Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ‘ದಿಗಂಬರ’ದ ಹಸ್ತಪ್ರತಿ ಕಾಣುತ್ತಿಲ್ಲ!

‘ದಿಗಂಬರ’ದ ಹಸ್ತಪ್ರತಿ ಕಾಣುತ್ತಿಲ್ಲ!

ವಾರ್ತಾಭಾರತಿವಾರ್ತಾಭಾರತಿ6 Dec 2016 12:12 AM IST
share
‘ದಿಗಂಬರ’ದ ಹಸ್ತಪ್ರತಿ ಕಾಣುತ್ತಿಲ್ಲ!

ಚಿತ್ತಾಲರ ಕೊನೆಯ ಅಪ್ರಕಟಿತ ಕಾದಂಬರಿಯ ಹಸ್ತಪ್ರತಿ ಎಲ್ಲಿದೆ?

ಹಿಂಸೆಯ ಕಡಿವಾಣಕ್ಕೆ ಸಾಹಿತ್ಯ ಮತ್ತು ವಿಜ್ಞಾನ ಎರಡೂ ಅವಶ್ಯ ಎಂದು ಬಲವಾಗಿ ನಂಬಿಕೊಂಡು ಬಂದಿದ್ದ ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಉಂಬೈಯ ಯಶವಂತ ಚಿತ್ತಾಲರೂ ಒಬ್ಬರು. ಬಾಂದ್ರಾದ ಲೀಲಾವತಿ ಆಸ್ಪತ್ರೆಯಲ್ಲಿ ಅಲ್ಪಕಾಲದ ಅಸೌಖ್ಯದಿಂದ ಮಾರ್ಚ್ 22, 2014ರಂದು ಚಿತ್ತಾಲರು ನಮ್ಮನ್ನೆಲ್ಲ ಅಗಲಿದ್ದರು. ಈ ಘಟನೆ ನಡೆದು ಮೂರು ವರ್ಷವಾಗುತ್ತಾ ಬರುತ್ತಿದೆ.

ಯಶವಂತ ಚಿತ್ತಾಲರು 86ನೆ ವರ್ಷಕ್ಕೆ ಕಾಲಿರಿಸಿದಾಗ (ಆಗಸ್ಟ್ 3, 2013) ನಾವು ಕರ್ನಾಟಕ ಸಂಘದ ಪರವಾಗಿ ಅವರ ಬಾಂದ್ರಾದ ಮನೆಗೆ ತೆರಳಿ ಹುಟ್ಟುಹಬ್ಬದ ಶುಭಾಶಯವನ್ನು ಹೇಳಿ ಬಂದಿದ್ದೆವು. ಆ ದಿನ ಅವರ ಜೊತೆ ಬಹಳಷ್ಟು ಹೊತ್ತು ಮಾತನಾಡಿದ್ದೆವು. ಅವರ ಹೊಸ ‘ಲಬಸಾ’ ‘ಮುದಿತನದ ಭಯದ ಕುರಿತು’ ಕೇಳಿಸಿಕೊಂಡೆವು. ಅದೇ ರೀತಿ ಹೊಸ ಕಾದಂಬರಿ ದಿಗಂಬರ ಬಗ್ಗೆಯೂ ಚರ್ಚಿಸಿದ್ದೆವು. ವಾರ್ತಾ ಭಾರತಿಯ ಗೆಳೆಯ ಬಿ.ಎಂ. ಬಶೀರ್ ಅವರ ಕೋರಿಕೆಯಂತೆ ಸಾಪ್ತಾಹಿಕ ಭಾರತಿಗೆ (ಆಗಸ್ಟ್ 14, 2011) ಚಿತ್ತಾಲರ ದಿಗಂಬರ ಕಾದಂಬರಿಯ ಬಗ್ಗೆ ಆಗಲೇ ನಾನು ಚಿತ್ತಾಲರನ್ನು ಭೇಟಿಯಾಗಿ ಲೇಖನ ಬರೆದುದನ್ನು ಆ ಸಂದರ್ಭದಲ್ಲಿ ಮತ್ತೆ ನೆನಪಿಸಿಕೊಂಡು ಕಾದಂಬರಿಯ ಮುಂದಿನ ಬೆಳವಣಿಗೆ ಎಷ್ಟಾಗಿದೆ ಎನ್ನುವುದನ್ನೂ ಅಂದು ಚಿತ್ತಾಲರಲ್ಲಿ ವಿಚಾರಿಸಿದ್ದೆವು. ಆಗ ಚಿತ್ತಾಲರು ಹೇಳಿದ್ದ ಮಾತು ಹೀಗಿತ್ತು: ‘‘ಮೇ, 2010ರ ನಂತರ ತಾನು ಮನೆಯಿಂದ ಹೊರಗಡೆ ಹೋಗಿಲ್ಲ. ಕಳೆದ ಮೂರು ವರ್ಷಗಳಿಂದ ತಾನು ಮನೆಯೊಳಗಿದ್ದೇ ಸಾಹಿತ್ಯ ಕೃತಿ ರಚನೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದೇನೆ. ತನ್ನ ಹೊಸ ಕಾದಂಬರಿ ‘ದಿಗಂಬರ’ ಸುಮಾರು 39 ಅಧ್ಯಾಯಗಳಷ್ಟು ಬರೆದಿರುವೆ. ಆದರೆ ಇನ್ನೂ ಸುಮಾರು 15-20 ಅಧ್ಯಾಯಗಳು ಬಾಕಿ ಇವೆ. ಮುಂದಿನ ಘಟನೆಗಳು ಹೊಳೆದ ತಕ್ಷಣ ಕಾದಂಬರಿ ಮುಂದುವರಿಸುವೆ. ಒಂದು ವೇಳೆ ಅದಕ್ಕಿಂತ ಮೊದಲು ನಾನಿಲ್ಲವಾದರೆ ಅರ್ಧದಷ್ಟು ಬರೆದಿರುವ ಈ ಕಾದಂಬರಿಯನ್ನು ಯಾರೂ ಪ್ರಕಟಮಾಡಬಾರದು ಎಂದಿರುವೆ ಎಂಬ ಮಾತನ್ನು ಹೇಳಿದ್ದರು. ಅದು ವಾರ್ತಾ ಭಾರತಿಯಲ್ಲೂ ಅವರ ನಿಧನದ ನಂತರ ಸಾಪ್ತಾಹಿಕ ಭಾರತಿಯ 30 ಮಾರ್ಚ್, 2014ರ ಸಂಚಿಕೆಯಲ್ಲಿ ‘‘ಮರೆಯಾದ ಚಿತ್ತಾಲರ ಜೊತೆಗಿನ ಕೆಲವು ನೆನಪುಗಳು’’ ಎಂಬ ಲೇಖನದಲ್ಲಿ ಬರೆದಿದ್ದೆ.

