ತವರು ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ಆಡಲು ರಹಾನೆ ಸಿದ್ಧತೆ

ಮುಂಬೈ, ಡಿ.5: ಭಾರತ ಟೆಸ್ಟ್ ಕ್ರಿಕೆಟ್ ತಂಡದ ಉಪ ನಾಯಕ ಅಜಿಂಕ್ಯ ರಹಾನೆ ಗುರುವಾರ ತವರು ಮೈದಾನ ವಾಂಖೆಡೆ ಸ್ಟೇಡಿಯಂನಲ್ಲಿ ಮೊದಲ ಬಾರಿ ಟೆಸ್ಟ್ ಪಂದ್ಯವಾಡಲು ಸಜ್ಜಾಗುತ್ತಿದ್ದಾರೆ. ಈ ಪಂದ್ಯದಲ್ಲಿ ಕಳಪೆ ಫಾರ್ಮ್‌ನಿಂದ ಹೊರಬರಲು ಎದುರು ನೋಡುತ್ತಿದ್ದಾರೆ.
ಇಂಗ್ಲೆಂಡ್ ವಿರುದ್ಧ ಮೂರನೆ ಟೆಸ್ಟ್ ಪಂದ್ಯವನ್ನು ಜಯಿಸಿದ ಬಳಿಕ ಭಾರತೀಯ ಕ್ರಿಕೆಟ್ ತಂಡ ನಾಲ್ಕು ದಿನಗಳ ವಿಶ್ರಾಂತಿ ಪಡೆದಿದೆ. ಡಿ.8 ರಿಂದ ಮುಂಬೈನಲ್ಲಿ ಆರಂಭವಾಗಲಿರುವ ನಾಲ್ಕನೆ ಟೆಸ್ಟ್‌ನಲ್ಲಿ ಭಾಗವಹಿಸಲಿದೆ.
ನಾಲ್ಕು ದಿನಗಳ ವಿರಾಮದಲ್ಲಿ ಕೆಲವು ಆಟಗಾರರು ಮನೆಗೆ ತೆರಳಿದರೆ, ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಹಾಗೂ ಪಾರ್ಥಿವ್ ಪಟೇಲ್ ಗೋವಾದಲ್ಲಿ ಶುಕ್ರವಾರ ನಡೆದ ಯುವರಾಜ್ ಸಿಂಗ್‌ರ ಮದುವೆಗೆ ಹಾಜರಾಗಲು ತೆರಳಿದ್ದರು.
ಮೊಹಾಲಿಯಿಂದ ಮುಂಬೈಗೆ ಮರಳಿದ್ದ ರಹಾನೆ ಮೂರು ದಿನಗಳ ಕಾಲ ಸ್ವಂತ ತರಬೇತಿ ನಡೆಸಿದ್ದಾರೆ. ಶನಿವಾರ ಓಟದಲ್ಲಿ ಭಾಗವಹಿಸಿದ್ದ 28ರ ಪ್ರಾಯದ ರಹಾನೆ ರವಿವಾರ ಮುಂಬೈ ಕ್ರಿಕೆಟ್ ಸಂಸ್ಥೆ(ಎಂಸಿಎ)ಯ ಒಳಾಂಗಣ ಕ್ರಿಕೆಟ್ ಅಕಾಡೆಮಿಗೆ ಭೇಟಿ ನೀಡಿರು. ಕೋಚ್ ಪ್ರವೀಣ್ ಆಮ್ರೆ ಹದ್ದಿನ ಕಣ್ಣಿನಡಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದರು.
ಮುಂಬರುವ ಮುಂಬೈ ಟೆಸ್ಟ್‌ನಲ್ಲಿ ರಹಾನೆಗೆ ಕಳಪೆ ಫಾರ್ಮ್‌ನಿಂದ ಹೊರ ಬೇಕಾದ ಅಗತ್ಯವಿದೆ. ಮುಂಬೈಕರ್ ರಹಾನೆ ಇದೇ ಮೊದಲ ಬಾರಿ ತವರು ಮೈದಾನದಲ್ಲಿ ಟೆಸ್ಟ್ ಪಂದ್ಯ ಆಡುತ್ತಿದ್ದಾರೆ. ರಹಾನೆ ಈವರೆಗೆ 32 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ತಂಡದ ಮುಖ್ಯ ಆಟಗಾರನಾಗಿ ಹೊರಹೊಮ್ಮಿದ್ದರು.
ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಹಾನೆ ಎದುರಾಳಿ ತಡದ ವೇಗ, ಸ್ಪಿನ್, ಸ್ವಿಂಗ್ ಬೌಲಿಂಗ್‌ನ್ನು ದಿಟ್ಟವಾಗಿ ಎದುರಿಸಿದ್ದಾರೆ. ಭಾರತದಲ್ಲಿ 9 ವಿವಿಧ ತಾಣಗಳಲ್ಲಿ 11 ಟೆಸ್ಟ್ ಪಂದ್ಯಗಳನ್ನು ಆಡಿರುವ ರಹಾನೆ ತವರು ಮೈದಾನದಲ್ಲಿ ಮೊದಲ ಬಾರಿ ಆಡುವ ಅವಕಾಶ ಪಡೆದಿದ್ದಾರೆ. ಈ ಅವಕಾಶಕ್ಕಾಗಿ ಗುರುವಾರದ ತನಕ ಕಾಯಬೇಕಾಗಿದೆ.







