ಅಮ್ಮಾ ರಾಜಕಾರಣದ ಟೈಮ್‌ಲೈನ್

ತಮಿಳುನಾಡಿನ ಲಕ್ಷಾಂತರ ಜನತೆಯಿಂದ ಅಮ್ಮಾ ಎಂದೇ ಅಭಿಮಾನದಿಂದ ಕರೆಸಿಕೊಂಡಿದ್ದ ಜಯಲಲಿತಾ ಅವರ ರಾಜುಕೀಯ ಬದುಕಿನ ಏಳುಬೀಳುಗಳ ಕಾಲಗತಿಯನ್ನು ಇಲ್ಲಿ ನೀಡಲಾಗಿದೆ.
ಜೂನ್ 24, 1991: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತನ್ನ ನಾಯಕತ್ವದಲ್ಲಿ ಎಡಿಎಂಕೆಯು ಪ್ರಚಂಡ ಬಹುಮತದೊಂದಿಗೆ ಗೆಲುವು ಸಾಧಿಸಿದ ಬಳಿಕ ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಾ ಪ್ರಮಾಣವಚನ ಸ್ವೀಕಾರ.
ಮೇ, 1996: ಜಯಾ ಆಡಳಿತದಲ್ಲಿ ವ್ಯಾಪಕ ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ಬೆನ್ನಲ್ಲೇ, ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಡಿಎಂಕೆಗೆ ಪರಾಭವ. ಕರುಣಾನಿಧಿ ನೇತೃತ್ವದಲ್ಲಿ ಡಿಎಂಕೆ ಮರಳಿ ಅಧಿಕಾರಕ್ಕೆ.
ಜುಲೈ 11,1996: ಜಯಲಲಿತಾ ಅವರು 1991ರಿಂದ 1996ರ ಮಧ್ಯದ ಅವಧಿಯಲ್ಲಿ ತನ್ನ ಘೋಷಿತ ಆದಾಯವನ್ನು ಮೀರಿ 66.5 ಕೋಟಿ ರೂ. ಮೊತ್ತದ ಆಕ್ರಮ ಸಂಪತ್ತನ್ನು ಕೂಡಿಹಾಕಿದ್ದಾರೆಂದು ಆರೋಪಿಸಿ, ಆಗಿನ ಜನತಾಪಕ್ಷ ನಾಯಕ ಡಿ. ಸುಬ್ರಹ್ಮಣ್ಯನ್ ಸ್ವಾಮಿ ಅವರಿಂದ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲು.
ಡಿಸೆಂಬರ್ 7, 1996: ಅಕ್ರಮ ಆಸ್ತಿ ಸಂಗ್ರಹ ಸೇರಿದಂತೆ ಭ್ರಷ್ಟಾಚಾರದ ಆರೋಪದಲ್ಲಿ ಜಯಾ ಬಂಧನ.
1997: ಅಕ್ರಮ ಅಸ್ತಿ ಪ್ರಕರಣಕ್ಕೆ ಸಂಬಂಧಿಸಿ ಜಯಲಲಿತಾ, ಆಕೆಯ ಆಪ್ತಸ್ನೇಹಿತೆ ಶಶಿಕಲಾ ಹಾಗೂ ಇತರ ಇಬ್ಬರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ.
ಎಪ್ರಿಲ್, 1997: ಜಯಲಲಿತಾ, ಆಕೆಯ ಸಂಪುಟ ಸಹದ್ಯೋಗಿಗಳು ಮತ್ತಿತರರ ವಿರುದ್ಧದ 47 ಭ್ರಷ್ಟಾಚಾರ ಪ್ರಕರಣಗಳ ವಿಚಾರಣೆಗಾಗಿ ಡಿಎಂಕೆ ಸರಕಾರದಿಂದ ಮೂರು ವಿಶೇಷ ನ್ಯಾಯಾಲಯಗಳ ಸ್ಥಾಪನೆ.
ಜೂನ್ 4, 1997: ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜಯಾ ವಿರುದ್ಧ ಚಾರ್ಜ್‌ಶೀಟ್.
1999: ಕಲ್ಲಿದ್ದಲು ಆಮದು ಹಗರಣದಲ್ಲಿ ವಿಶೇಷ ನ್ಯಾಯಾಲಯ ದಿಂದ ಜಯಾ ದೋಷಮುಕ್ತಿ. ತೀರ್ಪು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್.
