ನೀರು ನೀಡದ ಪಂಚಾಯತ್ ಅಧ್ಯಕ್ಷನ ವಿರುದ್ಧ ಪ್ರತಿಭಟನೆಗೆ ಸಿದ್ಧವಾದ ಗ್ರಾಮಸ್ಥರು

ವಿಟ್ಲ, ಡಿ.5 : ಇಲ್ಲಿನ ಪೆರುವಾಯಿ ಗ್ರಾಮ ಪಂಚಾಯತ್‍ನಲ್ಲಿ 27 ಬಡ ಕುಟುಂಬಗಳ ಕುಡಿಯುವ ನೀರಿನ ವ್ಯವಸ್ಥೆಗಾಗಿ ಕೊಳವೆ ಬಾವಿ ಕೊರೆಸಿದ್ದರೂ ಪಂಚಾಯತ್ ಅಲ್ಲಿನ ಪಂಚಾಯತ್ ಅಧ್ಯಕ್ಷರು ನೀರನ್ನು ಬೇರೆಡೆಗೆ ಸಾಗಿಸುವ ಮೂಲಕ ನಮಗೆ ವಂಚಿಸಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ಪೆರುವಾಯಿ ಗ್ರಾಮ ಪಂಚಾಯತ್‍ನ ಮುಚ್ಚಿರಪದವು ನವಗ್ರಾಮದಲ್ಲಿ ತೀರಾ ಬಡಕುಟುಂಬಗಳು ವಾಸಿಸುತ್ತಿದ್ದು, ಈವರೆಗೂ ಪ್ರತ್ಯೇಕ ನೀರಿನ ಸಂಪರ್ಕ ಒದಗಿಸಲು ಸಂಬಂಧಪಟ್ಟ ಗ್ರಾಮ ಪಂಚಾಯತ್‍ಗೆ ಸಾಧ್ಯವಾಗಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ.
ವರ್ಷದ ಹಿಂದೆ ಇಲ್ಲಿಗೆ ನೀರು ಪೂರೈಸಲು ಕೊಳವೆ ಬಾವಿ ಕೊರೆಸಿದ್ದರು. ಆದರೆ ಇದು ಅಳಿಕೆ ಗ್ರಾಮ ಪಂಚಾಯತ್ ವ್ಯಾಪಿತಿಗೆ ಸೇರಿತ್ತೆಂಬ ಕಾರಣಕ್ಕಾಗಿ ಪಂಚಾಯತ್‍ಗಳ ನಡುವೆ ವಿವಾದ ಎಬ್ಬಿತ್ತು. ನಂತರ ನವಗ್ರಾಮಕ್ಕೆ ನೀರು ನೀಡುವ ಸಲುವಾಗಿ ಎರಡೂ ಗ್ರಾಮ ಪಂಚಾಯತ್‍ಗಳು ಮಾತುಕತೆಯ ಮೂಲಕ ವಿವಾದ ಬಗೆಹರಿಸಿದ್ದವು.
ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಪೆರುವಾಯಿ ಪಂ. ಅಧ್ಯಕ್ಷ ರಾಲ್ಫ್ ಡಿ’ಸೋಜ ಎಂಬವರು ನವಗ್ರಾಮಗಳಿಗೆ ನೀರು ಒದಗಿಸುವ ಬದಲು ಪೆರುವಾಯಿ ಪೇಟೆಯ ಕೆಲವೊಂದು ಕಡೆ ನೀರು ಸರಬರಾಜು ಮಾಡುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ.
ಇದರಿಂದ ನವಗ್ರಾಮದ ಕುಟುಂಬಗಳಿಗೆ ಕುಡಿಯಲು ನೀರು ಇಲ್ಲದಂತ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಅಧ್ಯಕ್ಷರ ಒಡೆದು ಆಳುವ ನೀತಿಯಿಂದ ರೊಚ್ಚಿಗೆದ್ದ ಸ್ಥಳೀಯರು ಮಂಗಳವಾರ ಪೆರುವಾಯಿ ಗ್ರಾ.ಪಂ ಮುಂದೆ ಪ್ರತಿಭಟನೆ ನಡೆಸಲು ಸಿದ್ದರಾಗಿದ್ದಾರೆ.







