ಬಿಜೆಪಿಯ ಕುತಂತ್ರ ರಾಜಕೀಯಕ್ಕೆ ಬಲಿಯಾಗದಿರಿ: ದಲಿತರಿಗೆ ಗಾಯತ್ರಿ ಎಚ್ಚರಿಕೆ
ಚಿಕ್ಕಮಗಳೂರು,ಡಿ.6: ಹಲವು ದಶಕಗಳಿಂದ ದಲಿತರನ್ನು ಕಡೆಗಣಿಸಿ ರಾಜಕೀಯ ಮಾಡುತ್ತಿರುವ ಬಿಜೆಪಿ ಪಕ್ಷದವರಿಗೆ ಇತ್ತೀಚೆಗೆ ದಲಿತರ ಮೇಲೆ ಪ್ರೀತಿ ಉಕ್ಕುತ್ತಿದೆ ಎಂದರೆ ಯೋಚಿಸಬೇಕಾದ ಅಗತ್ಯವಿದೆ ಎಂದು ಮಾಜಿ ಎಂಎಲ್‌ಸಿ ಗಾಯಿತ್ರಿಶಾಂತೇಗೌಡ ತಿಳಿಸಿದ್ದಾರೆ.
ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಎಸ್ಸಿಎಸ್ಟಿ ವಿಭಾಗ ಹಮ್ಮಿಕೊಂಡಿದ್ದ ‘ಡಾ.ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಿಜೆಪಿಯವರು ಸಹಪಂಕ್ತಿ ಭೋಜನದ ಮೂಲಕ ವೋಟ್ ಬ್ಯಾಂಕ್ ರಾಜಕಾರಣಕ್ಕೆ ದಲಿತರ ಮನ ಸೆಳೆಯಲು ತಂತ್ರಗಾರಿಕೆ ಮಾಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಮುಗ್ಧಜನ ಬಿಜೆಪಿಯ ಬೂಟಾಟಿಕೆ ರಾಜಕಾರಣಕ್ಕೆ ಮಾರುಹೋಗದೆ ನಿಮ್ಮ ವರ್ಚಸ್ಸನ್ನು ಬೆಳೆಸಿಕೊಂಡು ಭವಿಷ್ಯ ರೂಪಿಸಿಕೊಳ್ಳಲು ಕಾಂಗ್ರೆಸ್ ಪಕ್ಷವನ್ನು ಸದೃಢವಾಗಿ ಬೆಳೆಸಬೇಕು.
ದಲಿತರ ಏಳಿಗೆಗಾಗಿ ಕಾಂಗ್ರೆಸ್ ಪಕ್ಷ ನೂರಾರು ಯೋಜನೆಗಳನ್ನು ರೂಪಿಸಿ ಬಹಳಷ್ಟು ಕೆಲಸ ಮಾಡಿದೆ. ಡಾ.ಜಿ.ಪರಮೇಶ್ವರ್ ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಬಹಳಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ ಎಂದರು.
ಕಾಂಗ್ರೆಸ್ ಮುಖಂಡ ರಾಮಚಂದ್ರ ಮಾತನಾಡಿ, ದಲಿತರ ವೋಟ್ ಬ್ಯಾಂಕ್‌ಗಾಗಿ ಓಲೈಕೆ ರಾಜಕಾರಣ ಮಾಡುವುದು ಬಿಜೆಪಿ ಕೋಮುವಾದಿ ರಾಜಕಾರಣದ ಮತ್ತೊಂದು ಮುಖ. ದೇಶದಲ್ಲಿ ಅಶಾಂತಿ ಸೃಷ್ಟಿಮಾಡಲು ಬಾಬರಿ ಮಸೀದಿ ಕೆಡವಿ ವಿಜಯೋತ್ಸವ ಆಚರಿಸುತ್ತಿದೆ ಎಂದು ದೂರಿದ ಅವರು, ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಎಂದೂ ಇಲ್ಲದ ಕಾಳಜಿ ಇದ್ದಕ್ಕಿದ್ದಂತೆ ಉಕ್ಕಿ ಗುಣಗಾನ ಮಾಡಲು ಆರಂಭಿಸಿರುವುದನ್ನು ದಲಿತರು ಅರಿತು ಅವರ ಕುತಂತ್ರ ರಾಜಕಾರಣಕ್ಕೆ ಬಲಿಯಾಗ ಬಾರದು ಎಂದು ನುಡಿದರು.
ಈ ಸಂದರ್ಭದಲ್ಲಿ ಎಸ್ಸಿ ಎಸ್ಟಿ ವಿಭಾಗದ ಜಿಲ್ಲಾಧ್ಯಕ್ಷ ಮಲ್ಲೇಶ್, ಮುಖಂಡರಾದ ನಝೀರ್, ಶಾಂತಕುಮಾರ್, ಹನೀಫ್, ಚಂದ್ರು, ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು.