‘‘ಪ್ರಾಣಿಗಳು ಆಹಾರಕ್ಕಾಗಿ ಮತ್ತೊಂದನ್ನು ಕೊಲ್ಲುತ್ತವೆ. ಆದರೆ ಮನುಷ್ಯ ಇಂದು ಕೊಲ್ಲುವ ಸುಖಕ್ಕಾಗಿ ಕೊಲ್ಲುತ್ತಿದ್ದಾನೆ. ಮನುಷ್ಯ ಇಂದು ಕಡು ಭ್ರಷ್ಟನಾಗಿದ್ದಾನೆ’’ ಎಂದು ಕೊನೆಯ ದಿನಗಳಲ್ಲೂ ಅವರು ವಿಷಾದದಿಂದ ಹೇಳುತ್ತಿದ್ದರು. ಇದೇ ಸಮಯ ಸಾಹಿತ್ಯಕ್ಕೆ ಏನು ಸಾಧ್ಯವಿದೆಯೋ ಅದನ್ನು ಮಾತ್ರ ಮಾಡಬಹುದು. ಸಾಹಿತ್ಯಕ್ಕೆ ಏನು ಸಾಧ್ಯವಿಲ್ಲವೋ ಅದನ್ನು ಮಾಡಲು ಹೋಗಬಾರದು. ಭಾಷೆಗೆ ಎಲ್ಲವೂ ಸಾಧ್ಯವಿಲ್ಲ. ಸಾಧ್ಯವಿಲ್ಲದ್ದನ್ನು ಸಾಹಿತ್ಯದಿಂದ ನಿರೀಕ್ಷೆ ಮಾಡಬೇಡಿ. ಹಾಗಾಗಿ ಸಾಹಿತ್ಯ ಮಾಡಲಾಗದ್ದನ್ನು ವಿಜ್ಞಾನ ಮಾಡುತ್ತದೆ. ಇಂದು ಸಾಹಿತ್ಯ ಮತ್ತು ವಿಜ್ಞಾನ ಎರಡೂ ಬೇಕು. ಆವಾಗ ಹಿಂಸೆಗೆ ಸ್ವಲ್ಪಕಡಿವಾಣ ಬೀಳಬಹುದು ಎಂದು ಚಿತ್ತಾಲರು ನಮ್ಮ ಜೊತೆ ಹಂಚಿಕೊಂಡಿದ್ದರು ತಮ್ಮ ಕೊನೆಯ 2013ರ (ಆಗಸ್ಟ್ 3) ಹುಟ್ಟುಹಬ್ಬದ ದಿನ. ‘‘ದಿಗಂಬರ ಅಂದರೆ ಬದುಕಿನಲ್ಲಿ ಎಲ್ಲವನ್ನೂ ಪಡೆದ ನಂತರ ಆಸ್ತಿಪಾಸ್ತಿ ಸಂಪತ್ತು ಸಂಗ್ರಹ ಕೊನೆಗೆ ಎಲ್ಲ ಬಿಟ್ಟು ಕೊಡುವುದು, ನಗ್ನ ಆಗುವುದು. ಹದಿನಾಲ್ಕು ವರ್ಷದ ವನವಾಸವನ್ನು ನೆನಪಿಸುವ ದಂಪತಿ ಇಲ್ಲಿದ್ದಾರೆ. ದಿಗಂಬರದಲ್ಲಿ ಹೊಸತನ್ನು ಹೇಳಲು ಹೊರಟಿದ್ದೇನೆ.......ಇತ್ಯಾದಿ ಇತ್ಯಾದಿ’’ ಎಂದಿದ್ದರು ಚಿತ್ತಾಲರು.

