ಫಿಫಾ ಮಾಜಿ ಅಧ್ಯಕ್ಷ ಬ್ಲಾಟರ್ ವಿರುದ್ಧ ನಿಷೇಧ ಎತ್ತಿಹಿಡಿದ ನ್ಯಾಯಾಲಯ

ಲಾಸನ್, ಡಿ.5: ಬ್ರಹ್ಮಾಂಡ ಭ್ರಷ್ಟಾಚಾರ ಆರೋಪದಲ್ಲಿ ಫಿಫಾ ಮಾಜಿ ಅಧ್ಯಕ್ಷ ಸೆಪ್ ಬ್ಲಾಟರ್‌ಗೆ ವಿಧಿಸಲಾಗಿರುವ ಆರು ವರ್ಷಗಳ ನಿಷೇಧವನ್ನು ಕ್ರೀಡಾ ಪಂಚಾಯತಿ ನ್ಯಾಯಾಲಯ(ಸಿಎಎಸ್) ಎತ್ತಿ ಹಿಡಿದಿದೆ. ಈ ತೀರ್ಪು ಮತ್ತೊಮ್ಮೆ ಫಿಫಾ ಅಧ್ಯಕ್ಷನಾಗಬೇಕೆಂಬ ಬ್ಲಾಟರ್ ಆಸೆಗೆ ತಣ್ಣೀರೆರಚಿದೆ.
80ರ ಪ್ರಾಯದ ಬ್ಲಾಟರ್ 17 ವರ್ಷಗಳ ಕಾಲ ಜಾಗತಿಕ ಫುಟ್ಬಾಲ್ ಆಡಳಿತ ಮಂಡಳಿಯಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಭ್ರಷ್ಟಾಚಾರ ಆರೋಪದಲ್ಲಿ ಕಳೆದ ವರ್ಷ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದರು.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಬ್ಲಾಟರ್ ಹಾಗೂ ಯುರೋಪಿಯನ್ ಫುಟ್ಬಾಲ್‌ನ ಮುಖ್ಯಸ್ಥ ಮೈಕಲ್ ಪ್ಲಾಟಿನಿಗೆ ಫುಟ್ಬಾಲ್‌ಗೆ ಸಂಬಂಧಿಸಿದ ಭಾರೀ ಭ್ರಷ್ಟಾಚಾರ ಆರೋಪದಲ್ಲಿ ಫಿಫಾ ನಿಷೇಧ ಹೇರಿತ್ತು.
ಬ್ಲಾಟರ್ 2011ರಲ್ಲಿ ಫಿಫಾ ಉಪಾಧ್ಯಕ್ಷರಾಗಿದ್ದ ಪ್ಲಾಟಿನಿಗೆ 2 ಮಿಲಿಯನ್ ಡಾಲರ್ ಹಣ ಬಿಡುಗಡೆಗೆ ಅನುಮತಿ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. 2 ಮಿಲಿಯನ್ ಡಾಲರ್ ದಶಕಗಳ ಹಿಂದೆ ನಡೆದ ವೌಖಿಕ ಒಪ್ಪಂದ ಅನ್ವಯ ನಡೆದ ಗುತ್ತಿಗೆರಹಿತ ಸಂಭಾವನೆಯಾಗಿತ್ತು ಎಂದು ಬ್ಲಾಟರ್ ಹಾಗೂ ಪ್ಲಾಟಿನಿ ವಾದವಾಗಿದೆ.
ಆದರೆ, ವೇತನ ಒಪ್ಪಂದಕ್ಕೆ ಸಂಬಂಧಿಸಿ ಈ ಇಬ್ಬರು ನೀಡಿರುವ ವಿವರಣೆ ಬಗ್ಗೆ ಫಿಫಾ ಎಥಿಕ್ಸ್ ನ್ಯಾಯಾಧೀಶರು ಅನುಮಾನ ವ್ಯಕ್ತಪಡಿಸಿದ್ದಾರೆ.
‘‘ನನಗೆ ಫಿಫಾದಲ್ಲಿ 41 ವರ್ಷಗಳ ಅನುಭವವಿದೆ. ಕ್ರೀಡೆಯಲ್ಲಿ ಗೆಲುವು ಹಾಗೂ ಸೋಲು ಇರುತ್ತದೆ ಎಂಬ ಅಂಶವನ್ನು ನಾನು ಕಲಿತ್ತಿರುವೆ. ನಾನು ಫಿಫಾದ ಅಧ್ಯಕ್ಷನಾಗಿ ಫುಟ್ಬಾಲ್‌ಗೆ ಬೆಳವಣಿಗೆ ಸಾಧ್ಯವಿರುವಷ್ಟು ಕೊಡುಗೆ ನೀಡಿದ್ದೇನೆ. ನ್ಯಾಯಾಲಯದ ತೀರ್ಪನ್ನು ಸ್ವೀಕರಿಸಲು ಕಷ್ಟವಾಗುತ್ತಿದೆ. ಆದರೆ, ಪ್ರಕರಣದ ತನಿಖೆ ನಡೆಯುತ್ತಿರುವ ಕಾರಣ ಬೇರೆ ತೀರ್ಪನ್ನು ನಿರೀಕ್ಷಿಸಲು ಸಾಧ್ಯವಿಲ್ಲ’’ ಎಂದು ಬ್ಲಾಟರ್ ಹೇಳಿದ್ದಾರೆ.
ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಫಿಫಾದ ಗೌರವ ಅಧ್ಯಕ್ಷರಾಗುವ ಬ್ಲಾಟರ್ ವಿಶ್ವಾಸ ಕುಗ್ಗಿ ಹೋಗಿದೆ. ಬ್ಲಾಟರ್‌ಗೆ ಸಿಎಎಸ್ ತೀರ್ಪನ್ನು ಪ್ರಶ್ನಿಸಿ ಸ್ವಿಟ್ಝರ್ಲೆಂಡ್‌ನ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಬಹುದು.
ಪ್ಲಾಟಿನಿಗೆ ಮಂಜೂರು ಮಾಡಿರುವ ಹಣ, ವಿಶ್ವಕಪ್ ಟಿವಿ ಹಕ್ಕುಗಳ ಮಾರಾಟದಲ್ಲಿ ನಡೆದ ಅವ್ಯವಹಾರಕ್ಕೆ ಸಂಬಂಧಿಸಿ ಸ್ವಿಸ್‌ನ ಪ್ರಾಸಿಕ್ಯೂಟರ್ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಿಕೊಂಡಿದೆ.
ಪ್ಲಾಟಿನಿ ಈ ಹಿಂದೆ ಸಿಎಎಸ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ನ್ಯಾಯಾಲಯ ಪ್ಲಾಟಿನಿ ಅವರ ನಿಷೇಧದ ಅವಧಿಯನ್ನು ನಾಲ್ಕು ವರ್ಷಕ್ಕೆ ಕಡಿತಗೊಳಿಸಿತ್ತು.







