‘ಅಮ್ಮಾ’ ಬ್ರಾಂಡ್

ತಮಿಳುನಾಡಿನ ಅಮ್ಮನಾದ ‘ಅಮ್ಮು’ಭಾರತದಲ್ಲಿ ಕೆಲವು ಖ್ಯಾತ ರಾಜಕಾರಣಿಗಳು ಮತ್ತು ನಾಯಕರು ತಮ್ಮ ಅಧಿಕೃತ ಹೆಸರಿನ ಜೊತೆಗೆ ಜನರಿಗೆ ಪ್ರಿಯವಾದ ಇನ್ನೊಂದು ಹೆಸರಿನಿಂದ ಕರೆಸಿಕೊಳ್ಳುವುದು ಸಾಮಾನ್ಯ. ಮಹಾತ್ಮಾ ಗಾಂಧಿ, ಪಂಡಿತ್ ಜವಾಹರಲಾಲ್ ನೆಹರೂ, ಮಾಯಾವತಿ, ಮಮತಾ ಬ್ಯಾನರ್ಜಿ ಮತ್ತು ಜಯಲಲಿತಾ ಬೇರೆ ಬೇರೆ ಹೆಸರುಗಳಿಂದ ಖ್ಯಾತರಾಗಿದ್ದಾರೆ.
ಪ್ರಸ್ತುತ ಮಾಯಾವತಿ ‘ಬೆಹೆನ್‌ಜಿ’ ಮತ್ತು ಮಮತಾ ‘ದೀದಿ’ ಎಂದು ಅಭಿಮಾನಿಗಳಿಂದ ಕರೆಸಿಕೊಳ್ಳುತ್ತಿದ್ದಾರೆ. ‘ಬೆಹೆನ್‌ಜಿ’ ಮತ್ತು ‘ದೀದಿ’ ಎಂದರೆ ಸಹೋದರಿ ಎಂದರ್ಥ. ಆದರೆ ಜಯಲಲಿತಾ ತಮಿಳುನಾಡಿನ ಜನರ ಪಾಲಿಗೆ ‘ಅಮ್ಮ’ (ತಾಯಿ) ಆಗಿದ್ದಾರೆ. ಖ್ಯಾತ ಪತ್ರಕರ್ತೆ ವಸಂತಿ ಅವರು ಹೇಳುವಂತೆ ಜಯಲಲಿತಾ ಬಾಲ್ಯದಲ್ಲಿ ಮನೆ ಮಂದಿಗೆ ಮುದ್ದಿನ ‘ಅಮ್ಮು’ ಆಗಿದ್ದರು.
ಜಯಲಲಿತಾ ಎರಡರ ಹರೆಯಕ್ಕೆ ಕಾಲಿಡುತ್ತಿದ್ದಂತೆ ಆಕೆಯ ತಂದೆ ನಿಧನರಾದರು. ಬಳಿಕ ಜಯಲಲಿತಾ ಬೆಂಗಳೂರಿನ ಅಜ್ಜನ ಮನೆ ಸೇರಿದರು. ಅಲ್ಲಿಯೇ ಅಮ್ಮು ಶಿಕ್ಷಣ ಪಡೆದರು. ಪ್ರತಿಭಾವಂತ ವಿದ್ಯಾರ್ಥಿನಿಯಾಗಿದ್ದ ಜಯಲಲಿತಾ ಹಲವು ಪದಕಗಳನ್ನು ಬಾಚಿಕೊಂಡಿದ್ದರು. ಅವರು ವಕೀಲೆಯಾಗುವ ಕನಸು ಕಂಡಿದ್ದರು. ಆದರೆ ಅವರನ್ನು ಚಿಕ್ಕಂದಿನಲ್ಲೇ ಚಿತ್ರರಂಗ ಕೈ ಬೀಸಿ ಕರೆದಿತ್ತು. ಮೊದಲು ಕನ್ನಡ, ಬಳಿಕ ತಮಿಳು ಚಿತ್ರದಲ್ಲಿ ಅವರು ಕಾಣಿಸಿಕೊಂಡಿದ್ದರು. ಎಂ. ಜಿ. ರಾಮಚಂದ್ರನ್ ಮೂಲಕ ಅವರು ರಾಜಕೀಯ ಪ್ರವೇಶಿಸಿದ್ದರು.
ಬ್ರಾಂಡ್ ಅಮ್ಮಾ2011ರ ಬಳಿಕ ಜಯಲಲಿತಾ ಅವರ ಅಮ್ಮ ಬ್ರಾಂಡ್ ಬೆಳೆಯಿತು. ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದರು. ಮುಖ್ಯ ಮಂತ್ರಿಯ ಕಚೇರಿ ಜನಸಾಮಾನ್ಯರ ಕಲ್ಯಾಣಕ್ಕೆ ಇರುವಂತಹದ್ದು, ಮುಖ್ಯ ಮಂತ್ರಿ ರಾಜ್ಯದ ಜನತೆಗೆ ತಾಯಿ ಇದ್ದಂತೆ ಎಂಬ ಸಂದೇಶ ನೀಡಿದರು. ಅಮ್ಮ ಕ್ಯಾಂಟೀನ್, ಅಮ್ಮ ಸಾಲ್ಟ್, ಅಮ್ಮ ಫಾರ್ಮೆಸಿ, ಅಮ್ಮ ಸಿಮೆಂಟ್, ಅಮ್ಮ ಕುಡಿಯುವ ನೀರು ಯೋಜನೆಯನ್ನು ಜಾರಿಗೊಳಿಸಿದ ಜಯ ಲಲಿತಾ ತಮಿಳುನಾಡಿನ ‘ಅಮ್ಮ’ನಾಗಿ ಮೆಚ್ಚುಗೆ ಗಳಿಸಿದರು.
ಕಳೆದ ಸೆಪ್ಟಂಬರ್‌ನಲ್ಲಿ ಅರ್ಥಿಕವಾಗಿ ಹಿಂದುಳಿದ ಕುಟುಂಬಗಳ ಅನುಕೂಲಕ್ಕಾಗಿ ಮಕ್ಕಳ ಮದುವೆ ಉದ್ದೇಶಕ್ಕಾಗಿ ಹವಾನಿಯಂತ್ರಿತ ‘ಅಮ್ಮ ಮ್ಯಾರೇಜ್ ಹಾಲ್’ ನಿರ್ಮಾಣಕ್ಕೆ ಚಾಲನೆ ನೀಡಿದರು. ವಿಪಕ್ಷಗಳಿಗೆ ಅವರ ಯೋಜನೆಗಳು ಮರ್ಮಾಘಾತ ನೀಡಿತ್ತು. ಜಯಲಲಿತಾ ತಮಿಳುನಾಡಿನ ಜನತೆಗೆ ಅಮ್ಮನಾಗಿ ಅವರ ಆವಶ್ಯಕತೆಗಳನ್ನು ಪೂರೈಸಿದ್ದಾರೆ. ಮುಖ್ಯಮಂತ್ರಿಯಾಗಿ ಜನತೆಗೆ ಏನನ್ನು ನೀಡಬೇಕೋ ಅವೆಲ್ಲವನ್ನು ನೀಡಲು ಶ್ರಮಿಸಿದ್ದಾರೆ.







