‘ಕಾಪು ತಾಲೂಕು ರಚನೆಗೆ ಮುಖ್ಯಮಂತ್ರಿಯಿಂದ ಸಕಾರಾತ್ಮಕ ಸ್ಪಂದನೆ’

ಕಾಪು, ಡಿ.6: ಕಾಪು ತಾಲೂಕು ರಚನೆ ಬಗ್ಗೆ ಮುಖ್ಯಮಂತ್ರಿ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಈ ಕುರಿತು ಕಂದಾಯ ಸಚಿವರಿಗೂ ಮನವರಿಕೆ ಮಾಡಲಾಗುವುದು ಎಂದು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
5 ಕೋ.ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಪು ಪುರಸಭೆಯ ನೂತನ ಕಟ್ಟಡಕ್ಕೆ ಮಂಗಳವಾರ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಈ ಹಿಂದೆ ಕಂದಾಯ ಸಚಿವರಿಗೆ ಮನವಿ ಮಾಡಲಾಗಿದೆ. ಜಿಲ್ಲಾಧಿಕಾರಿಯವರ ವರದಿ ತರಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಕಾಪು ಪುರಸಭೆಯ ವ್ಯಾಪ್ತಿಯಲ್ಲಿ ಈ ವಾರ್ಷಿಕ ವರ್ಷದಲ್ಲಿ 50 ಕೋ.ರೂ. ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕಾಪು ಬಂಗ್ಲೆ ಪ್ರದೇಶದಲ್ಲಿ ತಾಲೂಕು ಮಿನಿವಿಧಾನ ಸೌಧ, ಶುದ್ಧ ಕುಡಿಯುವ ನೀರಿನ ಸಂಸ್ಕರಣಾ ಘಟಕ, ಉದ್ಯಾನವನ ನಿರ್ಮಾಣ ಮೂಲಕ ಸರಕಾರಿ ಸಂಕೀರ್ಣವಾಗಿಸಲು ಪ್ರಯತ್ನಿಸಲಾಗುವುದು ಎಂದರು.
*ಸಿಆರ್‌ಝಡ್‌ಗೆ ಪ್ರಧಾನಿ ಅಂಕಿತಕ್ಕೆ ಬಾಕಿ: ಸದ್ಯವಿರುವ 500ಮೀ. ಕರಾವಳಿ ನಿಯಂತ್ರಣ ವಲಯವನ್ನು 50ಮೀ.ಗೆ ಇಳಿಸುವಂತೆ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ ಪ್ರಧಾನಿ ಅವರ ಅಂಕಿತಕ್ಕೆ ಬಾಕಿಯಿದ್ದು, ಈಗಾಗಲೇ ಸಿಆರ್‌ಝಡ್ ನಿಯಂತ್ರಣ ಸಡಿಲಿಸಲಾಗಿದೆ ಎಂದು ಹೇಳಿದ ಸೊರಕೆ, ಕಾಪು ನಗರ ಯೋಜನಾ ಪ್ರಾಧಿಕಾರ ರಚನೆಯಾಗಿದ್ದು, ಒಂದು ವಾರದಲ್ಲಿ ನಾಮಕರಣಗೊಳ್ಳಲಿದೆ. ನಿವೇಶನ ರಹಿತರಿಗೆ ನಿವೇಶನ ನೀಡಲು ಕಂದಾಯ ಇಲಾಖೆ 10 ಎಕರೆ ಸ್ಥಳವನ್ನು ಗುರುತಿಸಿದ್ದು, ನಗರೋತ್ಥಾನದ 10 ಕೋ.ರೂ. ಅನುದಾನದಲ್ಲಿ ಪುರಸಭಾ ವ್ಯಾಪ್ತಿಯ ಮುಖ್ಯ ರಸ್ತೆಗಳನ್ನು ವಿಸ್ತರಿಸಲಾಗುವುದು ಎಂದವರು ಭರವಸೆ ನೀಡಿದರು.
4.5 ಕೋ.ರೂ. ವೆಚ್ಚದಲ್ಲಿ ಪಡುಕರೆಯಿಂದ ಉಳಿಯಾರಗೋಳಿವರೆಗಿನ ರಸ್ತೆ ವಿಸ್ತರಣೆಗೆ ಮಂಜೂರಾತಿ ದೊರೆತಿದೆ. 7.5 ಕೋ.ರೂ. ವೆಚ್ಚದ ತ್ಯಾಜ ಸಂಸ್ಕರಣಾ ಘಟಕವನ್ನು ಒಂದು ತಿಂಗಳೊಳಗೆ ಆರಂಭಿಸಲಾಗುವುದು. 70 ಕೋ.ರೂ. ವೆಚ್ಚದ ಕುಡಿಯುವ ನೀರಿನ ಯೋಜನೆಗೆ ಮುಂದಿನ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆಯಲಿದೆ ಎಂದು ಸೊರಕೆ ವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭ ಪುರಸಭೆಯ ಎಸ್‌ಎಪ್‌ಸಿ ನಿಧಿಯಿಂದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಪುರಸಭಾ ಅಧ್ಯಕ್ಷೆ ಸೌಮ್ಯಾ, ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ಸ್ಥಾಯೀ ಸಮಿತಿ ಅಧ್ಯಕ್ಷ ಹಮೀದ್ ಮೂಳೂರು, ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ ಪಾದೂರು, ಮುಖ್ಯಾಧಿಕಾರಿ ರಾಯಪ್ಪ, ಗುತ್ತಿಗೆದಾರ ವಾಸುದೇವ ಶೆಟ್ಟಿ, ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಚಂದ್ರಶೇಖರ್, ಸಹಾಯಕ ಇಂಜಿನಿಯರ್ ಡಿ.ವಿ.ಹೆಗ್ಡೆ, ಕೆಎಂಎಪ್ ನಿರ್ದೇಶಕ ಕಾಪು ದಿವಾಕರ ಶೆಟ್ಟಿ, ಬೆಳಪು ದೇವಿಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು.







