ಜಯಲಲಿತಾ ನಿಧನದಿಂದ ಆಘಾಥ: ಮೂವರ ಸಾವು; ಇಬ್ಬರಿಂದ ಆತ್ಮಹತ್ಯೆ ಯತ್ನ

ಕೊಯಂಬತ್ತೂರು, ಡಿ.6: ಜಯಲಲಿತಾರ ದೇಹಸ್ಥಿತಿ ಹದಗೆಡುತ್ತಿರುವ ಸುದ್ದಿ ನಿನ್ನೆ ಸಂಜೆ ಪ್ರಸಾರವಾದ ಬಳಿಕ ಮೂವರು ಆಘಾತದಿಂದ ಸಾವನ್ನಪ್ಪಿದ್ದು, ಎರಡು ಆತ್ಮಹತ್ಯಾ ಯತ್ನ ಪ್ರಕರಣಗಳು ಜಿಲ್ಲೆಯಿಂದ ವರದಿಯಾಗಿವೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.
ನಿನ್ನೆ ಸಿಂಗನಲ್ಲೂರಿನ ತನ್ನ ಮನೆಯಲ್ಲಿ ಜುಲಲಿತಾರ ಆರೋಗ್ಯದ ಕುರಿತು ಟಿವಿ ಸುದ್ದಿಯನ್ನು ವೀಕ್ಷಿಸುತ್ತಿದ್ದ 65ರ ಹರೆಯದ ಪೈಂಟರ್ ಒಬ್ಬ ಎದೆ ನೋವಿಗೊಳಗಾಗಿ, ಆಸ್ಪತ್ರೆ ತಲುಪುವ ಮೊದಲೇ ಕೊನೆಯುಸಿರೆಳೆದನೆಂದು ಪೊಲೀಸರು ಹೇಳಿದ್ದಾರೆ.
ಇನ್ನೊಂದು ಘಟನೆಯಲ್ಲಿ ತುಡಿಯಲೂರಿನ ತನ್ನ ಮನೆಯಲ್ಲಿ ಅಪರಾಹ್ಣ ಟಿವಿ ಸುದ್ದಿ ನೋಡುತ್ತಿದ್ದ 62ರ ಹರೆಯದ ಪಳನಿಯಮ್ಮಳ್ ಎಂಬಾಕೆ ಆಘಾತದಿಂದ ಸಾವನ್ನಪ್ಪಿದ್ದಾಳೆಂದು ಅವರು ತಿಳಿಸಿದ್ದಾರೆ.
ಅದೇ ರೀತಿ, ಈರೋಡ್‌ನ ರಾಜ ಎಂಬ 38ರ ಹರೆಯದ ಲೋಡರ್, ಟಿವಿ ಸುದ್ದಿವಾಹಿನಿ ನೋಡುತ್ತಿದ್ದ ವೇಳೆ ಕುರ್ಚಿಯಲ್ಲಿ ಕುಸಿದು ಬಿದ್ದನು. ಆತನ ಹೆಂಡತಿ 108 ವಾಹನವನ್ನು ಕರೆಸಿದಳಾದರೂ, ಅದು ಬರುವಷ್ಟರಲ್ಲೇ ಆತ ಕೊನೆಯುಸಿರೆಳೆದಿದ್ದನೆಂದು ತುರ್ತು ಸೇವೆಯ ಸಿಬ್ಬಂದಿ ಘೋಷಿಸಿದ್ದಾರೆ.
ಇದೇ ವೇಳೆ, ಇಮದು ನಸುಕಿನಲ್ಲಿ ಲೋಗನಾದನ್ ಎಂಬ ವ್ಯಕ್ತಿ ಕುನಿಯಮುತ್ತೂರಿನಲ್ಲಿ 50 ಅಡಿ ಎತ್ತರದ ಮೊಬೈಲ್ ಗೋಪುರದಿಂದ ಕೆಳಗೆ ಹಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದನು. ಆದರೆ, ಅಲ್ಲಿಗೆ ತಲುಪಿದ ಪೊಲೀಸರು ಆತನನ್ನು ಕೆಳಗಿಳಿಸಿ, ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.
ಇನ್ನೊಂದು ಘಟನೆಯಲ್ಲಿ ನಿನ್ನೆ ರಾತ್ರಿ ಅಣ್ಣೂರಿನಲ್ಲಿ ರಾಮಚಂದ್ರನ್ (45) ಎಂಬ ಎಡಿಎಂಕೆ ಸದಸ್ಯ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಶೇ.60 ಸುಟ್ಟಗಾಯಗಳಾಗಿರುವ ಅವನಿಗೆ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯೆಂದು ಪೊಲೀಸರು ವಿವರಿಸಿದ್ದಾರೆ.







