ಬರ ಪರಿಹಾರ ಕಾಮಗಾರಿಗಳ ಅನುಷ್ಠಾನ: ಸಂಪುಟ ಉಪ ಸಮಿತಿಗಳ ರಚನೆ: ಕಾಗೋಡು ತಿಮ್ಮಪ್ಪ

ಬೆಂಗಳೂರು, ಡಿ.6: ರಾಜ್ಯದಲ್ಲಿ ಬರ ಪರಿಹಾರ ಕಾಮಗಾರಿಗಳ ಅನುಷ್ಠಾನದ ಕುರಿತು ವಾಸ್ತವ ಪರಿಸ್ಥಿತಿ ಅಧ್ಯಯನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ವಿಭಾಗವಾರು ನಾಲ್ಕು ಸಚಿವ ಸಂಪುಟ ಉಪ ಸಮಿತಿಗಳನ್ನು ರಚಿಸಿದ್ದಾರೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರ ಪರಿಹಾರ ಕಾಮಗಾರಿ ಸರಕಾರದ ಆದ್ಯತೆ. ಜನರಿಗೆ ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಜನರ ಗುಳೆ ಹೋಗುವುದನ್ನು ತಪ್ಪಿಸಲು ಉದ್ಯೋಗ ಸೃಷ್ಟಿ, ಬೆಳೆ ನಷ್ಟ ಪರಿಹಾರ ಇದೆಲ್ಲ ಸರಕಾರಕ್ಕೆ ಸವಾಲಾಗಿದೆ ಎಂದರು.
ಮೈಸೂರು ವಿಭಾಗ: ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಆರೋಗ್ಯ ಸಚಿವ ಕೆ.ಆರ್.ರಮೇಶ್‌ಕುಮಾರ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಹಕಾರ ಸಚಿವ ಎಚ್.ಎಸ್.ಮಹದೇವಪ್ರಸಾದ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ.ಖಾದರ್.
ಬೆಂಗಳೂರು ವಿಭಾಗ: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕೃಷಿ ಸಚಿವ ಕೃಷ್ಣಭೈರೇಗೌಡ. ಕಲ್ಬುರ್ಗಿ ವಿಭಾಗ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಎಚ್.ಕೆ.ಪಾಟೀಲ್ ನೇತೃತ್ವದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್, ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಪೌರಾಡಳಿತ ಸಚಿವ ಈಶ್ವರ ಖಂಡ್ರೆ.
ಬೆಳಗಾವಿ ವಿಭಾಗ: ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ನೇತೃತ್ವದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್, ಸಣ್ಣ ಕೈಗಾರಿಕಾ ಸಚಿವ ರಮೇಶ್ ಜಾರಕಿಹೊಳಿ, ಅಬಕಾರಿ ಸಚಿವ ಎಸ್.ವೈ.ಮೇಟಿ ಅವರನ್ನು ಒಳಗೊಂಡ ಸಮಿತಿಗಳನ್ನು ರಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಚಿವ ಸಂಪುಟದ ಉಪ ಸಮಿತಿಗಳು ಡಿ.5 ರಿಂದ 20ರವರಗೆ ಜಿಲ್ಲಾವಾರು ಭೇಟಿ ನೀಡಿ, ಅಧಿಕಾರಿಗಳ ಸಭೆ ನಡೆಸಿ, ಬರ ಪರಿಹಾರ ಕಾಮಗಾರಿಗಳ ಅನುಷ್ಠಾನ ಎಷ್ಟರ ಮಟ್ಟಿಗೆ ನಡೆದಿದೆ ಎಂಬುದರ ಕುರಿತು ಮಾಹಿತಿಯನ್ನು ಸಂಗ್ರಹಿಸಿ ಸರಕಾರಕ್ಕೆ ವರದಿಯನ್ನು ಸಲ್ಲಿಸಲಿವೆ ಎಂದು ಅವರು ಹೇಳಿದರು.
ಬೆಳೆ ನಷ್ಟ ಹಾಗೂ ಬರ ಪರಿಹಾರ ಕಾಮಗಾರಿಗಳಿಗೆ 4700 ಕೋಟಿ ರೂ.ನೆರವು ನೀಡುವಂತೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿದ್ದೇವೆ. ಅಲ್ಲದೆ, ರಾಜ್ಯ ಸರಕಾರವು ಬರ ಪರಿಸ್ಥಿತಿ ನಿರ್ವಹಣೆಗಾಗಿ ಕೆಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಕುಂಠಿತಗೊಳಿಸಿ ಅನುದಾನ ಕ್ರೋಡೀಕರಿಸುವ ಪ್ರಯತ್ನ ಮಾಡುತ್ತಿದೆ ಎಂದು ಕಾಗೋಡು ತಿಮ್ಮಪ್ಪ ತಿಳಿಸಿದರು.
