ಜಯಲಲಿತಾ ಎಂಬ ರಾಜಕೀಯ ವಿರೋಧಾಭಾಸ

ಜಯಲಲಿತಾ ಅವರ ರಾಜಕೀಯವನ್ನು ಅರ್ಥಮಾಡಿಕೊಳ್ಳುವುದು ಮತ್ತು ಒಪ್ಪಿಕೊಳ್ಳುವುದು ಅಷ್ಟು ಸುಲಭ ಸಂಗತಿಯೇನೂ ಅಲ್ಲ. ಅವರ ವೈಯಕ್ತಿಕ ಬದುಕಿನಲ್ಲೂ ರಾಜಕೀಯ ನಡೆಗಳಲ್ಲೂ ಅಷ್ಟರಮಟ್ಟಿನ ವಿರೋಧಾಭಾಸಗಳಿವೆ. ಜಯಲಲಿತಾ ಒಂದು ರಾಜಕೀಯ ಚಿಂತನೆಯನ್ನು ತಮಿಳುನಾಡಿನಲ್ಲಿ ಹುಟ್ಟು ಹಾಕಲಿಲ್ಲ ಅಥವಾ ತಮಿಳುನಾಡನ್ನು ಮುನ್ನಡೆಸಿದ ದ್ರಾವಿಡ ಚಳವಳಿಯನ್ನು ತನ್ನ ರಾಜಕೀಯ ಮುನ್ನಡೆಗೆ ಅವರೆಂದೂ ನೆಚ್ಚಿಕೊಳ್ಳಲಿಲ್ಲ, ಬಳಸಿಕೊಳ್ಳಲಿಲ್ಲ. ವೈಯಕ್ತಿಕವಾಗಿ ಒಂದು ಹೆಣ್ಣು ಸಿಕ್ಕಿದ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಯಾವ ಎತ್ತರಕ್ಕೆ ಏರಬಹುದು ಎನ್ನುವುದಕ್ಕೆ ಜಯಲಲಿತಾ ಅವರನ್ನು ಉದಾಹರಣೆಯಾಗಿ ಕೊಡಬಹುದು. ಯಾವುದೇ ರಾಜಕೀಯ ಹಿನ್ನೆಲೆಯಿಲ್ಲದೆಯೇ, ಕೇವಲ ಎಂಜಿಆರ್ ಅವರ ಸಂಸರ್ಗದ ಬಲದಿಂದ ರಾಜಕೀಯವನ್ನು ಪ್ರವೇಶಿಸಿದವರು ಜಯಲಲಿತಾ. ಇಂತಹದೇ ದಾರಿ ಎನ್ನುವುದನ್ನು ಅವರೆಂದೂ ಆರಿಸಿಕೊಳ್ಳಲಿಲ್ಲ. ಅವರು ಮುಂದೆ ಸಾಗಿದಂತೆಯೇ ದಾರಿ ಅವರಪಾಲಿಗೆ ತೆರೆದುಕೊಳ್ಲುತ್ತಾ ಹೋಯಿತು. ರಾಜಕೀಯಕ್ಕೆ ಬೇಕಾದಂತಹ ಜನಪ್ರಿಯ ತಂತ್ರವನ್ನು ಬಳಸಿಕೊಂಡು, ಸಮಯಕ್ಕೆ ತಕ್ಕಂತೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾ ವೈಯಕ್ತಿಕವಾಗಿ ಒಂದು ರಾಜಕೀಯ ಶಕ್ತಿಯಾಗಿ ಬೆಳೆದು ನಿಂತವರು ಜಯಲಲಿತಾ. ಇಂದು ಅವರನಂತರ ಎಡಿಎಂಕೆ ವಾರಸುದಾರರಿಲ್ಲದೆ ತಬ್ಬಲಿಯಾಗಿ ನಿಂತಿರುವುದೇ ಜಯಲಲಿತಾ ಅವರ ರಾಜಕೀಯ ಟೊಳ್ಳುತನಕ್ಕೆ ಸಾಕ್ಷಿಯಾಗಿದೆ. ಜಯಲಲಿತಾ ನಂತರ ಯಾವ ರೀತಿಯಲ್ಲಿ ಹೆಜ್ಜೆ ಇಡಬೇಕು ಎನ್ನುವ ಕುರಿತಂತೆ ಎಡಿಎಂಕೆ ಗಾಢ ಕತ್ತಲಲ್ಲಿದೆ. ಎಂಜಿಆರ್ ಆದರೋ, ಕನಿಷ್ಟ ಜಯಲಲಿತಾ ಅವರನ್ನಾದರೂ ಸಾಂಕೇತಿಕವಾಗಿ ತಮಿಳುನಾಡಿಗೆ ಬಿಟ್ಟು ಹೋದರು. ಆದರೆ ಜಯಲಲಿತಾ ತನ್ನನ್ನು ಕೇಂದ್ರವಾಗಿಟ್ಟು ಎಡಿಎಂಕೆಯನ್ನು ಬೆಳೆಸಿದರು. ಇದೀಗ ಅದರ ನಾಶಕ್ಕೂ ಅವರೇ ಕಾರಣವಾಗಿದ್ದಾರೆ. ಆದುದರಿಂದಲೇ, ಜಯಲಲಿತಾ ಏರಿದ ಎತ್ತರ, ಸಾಧಿಸಿದ ಸಾಧನೆ, ಹಮ್ಮಿಕೊಂಡ ಜನಪ್ರಿಯ ಕಾರ್ಯಕ್ರಮಗಳನ್ನೆಲ್ಲ ಶ್ಲಾಘಿಸುತ್ತಲೇ, ಅದೆಲ್ಲವೂ ಏಕಪಾತ್ರಾಭಿನಯದಲ್ಲೇ ಕೊನೆಗೊಂಡಿರುವುದು ಅವರ ರಾಜಕೀಯದ ಅತಿ ದೊಡ್ಡ ಸೋಲು ಎಂದೇ ನಾವು ಪರಿಗಣಿಸಬೇಕಾಗಿದೆ. ಸಿನೆಮಾ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿ ಹೆಣ್ಣು ಸರ್ವನಾಶವಾಗುವುದಕ್ಕೆ ಕೆಲವು ಕಾರಣಗಳು ಸಾಕು. ಹಾಗೆ ನಾಶವಾಗಿ ಹೋದವರ ಸಂಖ್ಯೆ ಸಣ್ಣದೇನೂ ಅಲ್ಲ. ಒಬ್ಬ ಸಿನೆಮಾ ತಾರೆಯ ಪತ್ನಿಯೋ, ಪ್ರೇಯಸಿಯೋ ಆದಾಕ್ಷಣ ಆಕೆ ನಾಯಕಿಯಾಗಬಹುದು ಎಂದಾಗಿದ್ದರೆ ಎನ್‌ಟಿಆರ್ ಅವರ ಪತ್ನಿ ಲಕ್ಷ್ಮೀ ಪಾರ್ವತಿ ಇಂದು ಆಂಧ್ರದ ಬಹುದೊಡ್ಡ ನಾಯಕಿಯಾಗಬೇಕಾಗಿತ್ತು. ಆಕೆಯನ್ನು ಆಂಧ್ರದ ಪುರುಷ ಪ್ರಧಾನ ರಾಜಕಾರಣ ಹೇಗೆ ಹೊಸಕಿ ಹಾಕಿತು ಎನ್ನುವುದನ್ನು ನಾವು ನೋಡಿದ್ದೇವೆ. ಹೀಗಿರುವಲ್ಲಿ ಸಿನೆಮಾ ಜಗತ್ತಲ್ಲೂ, ರಾಜಕೀಯ ಜಗತ್ತಲ್ಲೂ ಪುರುಷ ಪ್ರಧಾನ ವ್ಯವಸ್ಥೆಯ ಜೊತೆಗೆ ಸೆಣಸಾಡುತ್ತಾ ತನ್ನ ಅಸ್ತಿತ್ವವನ್ನು ಉಳಿಸಿಕೊಂಡದ್ದಲ್ಲದೆ ಅಲ್ಲೇ ಬೇರೂರಿ, ಅದರ ಮೇಲೆ ತನ್ನ ಆಧಿಪತ್ಯವನ್ನು ಸ್ಥಾಪಿಸಿದ ಜಯಲಲಿತಾ ಸದಾ ಕುತೂಹಲ ಮತ್ತು ವಿಸ್ಮಯವಾಗಿ ಉಳಿದಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಬ್ರಾಹ್ಮಣ್ಯ ವಿರೋಧಿ ಚಿಂತನೆಯ ತಳಹದಿಯ ಮೇಲೆ ನಿಂತ ತಮಿಳು ರಾಜಕಾರಣದಲ್ಲಿ, ಬ್ರಾಹ್ಮಣ್ಯ ಹಿನ್ನೆಲೆಯಿರುವ ಹೆಣ್ಣೊಬ್ಬಳು ಪ್ರವೇಶಿಸಿ, ಸದ್ದಿಲ್ಲದೇ ತನ್ನ ಪ್ರಾಬಲ್ಯವನ್ನು ವಿಸ್ತರಿಸಿ ದ್ರಾವಿಡ ಚಳವಳಿಯ ದಿಕ್ಕನ್ನೇ ಹಳಿತಪ್ಪಿಸಿದ ಆಕೆಯ ರಾಜಕೀಯ ನಡೆಗಳನ್ನು ಅರ್ಥಮಾಡಿಕೊಳ್ಳುವುದೆಂದರೆ, ಮೀನಿನ ಹೆಜ್ಜೆಗಳನ್ನು ಗುರುತಿಸಿದಂತೆಯೇ ಸರಿ. ಪೆರಿಯಾರ್ ರಾಜಕೀಯ ಚಳವಳಿಗಳ ಮೂಲಕ ಎಚ್ಚರಗೊಂಡ ತಮಿಳುನಾಡಿನ ಸಾಂಸ್ಕೃತಿಕ ಅಸ್ಮಿತೆ ಎಂಜಿಆರ್ ಪ್ರವೇಶದೊಂದಿಗೆ ಬೇರೆಯೇ ತಿರುವು ಪಡೆಯಿತು. ವೈಚಾರಿಕತೆಯ ಮೇಲೆ ಭಾವನಾತ್ಮಕ ರಾಜಕೀಯ ಪ್ರಾಬಲ್ಯವನ್ನು ಸಾಧಿಸಿತು. ಸಿನೆಮಾಗಳಲ್ಲಿ ಬರುವ ಜನಪ್ರಿಯ ತಂತ್ರಗಳು ರಾಜಕೀಯದೊಳಗೆ ನೇರ ಪ್ರವೇಶ ಪಡೆದವು. ಬಡವರ ಕುರಿತ ಸಿನೆಮಾ ಪರಿಭಾಷೆಗಳು ರಾಜಕೀಯದಲ್ಲಿ ಅನುಷ್ಠಾನ ಪಡೆದುಕೊಂಡವು. ಎಂಜಿಆರ್ ಈ ತಂತ್ರದ ಮೂಲಕ ರಾಜಕೀಯ ಪ್ರಭಾವಳಿಯೊಂದನ್ನು ತನ್ನ ಸುತ್ತ ನಿರ್ಮಿಸಿದರು. ಎಂಜಿಆರ್ ಅವರ ಮರಣಾನಂತರ ತಮಿಳುನಾಡಿನಲ್ಲಿ ಅವರ ಪಕ್ಷದ ಸ್ಥಿತಿ ಚಿಂದಿಚೂರಾಗಿತ್ತು. ಇಂತಹ ಸಂದರ್ಭದಲ್ಲಿ ಪತ್ನಿ ಎನ್ನುವ ಯಾವ ಅಧಿಕೃತ ಮೊಹರೂ ಇಲ್ಲದೆ ಜಯಲಲಿತಾ ಅವರು ಎಂಜಿಆರ್ ಅವರ ರಾಜಕೀಯ ಸೊತ್ತಿನಲ್ಲಿ ತನ್ನ ಪಾಲನ್ನು ಕೇಳುವುದು ಸಣ್ಣ ವಿಚಾರವೇನೂ ಆಗಿರಲಿಲ್ಲ. ಅಷ್ಟೇ ಅಲ್ಲ, ಆಕೆಯ ಎದುರಾಳಿ ಕರುಣಾನಿಧಿ ನೇತೃತ್ವದ ಡಿಎಂಕೆಯೂ ತಮಿಳುನಾಡಿನ ಮಣ್ಣಿನ ಆಳಕ್ಕಿಳಿದು ನಿಂತಿತ್ತು. ಸಾವಿರ ವಿಮರ್ಶೆಗಳು, ಸಾವಿರ ಟೀಕೆಗಳು, ಕೊಂಕುಗಳು ಇವೆಲ್ಲವುಗಳ ನಡುವೆ ಒಂದು ರಾಜಕೀಯ ವರ್ಚಸ್ಸನ್ನು ಆವಾಹಿಸಿಕೊಳ್ಳುವುದು, ಆ ಮೂಲಕ ತಮಿಳರ ಹೃದಯವನ್ನು ಪ್ರವೇಶಿಸುವುದು ಸಣ್ಣ ವಿಚಾರವಲ್ಲ. ತಮಿಳರು ಮೂಲತಃ ಸಂವೇದನಾಶೀಲರು. ಆ ಕಾರಣದಿಂದಲೇ ಅವರು ಅತಿರೇಕಗಳಿಗೂ ಸುಲಭದಲ್ಲಿ ಬಲಿಯಾಗಿ ಬಿಡುತ್ತಾರೆ. ಜಯಲಲಿತಾ ರಾಜಕೀಯ ಪ್ರವೇಶ ಪಡೆದ ರೀತಿ ಮತ್ತು ಸದನದಲ್ಲಿ ದ್ರೌಪದಿಯಂತೆ ವಿರೋಧಿಗಳಿಂದ ಹಲ್ಲೆಗೀಡಾಗಿದ್ದು, ಆಕೆ ಅದರ ವಿರುದ್ಧ ಪ್ರತಿಭಟಿಸಿದ್ದು ಇವೆಲ್ಲವೂ ಜಯಲಲಿತಾ ಅವರ ರಾಜಕೀಯ ಬದುಕಿಗೆ ಒಂದು ರೋಚಕತೆಯನ್ನು ಕೊಟ್ಟಿತು. ರೋಚಕವಾದ ರಮ್ಯವಾದ ಹಾದಿಯಲ್ಲೇ ತನ್ನ ರಾಜಕೀಯ ಭವಿಷ್ಯವನ್ನು ನಿರ್ಮಿಸಿಕೊಂಡವರು ಜಯಲಲಿತಾ.
ಜಯಲಲಿತಾ ರಾಜಕೀಯದ ಉತ್ತುಂಗವನ್ನೇರುವ ಹಾದಿಯಲ್ಲಿ ಇದ್ದ ಎಡರು ತೊಡರು ಸಣ್ಣದೇನೂ ಅಲ್ಲ. ಎಲ್ಟಿಟಿಯ ಪ್ರಾಬಲ್ಯದ ಸಂದರ್ಭದಲ್ಲೂ ಅತ್ತ ತಮಿಳರ ಸಂವೇದನೆಗಳನ್ನು ಗಮನಕ್ಕೆ ತೆಗೆದುಕೊಳ್ಳುತ್ತಲೇ ಉಗ್ರವಾದಿಗಳ ಕುರಿತಂತೆ ತನ್ನ ನಿಲುವನ್ನು ವ್ಯಕ್ತಪಡಿಸುವ ಜವಾಬ್ದಾರಿ ಅವರದಾಗಿತ್ತು. ಇದೇ ಸಂದರ್ಭದಲ್ಲಿ ವಾಜಪೇಯಿ ನೇತೃತ್ವದಲ್ಲಿ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದಾಗ ಜಯಲಲಿತಾ ಅವರ ಪಾತ್ರವನ್ನು