ಫೆಬ್ರವರಿ 2, 2000: ‘ಪ್ಲೀಸಂಟ್ ಸ್ಟೇ ಹೊಟೇಲ್’ ಪ್ರಕರಣದಲ್ಲಿ ನಿಯಮಗಳನ್ನು ಉಲ್ಲಂಘಿಸಿ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಿದ್ದಕ್ಕಾಗಿ ಜಯಾ ದೋಷಿಯೆಂದು ತೀರ್ಪು ನೀಡಿದ ವಿಶೇಷ ನ್ಯಾಯಾಲಯ. ಅಕ್ರಮ ಆಸ್ತಿ ಪ್ರಕರಣದ ತನಿಖೆಯಲ್ಲಿ ಪ್ರಗತಿ. ಆಗಸ್ಟ್ 2000ನೆ ಇಸವಿಯೊಳಗೆ 260 ಪ್ರಾಸಿಕ್ಯೂಶನ್ ಸಾಕ್ಷಿಗಳ ಪೈಕಿ 250 ಮಂದಿಯ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು.
ಅಕ್ಟೋಬರ್, 2000: ತಾನ್ಸಿ ಭೂಹಗರಣದಲ್ಲಿ ಜಯಾ ದೋಷಿಯೆಂದು ಚೆನ್ನೈನ ವಿಶೇಷ ನ್ಯಾಯಾಲಯದ ತೀರ್ಪು.
ಮೇ 14, 2001: ವಿಧಾನಸಭಾ ಚುನಾವಣೆಯಲ್ಲಿ ಜಯಾ ನೇತೃತ್ವದಲ್ಲಿ ಎಡಿಎಂಕೆಗೆ ಪ್ರಚಂಡ ಬಹುಮತ. ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹರಾಗಿದ್ದರೂ, ಮುಖ್ಯಮಂತ್ರಿಯಾಗಿ ಪ್ರಮಾಣ.
ಸೆ. 21, 2001: ತಾನ್ಸಿ ಪ್ರಕರಣದಲ್ಲಿ ದೋಷಿಯೆಂದು ಸಾಬೀತಾದ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ವಿಶೇಷ ನ್ಯಾಯಾಲಯ ಅನರ್ಹಗೊಳಿಸಿದ್ದರಿಂದ ಜಯಲಲಿತಾರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಸಿದ ಸುಪ್ರೀಂಕೋರ್ಟ್.
ಡಿ.4, 2001: ತಾನ್ಸಿ ಹಾಗೂ ಪ್ಲೀಸಂಟ್ ಸ್ಟೇ ಹೊಟೇಲ್ ಪ್ರಕರಣಗಳಲ್ಲಿ ಮದ್ರಾಸ್ ಹೈಕೋರ್ಟ್‌ನಿಂದ ಜಯಲಲಿತಾ ದೋಷಮುಕ್ತಿ.
ಫೆಬ್ರವರಿ 21 2002: ಆಂಡಿಪಟ್ಟಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜಯಲಲಿತಾಗೆ ಗೆಲುವು.
ಮಾರ್ಚ್ 2, 2002: ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಮತ್ತೆ ಪ್ರಮಾಣ. ಗಳಿಕೆಗೆ ಮೀರಿದ ಆಸ್ತಿ ಪ್ರಕರಣದಲ್ಲಿ ವಾದಿಸಿದ್ದ ಮೂವರು ಸರಕಾರದ ಪ್ರಾಸಿಕ್ಯೂಟರ್‌ಗಳು ಹಾಗೂ ಓರ್ವ ಹಿರಿಯ ಕಾನೂನು ಸಮಾಲೋಚಕರ ರಾಜೀನಾಮೆ. ಹಲವಾರು ಪ್ರಾಸಿಕ್ಯೂಶನ್ ಪರ ಸಾಕ್ಷಿಗಳಿಂದ ತಾವು ಹಿಂದೆ ನೀಡಿದ್ದ ಹೇಳಿಕೆಗಳ ಹಿಂದೆಗೆತ.
ನವೆಂಬರ್ 18, 2003: ಡಿಎಂಕೆ ಸಲ್ಲಿಸಿದ ಅರ್ಜಿಯ ಹಿನ್ನೆಲೆಯಲ್ಲಿ, ಜಯಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತನಿಖೆಯನ್ನು ಬೆಂಗಳೂರಿಗೆ ವರ್ಗಾಯಿಸಿದ ಸುಪ್ರೀಂಕೋರ್ಟ್.
ನವೆಂಬರ್ 24, 2003: ತಾನ್ಸಿ ಪ್ರಕರಣದಲ್ಲಿ ಜಯಲಲಿತಾ ದೋಷಮುಕ್ತಿಯನ್ನು ಎತ್ತಿಹಿಡಿದ ಸುಪ್ರೀಂಕೋರ್ಟ್.
ಜನವರಿ 23, 2004: 28.28 ಕೋಟಿ ರೂ. ಎಸ್‌ಪಿಐಸಿ ಹೂಡಿಕೆ ಹಿಂತೆಗೆತ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯದಿಂದ ಜಯಾ ಅವರ ದೋಷಮುಕ್ತಿ.
