ಬಾಬರಿ ಮಸೀದಿ ಪುನರ್ ನಿರ್ಮಾಣಕ್ಕೆ ಆಗ್ರಹ
ಶಿವಮೊಗ್ಗ, ಮಡಿಕೇರಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ ಶಿವಮೊಗ್ಗ, ಡಿ. 6: ಬಾಬರಿ ಮಸೀದಿ ಪುನರ್ ನಿರ್ಮಿಸಿ, ಜಾತ್ಯತೀತತೆಯನ್ನು ಮರು ಸ್ಥಾಪಿಸಿ ಎಂಬ ಘೋಷಣೆಯೊಂದಿಗೆ, ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ಸಂಘಟನೆ ಯು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ತದನಂತರ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿಗೆ ಮನವಿ ಪತ್ರ ಅರ್ಪಿಸಿದರು. ಮತಾಂಧ ಶಕ್ತಿಗಳು ಡಿ.6ರಂದು ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದವು. ಈ ಮೂಲಕ ದೇಶದ ಪ್ರಜಾಪ್ರಭುತ್ವದ ವ್ಯವಸ್ಥೆಗೆ ಅವಮಾನ ಮಾಡಿದವು.
ಆನಂತರ ನಡೆದ ಹಿಂಸಾಚಾರದಲ್ಲಿ ಸಾವಿರಾರು ಭಾರತೀಯರು ಕೊಲ್ಲಲ್ಪಟ್ಟರು.ಈ ಘಟನೆಯ ನಂತರ ದೇಶದಲ್ಲಿ ಕೋಮು ಸಾಮರಸ್ಯ, ಸಹಬಾಳ್ವೆ ಮತ್ತು ಅನ್ಯೋನ್ಯತೆಗೆ ತೀವ್ರ ಪೆಟ್ಟು ಬಿದ್ದಿದೆ. ಶತಮಾನಗಳಿಂದ ಅಣ್ಣ ತಮ್ಮಂದಿರಂತೆ ಬಾಳುತ್ತಿದ್ದ ಸಮಾಜದಲ್ಲಿ ಅಪನಂಬಿಕೆ ಮತ್ತು ದ್ವೇಷ ಹೊಗೆಯಾಡಲಾರಂಭಿಸಿತು.
ಸಹೋದರ ಸಂಬಂಧಗಳು ಮುರಿದುಬಿದ್ದು ಒಬ್ಬರನ್ನೊಬ್ಬರು ಸಂಶಯದಿಂದ ಕಾಣುವಂತಾಯಿತು ಎಂದು ಪ್ರತಿಭಟನಾಕಾರರು ತಿಳಿಸಿದ್ದಾರೆ. ಬಾಬರಿ ಮಸೀದಿಯ ಪುನರ್ ನಿರ್ಮಾಣ ಮತ್ತು ಸ್ಮಾರಕ ಧ್ವಂಸಗೊಳಿಸಿದವರಿಗೆ ಶಿಕ್ಷೆಯಾಗುವವರೆಗೆ ದೇಶದ ಜಾತ್ಯತೀತತೆಯ ಮರು ಸ್ಥಾಪನೆ ಸಾಧ್ಯವಿಲ್ಲ ಎನ್ನುವುದು ಸತ್ಯವಾಗಿದೆ.
ಆದ್ದರಿಂದ ನ್ಯಾಯ ಸಿಗುವವರೆಗೆ ಜಾತ್ಯತೀತ ಮನೋಭಾವದವರು ನಿರಂತರ ಹೋರಾಟವನ್ನು ಮುಂದುವರಿಸುವ ಆವಶ್ಯಕತೆ ಇದೆ ಎಂದು ಹೇಳಿದರು. ಈ ಸಂದಭರ್ದಲ್ಲಿ ಪಕ್ಷದ ಮುಖಂಡರಾದ ಖಲೀಂ ಉಲ್ಲಾ, ಮುಜೀಬ್, ಇಮ್ರಾನ್, ಹಬೀದ್, ಬಾಲಸುಬ್ರಹ್ಮಣ್ಯ, ಬಶೀರ್ ಸಾಬ್ ಮೊದಲಾದವರು ಉಪಸ್ಥಿತರಿದ್ದರು.