ನಾವು ನಿರ್ಲಕ್ಷಿಸುವಂತಿಲ್ಲ. ತನ್ನ ಏಕ ವ್ಯಕ್ತಿತ್ವದ ಮೂಲಕ ರಾಷ್ಟ್ರಮಟ್ಟದ ರಾಜಕಾರಣದಲ್ಲಿ ಪ್ರಭಾವ ಬೀರಿದವರು ಜಯಲಲಿತಾ. ಇದೇ ಸಂದರ್ಭದಲ್ಲಿ ಜಯಲಲಿತಾ ತಮಿಳುನಾಡಿಗೆ ಅತ್ಯುತ್ತಮವಾದ ಪ್ರಬುದ್ಧವಾದ ಆಡಳಿತ ನೀಡಿದರು ಎಂದರೆ ಅದು ತಪ್ಪಾಗುತ್ತದೆ. ತನ್ನ ಆಡಳಿತದಲ್ಲಿ ಆಕೆ ಜನಪ್ರಿಯ ಮಾರ್ಗಗಳನ್ನು ಆರಿಸಿದರು. ಇದೇ ಸಂದರ್ಭದಲ್ಲಿ ಜಯಲಲಿತಾ ಅವರಿಂದ ತಮಿಳುನಾಡಿಗೆ ಆಗಿರುವ ಅನ್ಯಾಯವನ್ನೂ ನಾವು ಗಮನಿಸಬೇಕಾಗಿದೆ. ಮುಖ್ಯವಾಗಿ ದೇಶಕಂಡ ಅತ್ಯಂತ ಭ್ರಷ್ಟ ರಾಜಕಾರಣಿಯಾಗಿ ಜಯಲಲಿತಾ ಗುರುತಿಸಿಕೊಂಡರು. ಕೌಟುಂಬಿಕವಾದ ಬದುಕಿಲ್ಲದಿದ್ದರೂ ಆಕೆಯ ಜೊತೆಗಿದ್ದ ಸ್ನೇಹಿತರು ಅವರನ್ನು ಮುಂದಿಟ್ಟುಕೊಂಡು ಅಕ್ಷರಶಃ ತಮಿಳುನಾಡನ್ನು ದೋಚಿದರು. ಜಯಲಲಿತಾರ ದತ್ತು ಪುತ್ರನ ಮದುವೆಯ ರಂಪಾಟಗಳು ಅದಕ್ಕೊಂದು ಸಣ್ಣ ಉದಾಹರಣೆ. ಇತ್ತೀಚಿನವರೆಗೂ ಆಕೆ ತಾನು ಮಾಡಿಟ್ಟ ಭ್ರಷ್ಟಾಚಾರದ, ಅಕ್ರಮಗಳ ಬಲೆಯಲ್ಲಿ ಒದ್ದಾಡುತ್ತಲೇ ಇದ್ದರು. ಈ ಹಿಂದಿನ ಅಧಿಕಾರಾವಧಿಯಲ್ಲಿ ಜಯಲಲಿತಾ ಹಮ್ಮಿಕೊಂಡ ಅಪರೂಪದ ಜನಪ್ರಿಯ ಯೋಜನೆಗಳು ಅವರನ್ನ್ನು ಮತ್ತೆ ಜನರಿಗೆ ಹತ್ತಿರವಾಗಿಸಿತ್ತು. ಒಂದೆಡೆ ಮೋದಿಯ ‘ಕಾರ್ಪೊರೇಟ್’ ಆಡಳಿತ ಕುಖ್ಯಾತಿಯನ್ನು ಪಡೆಯುತ್ತಿರುವ ಸಂದರ್ಭದಲ್ಲೇ ಜಯಲಲಿತಾ ತನ್ನ ‘ತಾಯ್ತನ’ದ ಯೋಜನೆಯ ಮೂಲಕ ಜನರ ಮನಸ್ಸಿಗೆ ಇನ್ನಷ್ಟು ಹತ್ತಿರವಾದರು. ಆದುದರಿಂದಲೇ, ಕಳೆದ ಚುನಾವಣೆಯಲ್ಲಿ ಮಗದೊಮ್ಮೆ ಆಯ್ಕೆಯಾಗಿ ಎಲ್ಲರಲ್ಲೂ ಅಚ್ಚರಿಯನ್ನು ಮೂಡಿಸಿದರು.
