ಡಿ.10: ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ
ಮೂಡುಬಿದಿರೆ, ಡಿ.6: ಶಿವರಾಮ ಕಾರಂತ ಪ್ರತಿಷ್ಠಾನವು ಎಂ.ಸಿ.ಎಸ್. ಬ್ಯಾಂಕ್ ಸಹಯೋಗದಲ್ಲಿ ಶಿವರಾಮ ಕಾರಂತ ಪ್ರಶಸ್ತಿ ಮತ್ತು ಪುರಸ್ಕಾರ ಪ್ರದಾನ ಸಮಾರಂಭವು ಈ ಬಾರಿ ಎಂ.ಸಿ.ಎಸ್. ಬ್ಯಾಂಕ್‌ನ ಕಲ್ಪವೃಕ್ಷ ಸಭಾಂಗಣದಲ್ಲಿ ಡಿ.10ರಂದು ಬೆಳಗ್ಗೆ 9:30ಕ್ಕೆ ಪ್ರತಿಷ್ಠಾನದ ಅಧ್ಯಕ್ಷ ಕೆ.ಅಮರನಾಥ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಲಿದೆ ಎಂದು ಪ್ರತಿಷ್ಠಾನದ ಪ್ರ. ಕಾರ್ಯದರ್ಶಿ ಡಾ.ಜಯಪ್ರಕಾಶ ಮಾವಿನಕುಳಿ ತಿಳಿಸಿದ್ದಾರೆ. ಇಲ್ಲಿನ ಎಂ.ಸಿ.ಎಸ್ ಬ್ಯಾಂಕ್‌ನ ಸಭಾಂಗಣದಲ್ಲಿ ಮಂಗಳವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾತನಾಡಿದರು. ವಿಮರ್ಶಕ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ನಿಟ್ಟೆಯ ಜ.ಕೆ.ಎಸ್. ಹೆಗ್ಡೆ ಪ್ರತಿಷ್ಠಾನ ಪ್ರಾಯೋಜಿತ 15,000ರೂ. ಗೌರವ ಸಂಭಾವನೆ ಸಹಿತ ‘ಶಿವರಾಮ ಕಾರಂತ ಪ್ರಶಸ್ತಿ’ ಮತ್ತು ಡಾ.ನಾ.ಮೊಗಸಾಲೆ ಅವರಿಗೆ, ‘ಮುಖಾಂತರ’ ಕಾದಂಬರಿಗಾಗಿ, ಎಂ.ಸಿ.ಎಸ್. ಬ್ಯಾಂಕ್ ಪ್ರಾಯೋಜಿತ 10,000ರೂ. ಗೌರವ ಸಂಭಾವನೆ ಸಹಿತ ‘ಶಿವರಾಮ ಕಾರಂತ ಪುರಸ್ಕಾರ’ ಪ್ರದಾನ ಮಾಡಲಾಗುವುದು. ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ‘ನನ್ನ ನೆನಪಿನೊಳಗೆ ಶಿವರಾಮ ಕಾರಂತ’ ವಿಶೇಷ ಭಾಷಣ ಮಾಡಲಿದ್ದಾರೆ. ಶಾಸಕ ಕೆ.ಅಭಯಚಂದ್ರ ಶುಭಾಶಂಸನೆ ಸಲ್ಲಿಸಲಿದ್ದಾರೆ ಎಂದರು.
ವಾರ್ತಾ ಇಲಾಖೆಯ ಪ್ರಾಯೋಜಕತ್ವದಲ್ಲಿ ಕಾರಂತ ಕುರಿತ ಸಾಕ್ಷ್ಯ ಚಿತ್ರ ಪ್ರದರ್ಶನ, ಡಾ. ಮೊಗಸಾಲೆ ಅವರ ಹೊಸ ಕಾದಂಬರಿ ಧಾತು ಬಿಡುಗಡೆ, ಶಿವರಾಮ ಕಾರಂತರ ಕಾದಂಬರಿ ವಿಮರ್ಶೆ ಸ್ಪರ್ಧೆಯಲ್ಲಿ ವಿಜೇತ ಮೂಡುಬಿದಿರೆಯ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರ ನಿರ್ದೇಶನದಲ್ಲಿ ಒಂದು ಗಂಟೆ ‘ಸುಧನ್ವ ಮೋಕ್ಷ’ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.
ಮುಂಬರುವ ವರ್ಷಗಳಲ್ಲಿ ಎಂ.ಸಿ.ಎಸ್. ಬ್ಯಾಂಕ್ ತನ್ನ ಪ್ರಾಯೋಜಕತ್ವ ಮುಂದುವರಿಸಲಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಅಮರನಾಥ ಶೆಟ್ಟಿ ತಿಳಿಸಿದರು. ಪ್ರತಿಷ್ಠಾನದ ಉಪಾಧ್ಯಕ್ಷ ಕೆ.ವಿಶ್ವನಾಥ ಪ್ರಭು, ಕೋಶಾಧಿಕಾರಿ ಕೆ.ಕೃಷ್ಣರಾಜ ಹೆಗ್ಡೆ, ಬ್ಯಾಂಕ್‌ನ ಸಿಇಒ ಎಂ.ಚಂದ್ರಶೇಖರ ಉಪಸ್ಥಿತರಿದ್ದರು.