ಫೆಬ್ರವರಿ 19, 2005: ಜಯಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕರ್ನಾಟಕ ಸರಕಾರದಿಂದ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಮಾಜಿ ಎಡ್ವೊಕೇಟ್ ಜನರಲ್ ಬಿ. ವಿ. ಆಚಾರ್ಯ ನೇಮಕ.
ಮೇ 11, 2006: ವಿಧಾನಸಭಾ ಚುನಾವಣೆಯಲ್ಲಿ ಎಡಿಎಂಕೆಗೆ ಸೋಲು. ಅಧಿಕಾರಕ್ಕೆ ಮರಳಿದ ಡಿಎಂಕೆ.
ಮೇ 16, 2011: ವಿಧಾನಸಭಾ ಚುನಾವಣೆಯಲ್ಲಿ ಎಡಿಎಂಕೆಯನ್ನು ಮತ್ತೆ ಗೆಲುವಿನ ದಡ ಸೇರಿಸಿದ ಜಯಲಲಿತಾ. 2011ರ ಅಕ್ಟೋಬರ್/ನವೆಂಬರ್‌ನಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ. ಅಕ್ರಮ ಆಸ್ತಿ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯದಲ್ಲಿ ಜಯಲಲಿತಾರಿಂದ ಹೇಳಿಕೆ ಹಾಗೂ ನ್ಯಾಯಾಧೀಶರು ಕೇಳಿದ 1,339 ಪ್ರಶ್ನೆಗಳಿಗೆ ಉತ್ತರ.
ಆಗಸ್ಟ್ 12, 2012: ಕರ್ನಾಟಕ ಸರಕಾರದ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಮುಂದುವರಿಯಲು ತನ್ನ ಅಸಾಮರ್ಥ್ಯ ವ್ಯಕ್ತಪಡಿಸಿ ಬಿ.ವಿ.ಆಚಾರ್ಯ ಹುದ್ದೆಗೆ ರಾಜೀನಾಮೆ.
ಫೆ.2, 2013: ಕರ್ನಾಟಕ ಸರಕಾರದಿಂದ ವಿಶೇಷ ಸಾರ್ವಜನಿಕ ಅಭಿಯೋಜಕರಾಗಿ ಜಿ. ಭವಾನಿಸಿಂಗ್ ನೇಮಕ.
ಆಗಸ್ಟ್ 28, 2014: ತೀರ್ಪು ಕಾದಿರಿಸಿದ ವಿಶೇಷ ನ್ಯಾಯಾಲಯ.
ಸೆಪ್ಟಂಬರ್ 27, 2014: ಭ್ರಷ್ಟಾಚಾರ ಆರೋಪದಲ್ಲಿ ಜಯಲಲಿತಾ ಹಾಗೂ ಇತರ ಮೂವರು ದೋಷಿಗಳೆಂದು ವಿಶೇಷ ನ್ಯಾಯಾಲಯ ತೀರ್ಪು. ಪ್ರತಿಯೊಬ್ಬರಿಗೂ ತಲಾ ನಾಲ್ಕು ವರ್ಷಗಳ ಜೈಲು ಶಿಕ್ಷೆ. ಜಯಾಗೆ ನೂರು ಕೋಟಿ ರೂ. ಹಾಗೂ ಇತರ ಮೂವರು ಆರೋಪಿಗಳಿಗೆ ತಲಾ 10 ಕೋಟಿ ರೂ. ದಂಡ. ಶಾಸಕಿ ಸ್ಥಾನದಿಂದ ಅನರ್ಹಗೊಂಡಿದ್ದರಿಂದ ಮುಖ್ಯಮಂತ್ರಿ ಹುದ್ದೆ ಕಳೆದುಕೊಂಡ ಜಯಾ
ಅಕ್ಟೋಬರ್ 18, 2014: ಸುಪ್ರೀಂಕೋರ್ಟ್‌ನಿಂದ ಜಯಲಲಿತಾಗೆ ಜಾಮೀನು. 21 ದಿನಗಳ ಬಳಿಕ ಬೆಂಗಳೂರು ಜೈಲಿನಿಂದ ಬಿಡುಗಡೆ.
ಜನವರಿ 24, 2015: ವಿಶೇಷ ಸಾರ್ವಜನಿಕ ಅಭಿಯೋಜಕ (ಎಸ್‌ಪಿಪಿ)ರಾಗಿ ಭವಾನಿಸಿಂಗ್ ಅವರನ್ನು ಮುಂದುವರಿಸದಂತೆ ಕೋರಿ ಅನ್ಬಳಗನ್ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್.
