ಜಯಾ ಬಳಿಕ ಎಡಿಎಂಕೆ ಅಸ್ತಿತ್ವ ಉಳಿಸಿಕೊಳ್ಳುವುದೇ?

ಚೆನ್ನೈ,ಡಿ.6: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರ ನಿಧನವು ಒಂದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯನ್ನು ತಮಿಳುನಾಡಿನಲ್ಲಿ ಮೂಡಿಸಿದೆ. ಆಕೆಯ ನಿಧನದ ಬಳಿಕ ಎಡಿಎಂಕೆ ಪಕ್ಷವು ಅಸ್ವಿತ್ವವನ್ನು ಉಳಿಸಿಕೊಳ್ಳುವುದೇ ಎಂಬ ಪ್ರಶ್ನೆ ಅದಾಗಿತ್ತು.
ಎಡಿಎಂಕೆ ಪಕ್ಷದ ಸ್ಥಾಪಕ ಹಾಗೂ ಆಕೆಯ ರಾಜಕೀಯ ಗುರು ಎಂ.ಜಿ.ರಾಮಚಂದ್ರನ್ ದೀರ್ಘಕಾಲದ ಅಸ್ವಸ್ಥತೆಯಿಂದ ನಿಧನರಾದಾಗಲೂ ್ಝ ತಮಿಳುನಾಡಿನ ಜನತೆಯ ಮನದಲ್ಲಿ ಇದೇ ಪ್ರಶ್ನೆ ಮೂಡಿತ್ತು. ಎಂಜಿಆರ್ ನಿಧನದ ಬಳಿಕ ಹಿಂಸಾಚಾರಕ್ಕಿಳಿದ ಅವರ ಶೋಕತಪ್ತ ಅಭಿಮಾನಿಗಳು, ‘‘ ಎಂಜಿಆರ್ ಇಲ್ಲದ ಮದ್ರಾಸ್ ಯಾಕೆ ಬೇಕು’’ ಎಂದು ಹೇಳಿದ್ದನ್ನು ದಿನಪತ್ರಿಕೆಗಳು ತಮ್ಮ ವರದಿಗಳಲ್ಲಿ ಉಲ್ಲೇಖಿಸಿದ್ದವು.
ಆದರೆ ಎಂಜಿಆರ್ ಪತ್ನಿ ಜಾನಕಿ ಹಾಗೂ ಜಯಲಲಿತಾ ನಡುವೆ ಅಧಿಕಾರಕ್ಕಾಗಿ ಹಗ್ಗಜಗ್ಗಾಟ ನಡೆದ ಸಂದರ್ಭದಲ್ಲೂ ಎಡಿಎಂಕೆ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿತ್ತು. ನಾಲ್ಕು ವರ್ಷಗಳ ಬಳಿಕ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜಯಾ ಅಧಿಕಾರಕ್ಕೇರಿದರು.
ತಮಿಳುಸಿನೆಮಾ ಅಭಿಮಾನಿಗಳ ಆರಾಧ್ಯದೇವತೆಯೆನಿಸಿದ್ದ ಜಯಲಲಿತಾ ಅವರು ಎಂಜಿಆರ್ ನಿಧನದ ಬಳಿಕ ತಮಿಳುನಾಡಿನಲ್ಲಿ ಉಂಟಾಗಿದ್ದ ರಾಜಕೀಯ ಶೂನ್ಯತೆಯನ್ನು ತುಂಬುವಲ್ಲಿ ಯಶಸ್ವಿಯಾದರು.ಆದರೆ ಎಡಿಎಂಕೆ ಈಗ ಆಕೆಯ ಉತ್ತರಾಧಿಕಾರಿಯಾಗಿ ಯಾವುದೇ ಜನಾಕರ್ಷಣೀಯ ನಾಯಕನನ್ನು ಪಕ್ಷವು ಹೊಂದುವಲ್ಲಿ ವಿಫಲವಾಗಿದೆ.
ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಓ. ಪನ್ನೀರ್ ಸೆಲ್ವಂ ದಿವಂಗತ ನಾಯಕಿಗೆೆ ನಿರ್ಲಜ್ಜವಾಗಿ ದಾಸ್ಯಮನೋಭಾವವನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಮುಖ್ಯಮಂತ್ರಿಯಾಗಿ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸುವ ಬಗ್ಗೆ ಪಕ್ಷದಲ್ಲಿನ ಬಹುತೇಕ ಮಂದಿ ಯಾವುದೇ ನಿರೀಕ್ಷೆಯನ್ನು ಹೊಂದಿಲ್ಲ. ಜಯಲಲಿತಾ ಅವರಿಗೆ ಸರಿಸಮಾನವಾದ ನಾಯಕನ ಅನುಪಸ್ಥಿತಿಯಿಂದಾಗಿ ಎಡಿಎಂಕೆ ಪಕ್ಷದ ಭವಿಷ್ಯ ಅನಿಶ್ಚಿತತೆಯಿಂದ ಕೂಡಿದೆ.