ಬಾಂದ್ರಾದ ಬ್ಯಾಂಡ್ ಸ್ಟ್ಯಾಂಡಿನ ಬಂಡೆಗಳ ಎದುರು ತನ್ನ ಮನೆಯಲ್ಲಿ ಕನ್ನಡದ ಹೆಮ್ಮೆಯ ಕಾದಂಬರಿಕಾರ ಯಶವಂತ ಚಿತ್ತಾಲರು ಬಾಲ್ಕನಿಯಲ್ಲಿ ಕುಳಿತು ದಿಗಂಬರ ಕಾದಂಬರಿಯ ಕುರಿತಂತೆ ಮಾತನಾಡುತ್ತಿದ್ದರೆ ಅಂದು ನಾವು ಮೈಯೆಲ್ಲ ಕಿವಿಯಾಗಿ ಕೇಳುತ್ತಿದ್ದೆವು. ಚಿತ್ತಾಲರ ಮನೆಯಲ್ಲಿ ಯಾರಿಗೂ ಕನ್ನಡ ಬರುವುದಿಲ್ಲ. ಆದರೂ ಕಳೆದ ಮೂರೂವರೆ ದಶಕಗಳಿಂದ ಚಿತ್ತಾಲರ ಮನೆಗೆ ನಾನು ನೂರಾರು ಬಾರಿ ಹೋಗಿದ್ದೆ. ಅವರ ಮನೆಯವರ ಜೊತೆ ಚೆನ್ನಾಗಿ ಪರಿಚಯವಿದೆ. ಅವರ ಮೊಮ್ಮಗ ಅಭಿನಂದನ್ ಚಿಕ್ಕವನಿದ್ದಾಗ ನಾನು ಅವರ ಮನೆಗೆ ಹೋದಾಗಲೆಲ್ಲ ಅವನ ಜೊತೆ ಕ್ರಿಕೆಟ್ ಆಡುವಂತೆ ಒತ್ತಾಯಿಸುತ್ತಿದ್ದಾಗ ನಾನು ಅವನಿಗೆ ಬೌಲಿಂಗ್ ಮಾಡುತ್ತಿದ್ದೆ. ಈಗ ಅವನು ಎಂ.ಬಿ.ಬಿ.ಎಸ್. ಓದುತ್ತಿದ್ದಾನೆ.

