ಗಡ್ಕರಿ ಪುತ್ರಿಯ ಅದ್ದೂರಿ ಮದುವೆ: ಖರ್ಚು ವಿವರ ಬಹಿರಂಗಗೊಳಿಸಲು ಕಾಂಗ್ರೆಸ್ ಆಗ್ರಹ

ಹೊಸದಿಲ್ಲಿ, ಡಿ.5: ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಪುತ್ರಿಯ ವಿವಾಹ ಸಮಾರಂಭಕ್ಕೆ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ವೆಚ್ಚದ ವಿವರ ಬಹಿರಂಗಗೊಳಿಸಬೇಕು ಎಂದು ಆಗ್ರಹಿಸಿದೆ.
ಇದೊಂದು ದುಂದುವೆಚ್ಚದ ಮದುವೆ ಎಂದು ಕಾಂಗ್ರೆಸ್ ವಕ್ತಾರ ಗೌರವ್ ಗಗೋಯಿ ಹೇಳಿದ್ದು, ಪಾರದರ್ಶಕತೆಯ ಮಾತಾಡುತ್ತಿರುವ ಪ್ರಧಾನಿ ಮೋದಿಯವರ ನಿಲುವಿಗೆ ಇಂತಹ ವಿವಾಹಗಳು ಸರಿಹೊಂದುತ್ತವೆಯೇ ಎಂದು ಪ್ರಶ್ನಿಸಿದ್ದಾರೆ.
ದುಬಾರಿ ವೆಚ್ಚದ ಈ ಮದುವೆಗೆ ಹಣ ಎಲ್ಲಿಂದ ಬಂದಿದೆ. ಯಾರಿಗೆ ಎಷ್ಟು ಪಾವತಿಯಾಗಿದೆ. ಪಾವತಿಯಾದ ಮೊತ್ತದಲ್ಲಿ ನಗದು ಎಷ್ಟು, ಚೆಕ್ ಮೂಲಕ ಎಷ್ಟು ಎಂಬುದನ್ನು ಬಿಜೆಪಿ ಮುಖಂಡರು ವಿವರಿಸಬೇಕಿದೆ. ವಿವಾಹಕ್ಕೆ ಖರ್ಚು ಮಾಡುವ ಮೊತ್ತವನ್ನು ಇದೇ ಬಿಜೆಪಿ ಸರಕಾರ 2.5 ಲಕ್ಷ ರೂ. ಎಂದು ಮಿತಿಗೊಳಿಸಿದೆ. ಹೀಗಿರುವಾಗ ಅದ್ದೂರಿಯ ಮದುವೆ ನಡೆಸಬಾರದು ಎಂದು ಸರಕಾರ ಸಚಿವರಿಗೆ ಯಾಕೆ ತಿಳಿಸಲಿಲ್ಲ. ಬಿಜೆಪಿ ನಾಯಕರಿಗೆ ಒಂದು ನಿಯಮ, ದೇಶದ ಜನತೆಗೆ ಒಂದು ನಿಯಮ ಎಂಬ ತಾರತಮ್ಯವಿದೆಯೇ ಎಂದವರು ಪ್ರಶ್ನಿಸಿದರು.
2.5 ಲಕ್ಷ ಹಣದಲ್ಲಿ ವಿವಾಹ ಮುಗಿಸಲು ಜನಸಾಮಾನ್ಯರು ಹೆಣಗಾಡುತ್ತಿದ್ದಾರೆ. ಈ ಜನರ ಭಾವನೆಯನ್ನು ಸರಕಾರ ಅರ್ಥೈಸಿಕೊಳ್ಳಬೇಕಿದೆ. ಹೋಟೆಲ್‌ಗಳಲ್ಲಿ ಸಭೆ ನಡೆಸಬಾರದು ಎಂದು ಪ್ರಧಾನಿ ಹೇಳಿದ್ದಾರೆ. ಅದಾಗ್ಯೂ 5 ಸ್ಟಾರ್ ಹೋಟೆಲ್‌ನಲ್ಲಿ ಬಿಜೆಪಿ ನಾಯಕರು ರೂಂ ಕಾದಿರಿಸಿರುವುದು ಸರಿಯಲ್ಲ ಎಂದು ಹೇಳಿದರು.
ಕೇರಳದಲ್ಲಿ ಕಾಂಗ್ರೆಸ್‌ನ ಹಿರಿಯ ನಾಯಕರೋರ್ವರ ಮನೆಯಲ್ಲಿ ಕೂಡಾ ಅದ್ದೂರಿ ಮದುವೆ ನಡೆದಿದೆ . ಇದರ ಖರ್ಚಿನ ವಿವರ ಬಹಿರಂಗಗೊಳಿಸುವಂತೆ ಅವರನ್ನು ಕೇಳುತ್ತೀರಾ ಎಂಬ ಪ್ರಶ್ನೆಗೆ , ಮೊದಲು ಬಿಜೆಪಿ ನುಡಿದಂತೆ ನಡೆಯಲಿ ಎಂದಷ್ಟೇ ಉತ್ತರಿಸಿದರು. ಇದು ಮದುವೆಯ ಸೀಸನ್. ಜನರಲ್ಲಿ ಖುಷಿ ಮತ್ತು ಸಂತಸ ತುಂಬಿರುವ ಸಮಯ. ನೋಟು ಅಮಾನ್ಯದ ನಿರ್ಧಾರದಿಂದ ಇವರ ಕನಸಿಗೆ ಪ್ರಧಾನಿ ಮೋದಿ ಕೊಳ್ಳಿ ಇಟ್ಟಿದ್ದಾರೆ ಎಂದು ಗೊಗೊಯ್ ಹೇಳಿದರು.