ಏನೇ ಆದರೂ, ಜಯಲಲಿತಾ ಸ್ವಯಂಬೆಳೆದರೇ ಹೊರತು ಅವರು ಇಡೀ ಪಕ್ಷವನ್ನು ಬೆಳೆಸಿ ಡಿಎಂಕೆಗೆ ಪರ್ಯಾಯವಾಗಿ ನಿಲ್ಲಿಸುವಲ್ಲಿ ವಿಫಲವಾದರು ಎನ್ನುವುದು ಅಂತಿಮವಾಗಿ ಉಳಿಯುವ ಸತ್ಯ. ಇದೇ ಸಂದರ್ಭದಲ್ಲಿ ಡಿಎಂಕೆ ಪಕ್ಷ ಗಾಲಿಕುರ್ಚಿಯಲ್ಲಿ ಓಡಾಡುತ್ತಿದೆ. ಸ್ಟಾಲಿನ್‌ಗೆ ತಂದೆಯ ಸ್ಥಾನವನ್ನು ತುಂಬಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಎಡಿಎಂಕೆಯೊಳಗಿರುವ ನಿರ್ವಾತವನ್ನು ರಾಷ್ಟ್ರೀಯ ಪಕ್ಷಗಳು ದುರ್ಬಳಕೆ ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯುವ ಹಾಗಿಲ್ಲ. ಅದರಲ್ಲಿ ಅವರು ಯಶಸ್ವಿಯಾದರೆ, ಒಕ್ಕೂಟ ವ್ಯವಸ್ಥೆಯ ಮೇಲೆ ಅದು ಬೀರುವ ಪರಿಣಾಮ ದೊಡ್ಡದು. ಈ ದೇಶದ ಪ್ರಾದೇಶಿಕ ಅಸ್ಮಿತೆ ಇನ್ನೂ ಗಟ್ಟಿಯಾಗಿ ಉಳಿದುಕೊಂಡಿದ್ದರೆ ಅದರಲ್ಲಿ ತಮಿಳರ ಕೊಡುಗೆ ಬಹುದೊಡ್ಡದು. ಜಯಲಲಿತಾ ಎನ್ನುವ ಬೃಹತ್ ಮರ ನಿವಾರಣೆಯಾದ ಬಳಿಕ ತಮಿಳು ರಾಜಕೀಯ ಏಕಾಏಕಿ ಬೋಳು ಬೋಳಾಗಿ ಕಾಣಿಸಿಕೊಳ್ಳತೊಡಗಿದೆ. ಈ ಸಂದರ್ಭವನ್ನು ರಾಷ್ಟ್ರೀಯ ಪಕ್ಷಗಳು ದುರ್ಬಳಕೆ ಮಾಡದಂತೆ, ತಮಿಳು ಪ್ರಾದೆ ೀಶಿಕ ರಾಜಕೀಯ ಚಿಂತನೆಗಳು ಮತ್ತೆ ಜೊತೆಯಾಗಬೇಕಾಗಿದೆ. ತಮ್ಮ ಪ್ರಾದೇಶಿಕ ಬೇರುಗಳನ್ನು ಇನ್ನೂ ಆಳಕ್ಕಿಳಿಸಿ, ಸಂಘಟಿತವಾಗಿ ರಾಷ್ಟ್ರೀಯ ಪಕ್ಷಗಳನ್ನು ಎದುರಿಸುವ ಅನಿವಾರ್ಯತೆಯಿದೆ. ಎಲ್ಲಕ್ಕಿಂತ ಮುಖ್ಯವಾಗಿ, ತಮಿಳು ರಾಜಕೀಯವು ಸಿನೆಮಾಗಳ ಪ್ರಭಾವವನ್ನು ಕಳಚಿಕೊಂಡು ಮತ್ತೆ ಪೆರಿಯಾರ್ ಚಿಂತನೆಯ ಬೆಂಕಿಯಲ್ಲಿ ಬೆಳಗುವ ಅಗತ್ಯ ಹಿಂದೆಂದಿಗಿಂತ ಹೆಚ್ಚಿದೆ.







