುತ್ತದೆ ಎಂದು ಕೆಂಪೇಗೌಡ ನುಡಿದರು.
ಮಣ್ಣು ಆರೋಗ್ಯ ಕಾರ್ಡು ಮನುಷ್ಯರ ಆರೋಗ್ಯ ಕಾರ್ಡಿನಷ್ಟೇ ಮಹತ್ವವಾಗಿದೆ. ಜಿಲ್ಲೆಯ ಮಣ್ಣು ಎಕರೆಗೆ 40 ಕ್ವಿಂಟಾಲ್‌ನಷ್ಟು ಭತ್ತದ ಇಳುವರಿ ಪಡೆಯುವ ಸಾಮರ್ಥ್ಯ ಹೊಂದಿದೆ. ಮಣ್ಣಿನ ಪರೀಕ್ಷೆ ನಡೆಸಿ ಪ್ರತಿ ರೈತರು ಅಗತ್ಯ ಪೋಷಕಾಂಶಗಳನ್ನು ತಮ್ಮ ಜಮೀನಿನ ಮಣ್ಣಿಗೆ ಸೇರಿಸಿ ಈಗ ದೊರೆಯುವ ಇಳುವರಿಯನ್ನು ದ್ವಿಗುಣಗೊಳಿಸಿಕೊಳ್ಳಲು ಅವಕಾಶವಿದೆ ಎಂದ ಕೆಂಪೇಗೌಡ, ಈ ವರ್ಷ ಭತ್ತದ ಮುಂಗಾರು ಹಂಗಾಮು ಬೆಳೆ ಉತ್ತಮವಾಗಿದೆ. ಮಳೆಯ ಪ್ರಮಾಣ ಕಡಿಮೆ ಇದ್ದರೂ ಭತ್ತದ ಬೆಳೆಗೆ ಅಗತ್ಯವಿರುವಷ್ಟು ಸರಾಸರಿ ಮಳೆ ಯಾಗಿದೆ. ದ.ಕ. ಜಿಲ್ಲೆಯಲ್ಲಿ ಎಕರೆಗೆ ಸರಾಸರಿ 18 ಕ್ವಿಂಟಾಲ್ ಭತ್ತ ಬೆಳೆಯಲಾಗುತ್ತಿದೆ ಎಂದರು.
ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಕಾರ್ಯಕ್ರಮ ಉದ್ಘಾಟಿಸಿದರು. ಮೀನುಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಂ.ಎನ್. ವೇಣುಗೋಪಾಲ್, ಕೃಷಿ ಸಮಾಜದ ಜಿಲ್ಲಾ ಅಧ್ಯಕ್ಷ ಸಂಪತ್ ಸಾಮ್ರಾಜ್ಯ ಮುಖ್ಯ ಅತಿಥಿಗಳಾಗಿದ್ದರು.
ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಮುಖ್ಯಸ್ಥ ಡಾ. ಶಿವಕುಮಾರ್ ಮಗದ ಸ್ವಾಗತಿಸಿದರು. ಮಣ್ಣು ತಜ್ಞೆ ಪುನೀತಾ ಬಿ.ಸಿ. ಕಾರ್ಯಕ್ರಮ ನಿರೂಪಿಸಿದರು.ತಜ್ಞರಾದ ಹರೀಶ್ ಶೆಣೈ, ತೇಜೇಶ ಎ.ಜಿ., ಡಾ.ಎಚ್. ಹನುಮಂತಪ್ಪ ಉಪಸ್ಥಿತರಿದ್ದರು.