ಚಿತ್ತಾಲರ ನಿಧನದ ಬಹಳ ದಿನಗಳ ನಂತರ ಕಳೆದ ರವಿವಾರದಂದು ಅವರ ಮನೆಗೆ ಭೇಟಿ ನೀಡಿದೆ. ಫೋನ್ ಮಾಡಿ ಚಿತ್ತಾಲರ ಮನೆಯವರಿಗೆ ಬರುತ್ತೇನೆ ಎಂದಿದ್ದೆ. ನಾವು ದಂಪತಿ ವಿವಾಹದ ಬಳಿಕ ಚಿತ್ತಾಲರ ಮನೆಗೊಮ್ಮೆ ಹೋಗಿದ್ದಾಗ ನನ್ನ ಪತ್ನಿ ಜಯಲಕ್ಷ್ಮ್ಮೀಗೆ ‘ದಣಪೆಯಾಚೆಯ ಓಣಿ’ಯ ಜೊತೆಗೆ ಅವರ ‘ಲಬಸಾ’ ಕೃತಿಯನ್ನು ನೀಡಿ ‘ಓದಬೇಕು ನೀವು’ ಎಂದು ಹೇಳಿದ್ದರು. ಚಿತ್ತಾಲರ ಮನೆಯವರಿಗೆ ಕನ್ನಡ ಬಾರದೇ ಇರುವುದರಿಂದ ಮತ್ತು ಅವರ ಜೊತೆ ಎಂದಿಗೂ ನಾನು ಸಾಹಿತ್ಯದ ಚರ್ಚೆ ಮಾಡದೇ ಇರುವುದರಿಂದ ಚಿತ್ತಾಲರ ನಿಧನದ ನಂತರ ಅಲ್ಲಿಗೆ ಹೋಗೋದಕ್ಕೆ ಸ್ವಲ್ಪಸಂಕೋಚವೂ ಆಗಿತ್ತು. ಜೊತೆಗೆ ಅವರ ಮನೆಗೆ ಹೋಗುವ ಪ್ರಸಂಗವೂ ಬಂದಿರಲಿಲ್ಲ. ಚಿತ್ತಾಲರ ನಿಧನದ 32 ತಿಂಗಳ ನಂತರ ಮೊನ್ನೆ ರವಿವಾರ ಮತ್ತೆ ಬ್ಯಾಂಡ್‌ಸ್ಟ್ಯಾಂಡ್‌ನ ಅವರ ಮನೆಗೆ ನಾವು ದಂಪತಿ ಹೋದೆವು. ನನಗೆ ಮುಖ್ಯವಾಗಿ ಚಿತ್ತಾಲರ ಪತ್ರಗಳ ಫೈಲುಗಳೆಲ್ಲ ಏನಾದವು? ಹಾಗೂ ಅವರ ಕೊನೆಯ ಕಾದಂಬರಿ ‘ದಿಗಂಬರ’ದ ಕುರಿತು ವಿಚಾರಿಸಬೇಕಿತ್ತು. ಯಾರಾದರೂ ಪ್ರಕಾಶಕರು ಮುಂದೆ ಬಂದರೋ ಕೇಳಬೇಕಿತ್ತು. ಅದರ ಹಸ್ತಪ್ರತಿಯನ್ನು ಕಾಣಬೇಕಿತ್ತು. ಯಾಕೆಂದರೆ ‘‘ದಿಗಂಬರ ಪೂರ್ಣಗೊಳ್ಳದಿದ್ದರೆ ಪ್ರಕಟಿಸಬಾರದು’’ ಎಂದು ಚಿತ್ತಾಲರು ಅಂದು ಹೇಳಿದ್ದ ಮಾತು ನಾನು ಮರೆತಿರಲಿಲ್ಲ..............

ಬ್ಯಾಂಡ್‌ಸ್ಟ್ಯಾಂಡ್‌ನಲ್ಲಿ ರಿಕ್ಷಾ ಇಳಿದಾಗ ಹಳೆಯದೆಲ್ಲ ನೆನಪಾಗುತ್ತಿತ್ತು. ಆ ದಿನಗಳಲ್ಲಿ ಚಿತ್ತಾಲರ ಮನೆಯ ಬಾಲ್ಕನಿಯಲ್ಲಿ ಕುಳಿತಾಗ ಬ್ಯಾಂಡ್‌ಸ್ಟ್ಯಾಂಡ್ ಬೀಚ್‌ನ ಆ ರಮಣೀಯ ದೃಶ್ಯದತ್ತಲೇ ಆಗಾಗ ನಮ್ಮ ಗಮನ ಹೋಗುತ್ತಿತ್ತು. ಚಿತ್ತಾಲರು ಗಂಭೀರವಾಗಿಯೇ ಅಂದು ತಮ್ಮ ಬರಹಗಳನ್ನು ಓದುತ್ತಿದ್ದರು........
ನಾವು ಬರುತ್ತೇವೆ ಎಂದು ಮೊದಲೇ ತಿಳಿಸಿದ್ದರಿಂದ ಚಿತ್ತಾಲರ ಪುತ್ರ ರವೀಂದ್ರ, ಸೊಸೆ, ಮೊಮ್ಮಗ ಅಭಿನಂದನ್ ಹಾಗೂ ಚಿತ್ತಾಲರ ಪತ್ನಿ ಮಾಲತಿ ಚಿತ್ತಾಲ ಎಲ್ಲರೂ ಸಂಜೆಗೆ ನಮ್ಮ ದಾರಿ ಕಾಯುತ್ತಿದ್ದರು.
ಚೊಕ್ಕವಾಗಿ ಜೋಡಿಸಿಟ್ಟ ಚಿತ್ತಾಲರ ಕಾದಂಬರಿಗಳ ಕಪಾಟನ್ನು ಪುತ್ರ ರವೀಂದ್ರ ದಂಪತಿ ತೋರಿಸುತ್ತಾ, ಚಿತ್ತಾಲರ ಬೆರಳಚ್ಚುಗಳು ಇನ್ನೂ ಆ ಪುಸ್ತಕಗಳ ಮೇಲೆ ಹಾಗೇನೇ ಇವೆ ಎಂದರು.