ಜ. 24, 2015: ತಾನು ನಿರ್ದೋಷಿಯೆಂಬ ಜಯಲಲಿತಾ ಅವರ ಮನವಿಯನ್ನು ಪ್ರಶ್ನಿಸಲು ತನಗೆ ಅನುಮತಿ ನೀಡಬೇಕೆಂದು ಕೋರಿ ಬಿಜೆಪಿ ನಾಯಕ ಸುಬ್ರಮಣ್ಯನ್ ಸ್ವಾಮಿ ಅವರಿಂದ ತಮಿಳುನಾಡು ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ.
ಫೆ.11,2015: ಭವಾನಿಸಿಂಗ್ ಅವರನ್ನು ಎಸ್‌ಪಿಪಿಯಾಗಿ ಮುಂದುವರಿಸಬಾರದೆಂಬ ತನ್ನ ಅರ್ಜಿಯನ್ನು ತಿರಸ್ಕರಿಸಿದ್ದನ್ನು ಪ್ರಶ್ನಿಸಿ ಅನ್ಬಳಗನ್ ಸಲ್ಲಿಸಿದ ಮೇಲ್ಮನವಿಯನ್ನು ತಳ್ಳಿಹಾಕಿದ ಹೈಕೋರ್ಟ್.
ಮಾರ್ಚ್ 11, 2015: ಜಯಲಲಿತಾ ಅವರ ಮನವಿಯನ್ನು ತಿರಸ್ಕರಿಸುವಂತೆ ಹಾಗೂ ಆಕೆಗೆ ವಿಧಿಸಲಾದ ಶಿಕ್ಷೆಯನ್ನು ದೃಢಪಡಿಸುವಂತೆ ಹೈಕೋರ್ಟ್‌ಗೆ ಸುಬ್ರಮಣ್ಯನ್ ಸ್ವಾಮಿ ಮನವಿ.
ಮಾರ್ಚ್ 11, 2015: ಜಯಲಲಿತಾ ಹಾಗೂ ಇತರ ಮೂವರ ವಿರುದ್ಧ ಸಲ್ಲಿಸಿದ ಮನವಿಯ ಮೇಲಿನ ಆದೇಶವನ್ನು ಕಾದಿರಿಸಿದ ಕರ್ನಾಟಕ ಹೈಕೋರ್ಟ್.
ಎಪ್ರಿಲ್ 27, 2015: ತಮಿಳುನಾಡು ಸರಕಾರದಿಂದ ಎಸ್‌ಪಿಪಿಯಾಗಿ ಭವಾನಿಸಿಂಗ್ ಅವರ ನೇಮಕವನ್ನು ಅನೂರ್ಜಿತಗೊಳಿಸಿದ ಸುಪ್ರೀಂಕೋರ್ಟ್.
ಎಪ್ರಿಲ್ 28, 2015: ಕರ್ನಾಟಕ ಸರಕಾರದಿಂದ ಎಸ್‌ಪಿಪಿಯಾಗಿ ಬಿ. ವಿ. ಆಚಾರ್ಯ ಮರುನೇಮಕ. ಜಯಲಲಿತಾ ಮತ್ತಿತರ ಆರೋಪಿಗಳು ಸಲ್ಲಿಸಿದ ಮನವಿಯನ್ನು ತಿರಸ್ಕರಿಸುವಂತೆ ಹೈ ಕೋರ್ಟ್‌ಗೆ ಲಿಖಿತ ಮನವಿ.
ಮೇ 11, 2015: ಕರ್ನಾಟಕ ಹೈಕೋರ್ಟ್‌ನಿಂದ ಜಯಲಲಿತಾ ದೋಷಮುಕ್ತಿ.
ಮೇ 22, 2015: ಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಜಯಲಲಿತಾ ಆಯ್ಕೆ.
ಮೇ 23, 2015: ಮುಖ್ಯಮಂತ್ರಿಯಾಗಿ ಐದನೆ ಬಾರಿಗೆ ಅಧಿಕಾರ ಸ್ವೀಕಾರ.
ಮೇ 16, 2016: ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 236 ಸ್ಥಾನಗಳೊಂದಿಗೆ ಎಡಿಎಂಕೆ ಮತ್ತೆ ಅಧಿಕಾರಕ್ಕೆ.
ಮೇ 23, 2016: ಜಯಾ ಆರನೆ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ.
ಜಯಲಲಿತಾ ಇತ್ತೀಚೆಗೆ ತೀವ್ರ ಅಸ್ವಸ್ಥರಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದರೂ ಮುಖ್ಯಮಂತ್ರಿಯಾಗಿ ಮುಂದುವರಿದಿದ್ದು, ಅವರ ಅತ್ಯಂತ ನಿಷ್ಠಾವಂತ ಬೆಂಬಲಿಗರೆನಿಸಿಕೊಂಡಿರುವ ಸಚಿವ ಪನ್ನೀರ್‌ಸೆಲ್ವಂ ಸರಕಾರದ ಉಸ್ತುವಾರಿ ವಹಿಸಿಕೊಂಡಿದ್ದರು.







