ಡಿಸೆಂಬರ್ ತಮಿಳುನಾಡಿಗೆ ಮಹತ್ವಪೂರ್ಣ ತಿಂಗಳು?

ಚೆನ್ನೈ, ಡಿ.6: ವರ್ಷದ ಕೊನೆಯ ತಿಂಗಳು ಡಿಸೆಂಬರ್ ತಮಿಳುನಾಡು ಪಾಲಿಗೆ ಮಹತ್ವಪೂರ್ಣ ತಿಂಗಳಾಗಿದೆ. ಕಾಕತಾಳೀಯ ಎಂಬಂತೆ ರಾಜ್ಯದ ಪ್ರಮುಖ ನಾಯಕರು ಈ ತಿಂಗಳಲ್ಲೇ ವಿಧಿವಶರಾಗಿದ್ದಾರೆ. ಆ ಪಟ್ಟಿಗೆ ಹೊಸ ಸೇರ್ಪಡೆ ಎಐಎಡಿಎಂಕೆ ಮುಖ್ಯಸ್ಥೆ ಹಾಗೂ ಮುಖ್ಯಮಂತ್ರಿ ಜೆ. ಜಯಲಲಿತಾ.
ಎಐಎಡಿಎಂಕೆ ಸ್ಥಾಪಕ ಹಾಗೂ ರಾಜಕಾರಿಣಿಯಾಗಿ ಪರಿವರ್ತಿತ ಖ್ಯಾತ ನಟ ಎಂಜಿ ರಾಮಚಂದ್ರನ್ 1987ರಲ್ಲಿ ಡಿ.24 ರಂದು ನಿಧನರಾಗಿದ್ದರು. ಎಂಜಿಆರ್ ಆಶ್ರಯದಲ್ಲಿ ಬೆಳೆದ ನಾಯಕಿ ಜಯಲಲಿತಾ ಡಿ.5 ರಂದು ವಿಧಿವಶರಾಗಿದ್ದಾರೆ. ಈ ಇಬ್ಬರು ನಾಯಕರು ದೀರ್ಘಕಾಲದ ಅಸೌಖ್ಯದ ಬಳಿಕ ನಿಧನರಾಗಿದ್ದಾರೆ.
ಭಾರತದ ಗವರ್ನರ್ ಜನರಲ್ ಸಿ. ರಾಜಗೋಪಾಲಾಚಾರಿ 1972ರ ಡಿ.25 ರಂದು ಹಾಗೂ ಕ್ರಾಂತಿಕಾರಿ ನಾಯಕ ‘ಪೆರಿಯಾರ್’ ಇವಿ ರಾಮಸ್ವಾಮಿ 1972ರ ಡಿ.24 ರಂದು ನಿಧನರಾಗಿದ್ದು, ಈ ಇಬ್ಬರಿಗೆ 94 ವರ್ಷ ವಯಸ್ಸಾಗಿತ್ತು.
ಪ್ರಕೃತಿ ಕೂಡ ರಾಜ್ಯದ ಜನತೆಯನ್ನು ವರ್ಷದ ಕೊನೆಯ ತಿಂಗಳಲ್ಲಿ ದುಃಖದ ಮಡುವಿಗೆ ತಳ್ಳಿದೆ. 2004ರ ಡಿ.26 ರಂದು ರಾಜ್ಯಕ್ಕೆ ಸುನಾಮಿ ಅಪ್ಪಳಿಸಿತ್ತು. 2015ರ ಡಿಸೆಂಬರ್‌ನಲ್ಲಿ ಸುರಿದ ಧಾರಾಕಾರ ಮಳೆಗೆ ಚೆನ್ನೈ, ಕಾಂಚಿಪುರಂ, ಕುಡಲೂರು, ತಿರುವಲೂರು ಹಗೂ ಥೂತುಕುಡಿ ಜಿಲ್ಲೆಗಳು ಭಾರೀ ಹಾನಿಗೊಳಗಾಗಿದ್ದವು.