ಚಿತ್ತಾಲರು ತಮ್ಮ ಅನೇಕ ಕೃತಿಗಳ ಮೊದಲ ಮುದ್ರಣವನ್ನು ನನಗೆ ಕೊಡುತ್ತಿದ್ದರು. ಈಗ ಅವೆಲ್ಲಾ ಐದು ಮುದ್ರಣ, ಏಳು ಮುದ್ರಣ, ಒಂಭತ್ತು ಮುದ್ರಣಗಳನ್ನು ಕಂಡಿವೆ. ಅವರ ಎಲ್ಲಾ ಪುಸ್ತಕಗಳನ್ನು ಪುತ್ರ ರವೀಂದ್ರರು ಅಚ್ಚುಕಟ್ಟಾಗಿ ಜೋಡಿಸಿದ್ದರು. ‘‘ಅಪ್ಪನಿಗೆ ಪುಸ್ತಕಗಳನ್ನು ಬಹಳ ನೀಟಾಗಿ ಇರಿಸಬೇಕು. ಕೈಯಲ್ಲಿ ಹಿಡಿಯುವಾಗಲೂ ಏನಾದರೂ ಬಗ್ಗಿಸಿದರೆ ಸಿಟ್ಟಾಗುತ್ತಿದ್ದರು’’ ಎಂದು ತಮ್ಮ ತಂದೆಯ ಶಿಸ್ತನ್ನು ರವೀಂದ್ರರು ನೆನಪಿಸಿಕೊಂಡರು. ಚಿತ್ತಾಲರ ಈ ತನಕದ ಎಲ್ಲಾ ಕೃತಿಗಳ ಹೆಸರನ್ನೂ, ಇಸವಿ ಇತ್ಯಾದಿಗಳನ್ನು ರವೀಂದ್ರರು ಹಸನ್ಮುಖರಾಗಿ ನನಗೆ ಒದಗಿಸಿದರು.
 ಚಹ, ತಿಂಡಿಯ ನಂತರ ನಾನು ಮುಖ್ಯವಾದ ವಿಷಯಕ್ಕೆ ಬಂದೆ. ಅಪ್ರಕಟಿತ ‘ದಿಗಂಬರ’ದ ಹಸ್ತಪ್ರತಿ ಎಲ್ಲಿದೆ? ಯಾರಾದರೂ ಪ್ರಕಾಶಕರು ಅದನ್ನು ಪ್ರಕಟಿಸಲು ಕೇಳಿರುವರಾ....? ಇತ್ಯಾದಿ ವಿಚಾರಿಸಿದೆ.

ಆಗಲೇ ಆಶ್ಚರ್ಯಕರ ಸಂಗತಿ ತಿಳಿದು ಬಂದದ್ದು -ಚಿತ್ತಾಲರ ದಿಗಂಬರ ಕಾದಂಬರಿಯ ಹಸ್ತಪ್ರತಿ ಈವಾಗ ಮನೆಯವರಿಗೆ ಸಿಗುತ್ತಿಲ್ಲವಂತೆ! ಅರೆ! ಚಿತ್ತಾಲರ ನಿಧನವಾಗಿ ಎರಡೂವರೆ ವರ್ಷಕ್ಕೂ ಹೆಚ್ಚಾಗಿದೆ. ಮನೆಯಲ್ಲಿದ್ದ ಹಸ್ತಪ್ರತಿಯು ಸಿಗುತ್ತಿಲ್ಲವೆಂದರೆ...? ‘‘ಎಲ್ಲಾ ಹುಡುಕಿದೆವು, ಎಲ್ಲೂ ಸಿಗ್ತಾ ಇಲ್ಲ. ಅದೇ ನಮಗೆ ಆಶ್ಚರ್ಯ’’ ಎಂದರು ಪುತ್ರ ರವೀಂದ್ರ ದಂಪತಿ. ಅವರಿಗೆ ಓದಲೂ ಬರೋದಿಲ್ಲ ಬೇರೆ. ಮನೆಗೆ ಬಂದವರಲ್ಲಿ ಯಾರಾದರೂ ಒಯ್ದಿರಬಹುದೇ? (ಒಬ್ಬರು ಓದಿ ವಾಪಾಸ್ ಕೊಟ್ಟಿದ್ರಂತೆ.)