ಬಗರ್‌ಹುಕುಂ: ನಾಲ್ಕು ಲಕ್ಷ ಬಗರ್‌ಹುಕುಂ ಸಾಗುವಳಿ ಅರ್ಜಿಗಳು ವಿಲೇವಾರಿಯಾಗದೆ ಬಾಕಿ ಉಳಿದಿವೆ. ಡಿಸೆಂಬರ್ ಮಾಸಾಂತ್ಯಕ್ಕೆ ಎಲ್ಲ ಅರ್ಜಿಗಳು ವಿಲೇವಾರಿಯಾಗಬೇಕು ಎಂದು ಕಳೆದ ಜು.1ಕ್ಕೆ ಸುತ್ತೋಲೆಯನ್ನು ಹೊರಡಿಸಲಾಗಿತ್ತು. ಆದರೆ, ನನ್ನ ನಿರೀಕ್ಷೆಗೆ ತಕ್ಕಂತೆ ಪ್ರಗತಿಯಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಬಗರ್‌ಹುಕುಂ ಸಾಗುವಳಿ ಅರ್ಜಿಗಳ ವಿಲೇವಾರಿಗೆ ಶಾಸಕರೆ ಆಸಕ್ತಿ ತೋರದಿರುವುದು ಬೇಸರದ ಸಂಗತಿ. ವಾರಕ್ಕೊಂದರಂತೆ ಪ್ರತಿ ತಿಂಗಳು ನಾಲ್ಕು ಸಭೆಗಳನ್ನು ನಡೆಸುವಂತೆ ಸೂಚನೆ ನೀಡಲಾಗಿದೆ. ಆದರೆ, ಕೆಲವೆಡೆ ಒಂದು ಸಭೆಯನ್ನು ನಡೆಸಲಾಗಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂಬಂಧ ಶೀಘ್ರದಲ್ಲೆ ಎಲ್ಲ ಶಾಸಕರಿಗೆ ಮತ್ತೊಂದು ಮನವಿ ಪತ್ರವನ್ನು ಕಳುಹಿಸಿಕೊಡಲಾಗುವುದು. ಬಗರ್‌ಹುಕುಂ ಸಾಗುವಳಿಗೆ ಹೊಸ ಅರ್ಜಿಗಳನ್ನು ಕರೆಯಲು ಅವಕಾಶ ನೀಡಲು ವೈಯಕ್ತಿಕವಾಗಿ ನನಗೆ ಆಸಕ್ತಿಯಿದೆ. ಹೊಸ ಅರ್ಜಿಗಳಿಗೆ ಅವಕಾಶ ಮಾಡಿಕೊಟ್ಟರೆ, ಸರಕಾರದ ಭೂಮಿಯೆ ಉಳಿಯುವುದಿಲ್ಲ ಎಂದು ಸಚಿವ ಸಂಪುಟದ ಕೆಲ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ ಎಂದು ಅವರು ಹೇಳಿದರು.
ಅರ್ಜಿಗಳನ್ನು ಸಲ್ಲಿಸುವಲ್ಲಿ ವಂಚಿತರಾಗಿರುವವರಲ್ಲಿ ತುಂಬಾ ಬಡವರು ಇದ್ದಾರೆ. ಅಂತಹವರಿಗೆ ಇನ್ನೊಂದು ಅವಕಾಶ ನೀಡಬೇಕು ಎಂಬುದು ನನ್ನ ಭಾವನೆ. ಈ ಪ್ರಸ್ತಾವನೆಯನ್ನು ಇನ್ನೊಮ್ಮೆ ಸಚಿವ ಸಂಪುಟದಲ್ಲಿ ಮಂಡಿಸುತ್ತೇನೆ. ಸಚಿವ ಸಂಪುಟದ ಒಪ್ಪಿಗೆ ಸಿಕ್ಕಿದರೆ, ಹೊಸ ಅರ್ಜಿಗಳನ್ನು ಸಲ್ಲಿಸಲು ಎರಡು ತಿಂಗಳು ಕಾಲಾವಕಾಶ ನೀಡುವುದಾಗಿ ಅವರು ತಿಳಿಸಿದರು.
ಬಗರ್‌ಹುಕುಂ ಸಾಗುವಳಿ ಅರ್ಜಿಗಳ ವಿಲೇವಾರಿಗೆ ಭೂ ಮಂಜೂರಾತಿ ಕಾಯ್ದೆಯ ಕೆಲವು ನಿಯಮಗಳು ಅಡ್ಡಿಯಾಗಿವೆ. ಬಡವರ ಅನುಕೂಲಕ್ಕಾಗಿ ಒಂದು ಬಾರಿ ಅವಕಾಶ ನೀಡುವ ನಿಟ್ಟಿನಲ್ಲಿ ನಿಯಮಗಳ ಸರಳೀಕರಣಕ್ಕೆ ಶೀಘ್ರದಲ್ಲೆ ಆದೇಶ ಹೊರಡಿಸಲಾಗುವುದು. ಅಲ್ಲದೆ, ಇನಾಮ್ ಭೂಮಿಯ ಹಕ್ಕು ಪತ್ರಗಳಿಗೆ ಅರ್ಜಿಗಳನ್ನು ಕರೆಯಲು ಇನ್ನೊಮ್ಮೆ ಅವಕಾಶ ನೀಡಲಾಗುವುದು ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ, ಕನ್ನಡ ಮೂಲದವರಾದ ಜಯಲಲಿತಾ, ತಮಿಳುನಾಡಿಗೆ ಹೋಗಿ ಜನಪ್ರಿಯತೆಯನ್ನು ಪಡೆದು ಮುಖ್ಯಮಂತ್ರಿಯಾದದ್ದು ಒಂದು ವಿಸ್ಮಯ ಎಂದರು.







