ಅವೈಜ್ಞಾನಿಕ ಉದ್ಯಮ ಪರವಾನಿಗೆ ಹೆಚ್ಚಳ ಬೇಡ: ನಗರಸಭೆಯಲ್ಲಿ ವರ್ತಕರ ಆಗ್ರಹ

ಪುತ್ತೂರು, ಡಿ.6 : ಉದ್ಯಮ ಪರವಾನಿಗೆ, ಕಟ್ಟಡ ಪರವಾನಿಗೆ ಮತ್ತು ಜಾಹೀರಾತು ಸೇರಿದಂತೆ ಒಟ್ಟು ಹತ್ತು ವಿಷಯಗಳಿಗೆ ಸಂಬಂಧಿಸಿ ಪುತ್ತೂರು ನಗರಸಭೆ ಆರು ತಿಂಗಳ ಹಿಂದೆ ರಚಿಸಿದ ಕರಡು ಬೈಲಾವನ್ನು ಪರಿಶೀಲಿಸಿ ಆಕ್ಷೇಪ ಮತ್ತು ಅಭಿಪ್ರಾಯ ಪಡೆಯಲು ಮಂಗಳವಾರ ನಡೆಸಿದ ಸಭೆಯಲ್ಲಿ ಪುತ್ತೂರಿನ ವರ್ತಕರು ಉದ್ಯಮ ಪರವಾನಿಗೆ ಹೆಚ್ಚಳಕ್ಕೆ ಮಾನದಂಡ ಯಾವುದು ಎಂದು ಪ್ರಶ್ನಿಸಿ ಅವೈಜ್ಞಾನಿಕವಾಗಿ ಅಷ್ಟೊಂದು ಏರಿಕೆ ಮಾಡುವುದು ಸರಿಯಲ್ಲ ಎಂದು ವಾದಿಸಿದರು. ಉದ್ಯಮ ತೆರಿಕೆಯನ್ನು ಏರಿಕೆ ಮಾಡದೆ ಶೇ15ರಿಂದ 30ರಷ್ಟು ಮಾಡಿ ಎಂದು ಅವರು ಆಗ್ರಹಿಸಿದರು.
ಪುತ್ತೂರು ನಗರಸಭೆ ಅಧ್ಯಕ್ಷೆ ಜಯಂತಿ ಬಲ್ನಾಡು ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರಸಭೆ ಕಚೇರಿ ಸಭಾಂಗಣದಲ್ಲಿ ವರ್ತಕರ ಅಭಿಪ್ರಾಯ ಸಂಗ್ರಹಣಾ ಸಭೆ ನಡೆಯಿತು.
ಆಡಳಿತ ಪಕ್ಷದ ಹಿರಿಯ ಸದಸ್ಯ ಎಚ್.ಮಹಮ್ಮದ್ ಆಳಿ ಅವರು ಮಾತನಾಡಿ , ಉದ್ಯಮ ಪರವಾನಿಗೆ, ಕಟ್ಟಡ ಪರವಾನಿಗೆ ಮತ್ತು ಜಾಹೀರಾತು ಸೇರಿದಂತೆ ಒಟ್ಟು ಹತ್ತು ವಿಷಯಗಳಿಗೆ ಸಂಬಂಧಿಸಿ ಪುತ್ತೂರು ನಗರಸಭೆ ಆರು ತಿಂಗಳ ಹಿಂದೆ ರಚಿಸಿದ ಕರಡು ಬೈಲಾಗಳಿಗೆ ಉದ್ಯಮ ಪರವಾನಿಗೆ ಶುಲ್ಕ ಹೆಚ್ಚಳದ ಕುತಿತಂತೆ ಮಾತ್ರ 13 ಲಿಖಿತ ಆಕ್ಷೇಪಗಳು ಸಲ್ಲಿಕೆಯಾಗಿದೆ .ಈ ಕುರಿತು ತಮ್ಮ ಅಭಿಪ್ರಾಯ , ಆಕ್ಷೇಪಗಳನ್ನು ತಿಳಿಸುವಂತೆ ತಿಳಿಸಿದರು.
ಪುತ್ತೂರು ವರ್ತಕ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ಮಾತನಾಡಿ, ಈಗ ವ್ಯಾಪಾರವೇ ಇಲ್ಲ. ಒಮ್ಮೆಲೇ ಉದ್ಯಮ ಪರವಾನಿಗೆ ಶುಲ್ಕ ಜಾಸ್ತಿ ಮಾಡಿದರೆ ಕಷ್ಟ ಆಗುತ್ತದೆ ಎಂದರು.
ವರ್ತಕ ಸಂಘದ ರವೀಂದ್ರ ಅವರು ಮಾತನಾಡಿ, ರೂ.200 ಇರುವಲ್ಲಿಗೆ ಏಕಾಏಕಿಯಾಗಿ 3500 ಮಾಡಿರುವುದು ಅವೈಜ್ಞಾನಿಕ ಕ್ರಮವಾಗಿದ್ದು, ಏರಿಕೆಗೆ ಮಾನದಂಡ ಯಾವುದು ಎಂದು ಪ್ರಶ್ನಿಸಿದರು.
ವೆಂಕಟಕೃಷ್ಣ , ವರ್ತಕ ಸಂಘದ ಖಜಾಂಜಿ ವಿಶ್ವಪ್ರಸಾದ್ ಸೇಡಿಯಾಪು ,ಲ್ಯಾನ್ಸಿ ಮಸ್ಕರೇನ್ಹಸ್ , ಲೋಕೇಶ್ ಹೆಗ್ಡೆ, ಪದ್ಮನಾಭ ಶೆಟ್ಟಿ , ಬಳಕೆದಾರರ ವೇದಿಕೆಯ ದಿನೇಶ್ ಭಟ್, ಪುತ್ತೂರು ಕೈಗಾರಿಕೆ ಮತ್ತು ವಾಣಿಜ್ಯ ಸಂಘದ ಪ್ರಮುಖರಾದ ಉಮ್ಮರ್ ಫಾರೂಕ್, ವಿಜಯ್ ರೆಬೆಲ್ಲೋ, ಸಂದೀಪ್ ಲೋಬೋ, ಗುಣಕರ್, ರತ್ನಾಕರ್, ರಾಜೇಶ್ ಕಾಮತ್ ಮತ್ತಿತರರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ಪರವಾನಿಗೆ ಶುಲ್ಕ ಹೆಚ್ಚಿಸುವುದಾದರೆ ವೈಜ್ಞಾನಿಕ ಮಾನದಂಡ ಇರಲಿ, ಎರ್ರಾಬಿರ್ರಿ ಹೆಚ್ಚಿಸಬೇಡಿ, ತಾರತಮ್ಯ ನೀತಿ ಬೇಡ ಎಂಬಿತ್ಯಾದಿ ಅಭಿಪ್ರಾಯಗಳು ಕೇಳಿ ಬಂದವು.
ಅಧ್ಯಕ್ಷರು ಮುಂದಿನ ಕೆಲವೇ ದಿನಗಳಲ್ಲಿ ಹಿರಿಯ ಕೌನ್ಸಿಲರ್‌ಗಳು ಸಭೆ ಸೇರಿ ಬೈಲಾ ಅಂತಿಮಗೊಳಿಸಲಿದ್ದಾರೆ. ನಂತರ ಮತ್ತೊಮ್ಮೆ ವರ್ತಕ ಪ್ರಮುಖರ ಸಭೆ ಕರೆಯಲಾಗುವುದು. ಈ ಸಭೆಯ ಅಭಿಪ್ರಾಯ ಪಡೆದ ಬಳಿಕ ಅಂತಿಮ ವರದಿಯನ್ನು ನಗರಸಭೆ ಸಾಮಾನ್ಯ ಸಭೆಯಲ್ಲಿ ಇಟ್ಟು ಮಂಜೂರು ಮಾಡಲಾಗುವುದು ಎಂದು ಸದಸ್ಯ ಮಹಮ್ಮದ್ ಆಲಿ ಅವರು ತಿಳಿಸಿದರು.
ನಗರಸಭೆಯ ಉಪಾಧ್ಯಕ್ಷ ವಿಶ್ವನಾಥ ಗೌಡ, ಪೌರಾಯುಕ್ತೆ ರೂಪಾ ಶೆಟ್ಟಿ, ಸದಸ್ಯರಾದ ರಾಜೇಶ್ ಬನ್ನೂರು, ಸುಜೀಂದ್ರ ಪ್ರಭು, ಅನ್ವರ್ ಕಾಸಿಂ, ಮುಕೇಶ್ ಕೆಮ್ಮಿಂಜೆ ಮತ್ತಿತರರು ಇದ್ದರು.