ಚಿತ್ತಾಲರು ನನಗೆ ಆ ದಿನಗಳಲ್ಲಿ ಪ್ರತೀಬಾರಿ ಅವರನ್ನು ಭೇಟಿಯಾದಾಗ ಲೆಲ್ಲಾ ಅವರಿಗೆ ಬಂದಿರುವ ಪತ್ರಗಳ ಫೈಲುಗಳನ್ನು ತಂದು ತೋರಿಸು ತ್ತಿದ್ದರು. ಅವುಗಳಿಗೆ ಆಯಾಯ ವರ್ಷವನ್ನು ನಮೂದಿಸಿದ ಲೇಬಲ್ ಅಂಟಿಸಿರುತ್ತಿತ್ತು. ಇದು 1995ರ ಫೈಲು, ಇದು 2004ರ ಫೈಲು..... ಹೀಗೆಲ್ಲಾ ಇರುತ್ತಿತ್ತು. ಈ ಫೈಲುಗಳಲ್ಲಿ ನನಗೆ ಪ್ರಖ್ಯಾತ ಸಾಹಿತಿಗಳ ಪತ್ರಗಳು, ಹಸ್ತಾಕ್ಷರವನ್ನು ನೋಡುವ ಭಾಗ್ಯ ಲಭಿಸುತ್ತಿತ್ತು. ಪ್ರತಿ ಸಲ ಅವರ ಮನೆಗೆ ಹೋದಾಗ ನಾನು ಕುತೂಹಲದಿಂದ ಅವುಗಳತ್ತ ಕಣ್ಣಾಡಿಸುತ್ತಿದ್ದೆ.

ಆದರೆ, ಮೊನ್ನೆ ‘‘ಅವರ ಯಾವ ಫೈಲುಗಳೂ ಈಗ ಇಲ್ಲವಲ್ಲ, ಏನೂ ಸಿಗ್ತಾ ಇಲ್ಲ’’ ಎಂಬ ಉತ್ತರ ಮತ್ತೆ ಬಂತು. ನನಗೆ ಮತ್ತಷ್ಟು ಆಶ್ಚರ್ಯದ ಜೊತೆಗೆ ಸ್ವಲ್ಪ ಬೇಸರ ಕೂಡಾ ಆಯಿತು. ‘ದಿಗಂಬರ’ದ ಹಸ್ತಪ್ರತಿ ಓದಲು ಒಯ್ದವರು ಒಬ್ಬರು ಮತ್ತೆ ಹಿಂತಿರುಗಿಸಿದ್ದಾಗಿಯೂ ಹೇಳುತ್ತಾರೆ. ಆದರೆ ಈಗ ಚಿತ್ತಾಲರ ‘ದಿಗಂಬರ’ ಕಾದಂಬರಿಯ 39ರಷ್ಟು ಅಧ್ಯಾಯಗಳಿರುವ ಆ ಹಸ್ತಪ್ರತಿಗಳ ಬುಕ್ ಎಲ್ಲಿ ಹೋಯಿತು? ಅವರ ಪತ್ರಗಳ ಫೈಲುಗಳು ಎಲ್ಲಿವೆ....? ಅಷ್ಟೊಂದು ಪತ್ರಗಳಿದ್ದ ಫೈಲುಗಳಿಲ್ಲ ಅಂದರೆ.....!
ನಾವು ಸಾಕಷ್ಟು ಎಲ್ಲಾ ಕಡೆ ಮನೆಯೊಳಗೆೆ ಹುಡುಕಿದ್ದೇವೆ, ಸಿಗುತ್ತಿಲ್ಲ ಎಂದರು ಮನೆಯವರು. ಆದರೂ ನಾನು ಮತ್ತೊಮ್ಮೆ ಹುಡುಕಿ ಸಿಗಬಹುದು ಎಲ್ಲಾದರೂ ಎಂಬ ಆಶಾವಾದ ವ್ಯಕ್ತಪಡಿಸಿದೆ.

