ಉತ್ತರ ಕೇರಳಕ್ಕೂ ಜಯಲಲಿತಾ ನಂಟು

ಕಾಸರಗೋಡು, ಡಿ.6: ತಮಿಳುನಾಡಿನ ಮುಖ್ಯಮಂತ್ರಿ ಜೆ.ಜಯಲಲಿತಾ ಉತ್ತರ ಕೇರಳಕ್ಕೂ ಭೇಟಿ ನೀಡಿದ್ದರು. 15 ವರ್ಷಗಳ ಹಿಂದೆ 2001ರ ಜುಲೈ 7ರಂದು ಕಾಸರಗೋಡು ಸಮೀಪದ ತಳಿಪರಂಬ ಶ್ರೀರಾಜರಾಜೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಜಯಲಲಿತಾ ಅವರ ಆಪ್ತೆ ಶಶಿಕಲಾ ಕೂಡ ಜೊತೆಗಿದ್ದರು. 1996ರ ಚುನಾವಣೆಯಲ್ಲಿ ಜಯಲಲಿತಾರವರ ಎಐಡಿಎಂಕೆ ಹೀನಾಯ ಸೋಲು ಕಂಡಿತ್ತು.
2001ರಲ್ಲಿ ನಡೆದ ಚುನಾವಣೆಯಲ್ಲಿ ಭಾರೀ ಬಹುಮತದಿಂದ ಅಧಿಕಾರಕ್ಕೆ ಬಂದ ಬಳಿಕ ತಳಿಪರಂಬ ಕ್ಷೇತ್ರಕ್ಕೆ ಭೇಟಿ ನೀಡಿ, ದೇವರಿಗೆ ಚಿನ್ನದ ಕಿರೀಟ ಹಾಗೂ ಕಾಣಿಕೆಯನ್ನು ಸಲ್ಲಿಸಿದ್ದರು. ಜ್ಯೋತಿಷ್ಯ ಪರಪ್ಪನಂಗಡಿ ಉಣ್ಣಿಕೃಷ್ಣನ್ ಪಣಿಕ್ಕರ್‌ರವರ ಸಲಹೆಯಂತೆ ಜಯಲಲಿತಾ ತಳಿಪರಂಬ ದೇವಸ್ಥಾನಕ್ಕೆ ತಲುಪಿದ್ದರು. ಇದರಿಂದ ತಳಿಪರಂಬ ರಾಜ ರಾಜೇಶ್ವರಿ ಕ್ಷೇತ್ರ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಿತು. ಹಲವು ಬಾರಿ ಜಯಲಲಿತಾ ಪರ ಅವರ ಅನುಯಾಯಿಗಳು ತಳಿಪರಂಬ ದೇವಸ್ಥಾನಕ್ಕೆ ತಲುಪಿ ಪೂಜೆ ಸಲ್ಲಿಸಿದ್ದಾರೆ.
ಜಯಲಲಿತಾ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಬಳಿಕ ಕೆಲ ದಿನಗಳ ಹಿಂದೆ ಜಯಲಲಿತಾ ಅವರ ಪರ ತಮಿಳುನಾಡಿನಿಂದ ತಂಡವೊಂದು ಬಂದು ಪ್ರಾರ್ಥನೆ ಸಲ್ಲಿಸಿತ್ತು ಎನ್ನಲಾಗಿದೆ.