ಎಡಿಎಂಕೆ ಪಕ್ಷದಂತೆಯೇ, ಇತರ ಪ್ರಾದೇಶಿಕ ಪಕ್ಷಗಳಾದ ತೃಣಮೂಲ ಕಾಂಗ್ರೆಸ್, ಬಿಎಸ್‌ಪಿ ಹಾಗೂ ಬಿಜು ಜನತಾದಳ ಕೂಡಾ ತಮ್ಮ ಸರ್ವೋಚ್ಛ ನಾಯಕರಾದ ಮಮತಾ ಬ್ಯಾನರ್ಜಿ, ಮಾಯಾವತಿ ಹಾಗೂ ನವೀನ್ ಪಟ್ನಾಯಕ್ ಅವರನ್ನೇ ಅವಲಂಭಿಸಿದೆ. ಈ ಮೂವರು ಮುಖಂಡರು ಕೂಡಾ ಪಕ್ಷವನ್ನು ಕಬ್ಬಿಣದ ಮುಷ್ಟಿಯೊಂದಿಗೆ ಮುನ್ನಡೆಸುತ್ತಿದ್ದು, ತಮ್ಮ ವರ್ಚಸ್ಸಿಗೆ ಸರಿಸಮಾನವಾದ ಉತ್ತರಾಧಿಕಾರಿಯನ್ನು ಬೆಳೆಸಲು ಅವರು ಯಾವುದೇ ಆಸಕ್ತಿಯನ್ನು ಹೊಂದಿಲ್ಲ.
ಆದರೆ ಬಿಜೆಡಿಯ ಪಿಯೂಶ್ ಮಲ್ಹೋತ್ರಾ ಅವರಂತಹ ಕೆಲವು ಮಹತ್ವಾಕಾಂಕ್ಷಿ ನಾಯಕರು ಪಕ್ಷದೊಳಗೆ ತಮ್ಮ ಪ್ರಭಾವವನ್ನು ವಿಸ್ತರಿಸಲು ಯತ್ನಿಸಿದಾಗ ಅದು ಅವರ ರಾಜಕೀಯ ವಿನಾಶಕ್ಕೆ ದಾರಿಯಾಯಿತು.
ಪಟ್ನಾಯಕ್ ಸಂಪುಟದಲ್ಲಿ ನಂ. 2 ಆಗಿದ್ದ ಪ್ರಿಯಾಮೋಹನ್ ಅವರು ಪಕ್ಷದಲ್ಲಿ ಹಾಗೂ ಸರಕಾರದಲ್ಲಿ ಬಲವಾದ ಹಿಡಿತ ಹೊಂದಿದ್ದರು. 2012ರಲ್ಲಿ ಅವರು ಮುಖ್ಯಮಂತ್ರಿ ನವೀನ್ ಪಟ್ನಾಯಕ್ ವಿರುದ್ಧ ಬಂಡಾಯವೇಳಲು ಯತ್ನಿಸಿದ್ದೇ ಅವರ ರಾಜಕೀಯ ಪತನಕ್ಕೆ ನಾಂದಿಯಾಯಿತು.
ತೃಣಮೂಲ ಕಾಂಗ್ರೆಸ್‌ನ ಸ್ಥಾಪಕ ಸದಸ್ಯರಲ್ಲೊಬ್ಬರಾದ ಮುಕುಲ್‌ರಾಯ್ ಅವರು ಪಕ್ಷದಲ್ಲಿ ನಂ.2 ಆಗಿ ಬೆಳೆಯತೊಡಗಿದ್ದರು. ಆದರೆ ಪಕ್ಷದ ಚುಕ್ಕಾಣಿ ಹಿಡಿಯುವ ಮುಕುಲ್‌ರಾಯ್ ಅವರ ಉದ್ದೇಶವನ್ನು ಮನಗಂಡ ದೀದಿ ಮಮತಾ ಬ್ಯಾನರ್ಜಿ 2015ರ ಫೆಬ್ರವರಿಯಲ್ಲಿ ಅವರನ್ನು ಪಕ್ಷದಿಂದ ಉಚ್ಚಾಟಿಸಿದರು. ಇದಾದ ಒಂದು ವರ್ಷದ ಬಳಿಕ ಮರಳಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಿದರು.
ಅದೇ ರೀತಿ ಬಿಎಸ್ಪಿ ಕೂಡಾ ಮಾಯಾವತಿಯವರನ್ನು ಬಿಟ್ಟರೆ ಯಾವುದೇ ಪ್ರಭಾವಿ ನಾಯಕರನ್ನು ಹೊಂದಿಲ್ಲ. ತಮಗೆ ಸರಿಸಮಾನವಾದ ನಾಯಕರನ್ನು ಬೆಳೆಯಲು ಬಿಡದಿರುವುದಕ್ಕೆ ಪ್ರಾದೇಶಿಕ ಪಕ್ಷಗ ಅಧಿನಾಯಕರಿಗೆ ಅವರದ್ದೇ ಆದ ಕಾರಣಗಳಿರುತ್ತವೆ. ಆಂಧ್ರಪ್ರದೇಶದ ಸಿಎಂ ಎನ್.ಚಂದ್ರಬಾಬು ನಾಯ್ಡು, ಆಗ ತೆಲುಗುದೇಶಂ ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿಯಾಗಿದ್ದ ತನ್ನ ಮಾವ ಎನ್.ಟಿ.ರಾಮರಾವ್ ವಿರುದ್ಧ ಬಂಡಾಯ ನಡೆಸಿದ ಬಳಿಕವೇ 1995ರಲ್ಲಿ ಮೊದಲ ಅವಧಿಗೆ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ್ದರು.
ಎಡಿಎಂಕೆ ಪಕ್ಷದ ಈಗಿನ ಪರಿಸ್ಥಿತಿಯು, ಒಬ್ಬ ನಾಯಕನ ವರ್ಚಸ್ಸನ್ನೇ ಅವಲಂಭಿಸಿರುವ ಪ್ರಾದೇಶಿಕ ಪಕ್ಷಗಳಿಗೆ ಒಂದು ಒಳ್ಳೆಯ ಪಾಠವಾಗಲಿದೆ.