ಕಾದಂಬರಿ ಪೂರ್ಣಗೊಳ್ಳದಿದ್ದರೆ ಪ್ರಕಟ ಮಾಡಬಾರದು ಎಂದು ಚಿತ್ತಾಲರು ತಮ್ಮ 2013ರ ಕೊನೆಯ ಹುಟ್ಟುಹಬ್ಬದಂದು ದಿಗಂಬರದ ಬಗ್ಗೆ ಹೇಳಿದ್ದ ಆ ಮಾತು ನೆನಪಾಗುತ್ತಿತ್ತು. ದಿಗಂಬರನ ಶಿಲ್ಪವೊಂದರ ನಿರೀಕ್ಷೆಯಲ್ಲಿ ಕಾಯುತ್ತಿದ್ದ ಕನ್ನಡ ಸಾಹಿತ್ಯಲೋಕಕ್ಕೆ ಆ ಶಿಲ್ಪಅರಳದೆ ಕಣ್ಣುಮುಚ್ಚಿದಾಗ ತೀವ್ರ ನೋವಾಗಿತ್ತು. ಈಗ ಬರೆದಷ್ಟು ಪುಟಗಳೂ ಸಿಗುತ್ತಿಲ್ಲವೆಂದರೆ.... ಇನ್ನಷ್ಟು ನೋವಾಗಿದೆ. ಆದರೂ ಕನ್ನಡ ಸಾಹಿತ್ಯ ಲೋಕ ದಿಗಂಬರದ ಬರೆದಷ್ಟು ಪುಟಗಳ ಮುದ್ರಣವನ್ನು ಕುತೂಹಲದಿಂದ ಕಾಯುತ್ತಿದೆ ಎಂದು ಆವತ್ತೇ ಬರೆದಿದ್ದೆ. ಮತ್ತೊಮ್ಮೆ ಬರುತ್ತೇವೆ ಹಸ್ತಪ್ರತಿ ಕಾಣಲು. ಹುಡುಕಿ, ಸಿಗಬಹುದು ಎಂಬ ಆಶಾವಾದದೊಂದಿಗೆ ನಾವು ದಂಪತಿ ಅವರ ಮನೆಯಿಂದ ನಿರ್ಗಮಿಸಿದೆವು. ಹೊರಗಡೆ ಬ್ಯಾಂಡ್ ಸ್ಟ್ಯಾಂಡ್‌ನ ಬಂಡೆಗಲ್ಲುಗಳ ಬೀಚ್‌ನ್ನು ಸ್ವಲ್ಪಹೊತ್ತು ವೀಕ್ಷಿಸುತ್ತಾ ನಿಂತೆವು. ದಿಗಂಬರದ ಹಸ್ತಪ್ರತಿ ಸಿಗದೆ ಚಿತ್ತಾಲರ ಮನೆಯವರೂ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಯಶವಂತ ಚಿತ್ತಾಲರು ಅದೆಷ್ಟೋ ಸಲ ಬ್ಯಾಂಡ್‌ಸ್ಟ್ಯಾಂಡ್ ಬೀಚ್‌ನ ಒಂದು ತೀರದಿಂದ ಇನ್ನೊಂದು ತೀರದ ತನಕ ನನ್ನ ಜೊತೆ ಸುತ್ತಾಡುತ್ತಾ ಸಾಹಿತ್ಯದ ಮಾತುಗಳನ್ನಾಡುತ್ತಿದ್ದ ಆ ಸುದಿನಗಳೆಲ್ಲಾ ಮತ್ತೆ ಮತ್ತೆ ನೆನಪಾಗಿದ್ದನ್ನು ನನ್ನ ಪತ್ನಿಯ ಬಳಿ ಹಂಚಿಕೊಂಡೆ. ದಿಗಂಬರದ ಹಸ್ತಪ್ರತಿ ಸಿಗಲಿ, ಮತ್ತೊಮ್ಮೆ ಈ ಕಡೆ ಬರೋಣ ಎಂದು ಹೇಳುತ್ತಾ ಆಟೋ ಹಿಡಿದೆವು.

