ಆಸ್ಟ್ರೇಲಿಯ ಟ್ವೆಂಟಿ-20 ತಂಡಕ್ಕೆ ಹಸ್ಸಿ ಕೋಚ್

ಮೆಲ್ಬೋರ್ನ್, ಡಿ.5: ಮಾಜಿ ಸ್ಟಾರ್ ಬ್ಯಾಟ್ಸ್‌ಮನ್ ಮೈಕಲ್ ಹಸ್ಸಿ ಶ್ರೀಲಂಕಾ ವಿರುದ್ಧ ಟ್ವೆಂಟಿ-20 ಅಂತಾರಾಷ್ಟ್ರೀಯ ಸರಣಿಗೆ ಆಸ್ಟ್ರೇಲಿಯದ ಹಂಗಾಮಿ ಕೋಚ್ ಆಗಿ ಆಯ್ಕೆಯಾಗಿದ್ದಾರೆ.
ಸ್ವದೇಶದಲ್ಲಿ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಗೆ ನಮಗೆ ಕೋಚ್ ಅಗತ್ಯವಿತ್ತು ಎಂದು ಕ್ರಿಕೆಟ್ ಆಸ್ಟ್ರೇಲಿಯ(ಸಿಎ) ದೃಢಪಡಿಸಿದೆ.
ಈ ವರ್ಷಾರಂಭದಲ್ಲಿ ಆಸ್ಟ್ರೇಲಿಯ ತಂಡ ಭಾರತಕ್ಕೆ ಟ್ವೆಂಟಿ-20 ವಿಶ್ವಕಪ್ ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ತೆರಳಿದ್ದಾಗ 79 ಟೆಸ್ಟ್ ಪಂದ್ಯಗಳನ್ನು ಆಡಿರುವ ಹಸ್ಸಿ ಆಸ್ಟ್ರೇಲಿಯದ ಬ್ಯಾಟಿಂಗ್ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.
‘‘ನನಗೆ ಕೋಚಿಂಗ್‌ನಲ್ಲಿ ತುಂಬಾ ಆಸಕ್ತಿಯಿದೆ. ಪೂರ್ಣಕಾಲಿಕ ಕೋಚ್ ಆಗಿ ಕಾರ್ಯನಿರ್ವಹಿಸುವ ಬಗ್ಗೆ ನನಗೆ ವಿಶ್ವಾಸವಿಲ್ಲ. ಅಂತಾರಾಷ್ಟ್ರೀಯ ತಂಡದಲ್ಲಿದ್ದರೆ, ವರ್ಷದಲ್ಲಿ 10 ತಿಂಗಳು ತಂಡದೊಂದಿಗೆ ಇರಬೇಕಾಗುತ್ತದೆ. ನಾನು ನಿವೃತ್ತಿಯಾಗಲು ಇದು ಮುಖ್ಯ ಕಾರಣವಾಗಿತ್ತು. ನಾನು ಮುಂದಿನ ದಿನಗಳಲ್ಲಿ ಸಲಹೆಗಾರನಾಗಿ ಕಾರ್ಯನಿರ್ವಹಿಸಲು ಬಯಸುವೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ವೆಬ್‌ಸೈಟ್‌ಗೆ ಸೋಮವಾರ ಹಸ್ಸಿ ತಿಳಿಸಿದ್ದಾರೆ.





