ತಮಿಳರ ‘ಅಮ್ಮ’ನಿಗೂ ಕರಾವಳಿಯ ನಂಟು
ಮಂಗಳೂರು, ಡಿ.6: ತಮಿಳು ನಾಡಿನ ಮುಖ್ಯ ಮಂತ್ರಿ ಜಯಲಲಿತಾ ಬಾಲ್ಯದಿಂದಲೇ ಕರಾವಳಿ ಜನರ ಜೊತೆಗೆ ಸಂಪರ್ಕ ಹೊಂದಿದ್ದರು ಎನ್ನುವುದಕ್ಕೆ ಹಲವು ಪುರಾವೆಗಳಿವೆ. ಅವರು ಕನ್ನಡ ಚಿತ್ರರಂಗವನ್ನು ಪ್ರವೇಶಿಸಿರುವುದು ತಾಯಿಯ ಜೊತೆ ಬಾಲ ನಟಿಯಾಗಿ ಅದು ಕರಾವಳಿಯ ಮತ್ತು ತುಳು ರಂಗ ಭೂಮಿಯ ಖ್ಯಾತ ನಿರ್ದೇಶಕ ಆರೂರು ಪಟ್ಟಾಭಿ ಅವರ ಮೂಲಕ ಎಂದು ಆರೂರು ಪಟ್ಟಾಭಿಯವರ ಕುಟುಂಬದ ಸದಸ್ಯ ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ತಿಳಿಸಿದ್ದಾರೆ.
ತುಳು ಚಲನಚಿತ್ರದ ‘ಬೀಸತ್ತಿ ಬಾಬು’, ‘ಕರಿಯಣಿ ಕಟ್ಟಂದಿ ಕಂಡನಿ’ ಮೊದಲಾದ ಖ್ಯಾತ ಚಿತ್ರಗಳ ನಿರ್ದೇಶಕ ಆರೂರು ಪಟ್ಟಾಭಿಯವರು ಕರಾವಳಿಯ ಆರೂರಿನವರು. 1961ರಲ್ಲಿ ಜಯಲಲಿತಾ ತನ್ನ ತಾಯಿ (ವೇದವಲ್ಲಿ) ನಟಿ ಸಂಧ್ಯಾ ಜೊತೆ ಮದ್ರಾಸಿನಲ್ಲಿ ಆರೂರು ಪಟ್ಟಾಭಿಯವರ ‘ಶ್ರೀ ಶೈಲ ಮಹಾತ್ಮೆ ’ಎಂಬ ಕನ್ನಡ ಚಲನಚಿತ್ರದ ಮೂಲಕ ತನ್ನ ಹನ್ನೆರಡನೆ ವಯಸ್ಸಿನಲ್ಲಿ ಬಾಲನಟಿಯಾಗಿ ನಟಿಸುತ್ತಾರೆ. ತಾಯಿಯೂ ಆ ಸಂದರ್ಭ ಮೈಸೂರು ತೊರೆದು ಸಿನೆಮಾ ನಟಿಯಾಗಿ ಮದ್ರಾಸ್ ಸೇರಿದ್ದರು. ‘‘ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ನಿರ್ದೇಶಕರಾದ ಆರೂರು ಪಟ್ಟಾಭಿಯವರು ಆ ಕಾಲದಲ್ಲಿ ಅತ್ಯಂತ ಹೆಚ್ಚು ತುಳು ಚಲನಚಿತ್ರವನ್ನು ನಿರ್ದೇಶಿಸಿದವರು.
ಈ ಕಪ್ಪು ಬಿಳುಪು ಚಲನಚಿತ್ರ ರಾಷ್ಟ್ರಮಟ್ಟದ ಪುರಸ್ಕಾರವನ್ನು ಪಡೆದಿದೆ ಮತ್ತೊಂದು ವಿಶೇಷವೆಂದರೆ ಈ ಚಲನಚಿತ್ರದಲ್ಲಿ ಆರೂರು ಪಟ್ಟಾಭಿಯವರ ಪತ್ನಿ ಸಿ.ಎಸ್.ಸರೋಜಿನಿಯವರು ಒಂದು ಹಾಡು ಹಾಡಿದ್ದಾರೆ. ಜಯಲಲಿತಾ ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತೆಯಾಗಿದ್ದ ಕಾರಣ ಕೆಲವು ಬಾರಿ ಕೊಲ್ಲೂರಿಗೆ ಬಂದ ಸಂದರ್ಭ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದು ಹೋಗಿದ್ದಾರೆ’’ಎಂದು ಜಯಲಲಿತಾ ಅವರು ಕರಾವಳಿ ತುಳುನಾಡಿನ ಜೊತೆಗೆ ಇದ್ದ ಸಂಪರ್ಕದ ಬಗ್ಗೆ ಪ್ರದೀಪ್ ಕುಮಾರ್ ಕಲ್ಕೂರ ನೆನಪಿಸಿಕೊಳ್ಳುತ್ತಾರೆ.
ಕರಾವಳಿಯಲ್ಲಿ ನೆಲೆಸಿರುವ ತಮಿಳರು ತಮಿಳುನಾಡಿನ ಮುಖ್ಯಮಂತ್ರಿ ಜಯಲಲಿತಾ ಜೊತೆಗಿಂತ ಹೆಚ್ಚಾಗಿ ಕರ್ನಾಟಕ ರಾಜ್ಯದ ಜನರೊಂದಿಗೆ ನಿಕಟ ಸಂಪರ್ಕ ಹೊಂದಿರದ ಕಾರಣದಿಂದಾಗಿ ಸಾರ್ವಜನಿಕ ಸಂತಾಪ ಕಾರ್ಯಕ್ರಮಗಳು ಹೆಚ್ಚಾಗಿ ಕಂಡು ಬರಲಿಲ್ಲ. ಆದರೆ ಬಡವರ ಬಗ್ಗೆ ಜನಸಾಮಾನ್ಯರ ಬಗ್ಗೆ ಕಾಳಜಿ ಹೊಂದಿದ್ದ ಮಹಿಳಾ ನಾಯಕಿ ಜಯಲಲಿತಾ ಆಗಿದ್ದರು ಅವರಿಗೆ ಈ ರೀತಿಯ ಸಾವು ಬರಬಾರದಿತ್ತು ಎನ್ನುವ ಸಂತಾಪ ಕರಾವಳಿ ಸಾರ್ವಜನಿಕ ವಲಯದಲ್ಲೂ ವ್ಯಕ್ತವಾಗಿದೆ.