2007ರಲ್ಲಿ ಚಿತ್ತಾಲರ ಒಂದು ಕಥಾಸಂಕಲನ ಬಂದಿತ್ತು- ‘ಪುಟ್ಟನ ಹೆಜ್ಜೆ ಕಾಣೋದಿಲ್ಲಾ’ ಅಂತ. ‘ಈಗ ದಿಗಂಬರ’ದ ಹಸ್ತಪ್ರತಿ ಕೂಡಾ ಕಾಣೋದಿಲ್ಲವಲ್ಲಾ ....
* * *
ನಗರಪಾಲಿಕೆ ಚುನಾವಣೆ ಸೈಡ್ ಇಫೆಕ್ಟ್‌ಗಳು
ಮಹಾರಾಷ್ಟ್ರದ ನಗರಪಾಲಿಕೆ ಚುನಾವಣೆಗಳಲ್ಲಿ ಪರಾಜಯದ ನಂತರ ಕಾಂಗ್ರೆಸ್ ನೇತಾರರು ಈಗ ತಮ್ಮೆಳಗೆ ಕಚ್ಚಾಟಕ್ಕೆ ಇಳಿದಿದ್ದಾರೆ. ಪಕ್ಷದ ಹಿರಿಯ ನಾಯಕರು ರಾಜ್ಯ ಕಾಂಗ್ರೆಸನ್ನು ಸೋಲಿಗಾಗಿ ಜವಾಬ್ಧಾರಿಯಾಗಿಸಿದ್ದಾರೆ. ಯಾಕೆಂದರೆ ಒಂದು ವೇಳೆ ಎನ್‌ಸಿಪಿ ಜೊತೆಗೆ ಹೊಂದಾಣಿಕೆ ಮಾಡಿಕೊಂಡಿದ್ದಿದ್ದರೆ ಈ ಸೋಲು ಕಾಂಗ್ರೆಸ್‌ಗೆ ಬರುತ್ತಿರಲಿಲ್ಲವಂತೆ. ಕಾಂಗ್ರೆಸ್ ಕಾರ್ಯಾವಧಿಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸ್ಪರ್ಧಿಯಾಗಿದ್ದ ಅಹ್ಮದ್‌ನಗರದ ವರಿಷ್ಠ ನಾಯಕ ಬಾಳಾಸಾಹೇಬ ಥೊರಾತ್ ಅವರು ಪ್ರತಿಕ್ರಿಯಿಸುತ್ತಾ ‘‘ಶಿರ್ಡಿ ನಗರಪಾಲಿಕೆಯ ಹೊರತು ಅಹ್ಮದ್‌ನಗರದ ಆರು ನಗರಪಾಲಿಕೆಗಳಲ್ಲಿ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್‌ಗೆ ಸ್ಪರ್ಧೆ ನೀಡಿದ್ದ ಎನ್‌ಸಿಪಿಯ ಸ್ಥಿತಿ ಇನ್ನಷ್ಟು ಕೆಟ್ಟದಾಗಿದೆ.’’ ಸದ್ಯ ರಾಜಕೀಯರಂಗದಲ್ಲಿ ರಾಧಾಕೃಷ್ಣ ವಿಖೇ ಪಾಟೀಲ್ ಬಣದ ಜೊತೆ ಇವರ ಬಣಕ್ಕೆ ಸಂಘರ್ಷ ನಡೆಯುತ್ತಿದೆ.

ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಚವ್ಹಾಣ್ ಅವರ ನೇತೃತ್ವ ಈ ಬಾರಿ ಎನ್‌ಸಿಪಿ ಜೊತೆ ಹೊಂದಾಣಿಕೆ ನಿರಾಕರಿಸಿತ್ತು. ಈ ಬಗ್ಗೆ ಮೊದಲಿಗೆ ಧ್ವನಿ ಎತ್ತಿದವರು ನಾರಾಯಣ ರಾಣೆ. ಆದರೆ ಮಾಜಿ ಮುಖ್ಯಮಂತ್ರಿಗಳಾದ ಅಶೋಕ್ ಚವ್ಹಾಣ್ ಮತ್ತು ಪ್ರಥ್ವಿರಾಜ್ ಚವ್ಹಾಣ್ ಅವರು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಇದೀಗ ರಾಣೆ ಅವರ ಧ್ವನಿಗೆ ಥೊರಾತ್ ಕೂಡಾ ಧ್ವನಿ ಸೇರಿಸಿದ್ದರಿಂದ ಕಾಂಗ್ರೆಸ್ ಮುಖ್ಯಸ್ಥರಿಗೆ ಪಜೀತಿ ಉಂಟಾಗಿದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X