ರಾತ್ರಿಯೂ ಸಿಗ್ನಲ್ ದೀಪಗಳು ಉರಿಯುತ್ತಿರಲಿ
ಮಾನ್ಯರೆ,
ಬೆಂಗಳೂರು ನಗರದಲ್ಲಿ ರಾತ್ರಿ 1:00 ಗಂಟೆಯ ತನಕ ಹಲವಾರು ರೀತಿಯ ವ್ಯಾಪಾರಗಳು ನಡೆಯುತ್ತಲೇ ಇರುತ್ತವೆ. ಅನೇಕ ಚಲನಚಿತ್ರ ಮಂದಿರಗಳು ಮತ್ತು ಬಾರ್‌ಗಳು ರಾತ್ರಿ 12ಗಂಟೆಯ ವರೆಗೆ ವ್ಯವಹಾರ ನಡೆಸುತ್ತವೆ. ಈ ಹಿನ್ನೆಲೆಯಲ್ಲಿ ಸಿಗ್ನಲ್ ದೀಪಗಳು ರಾತ್ರಿ ಕನಿಷ್ಠ 12 ಗಂಟೆಯ ತನಕ ಕಾರ್ಯಾಚರಿಸುವ ವ್ಯವಸ್ಥೆ ಮಾಡಬೇಕಾಗಿದೆ.
ಈಗ ನಗರದಲ್ಲಿ ರಾತ್ರಿ 10 ಗಂಟೆಗೆಲ್ಲ ಸಿಗ್ನಲ್ ದೀಪಗಳು ಕಾರ್ಯಾಚರಿಸುವುದನ್ನು ನಿಲ್ಲಿಸುತ್ತವೆ. ಹೀಗಾಗಿ ಬಹಳಷ್ಟು ವೃತ್ತಗಳಲ್ಲಿ ವಾಹನ ಸವಾರರಿಗೆ ರಸ್ತೆಗಳನ್ನು ದಾಟಲು ತುಂಬಾ ತೊಂದರೆಯಾಗುತ್ತದೆ. ಹೇಳುವವರು, ಕೇಳುವವರು ಯಾರೂ ಇಲ್ಲದಿರುವುದರಿಂದ ವಾಹನ ಸವಾರರು ತಮಗಿಷ್ಟ ಬಂದ ರೀತಿಯಲ್ಲಿ ವಾಹನ ಚಲಾಯಿಸುತ್ತಾರೆ. ಹೀಗಾಗಿ ಅನೇಕ ಅವಘಡಗಳು ಈ ಅವಧಿಯಲ್ಲಿ ನಡೆಯುತ್ತವೆ.
ರಸ್ತೆಯ ದೀಪಗಳು ಬೆಳಗಿನ ತನಕ ಇರುವುದಾದರೆ ಸಿಗ್ನಲ್ ದೀಪಗಳು ಕನಿಷ್ಠ 12 ಗಂಟೆಯ ತನಕವಾದರೂ ಕಾರ್ಯಾಚರಿಸಲು ಆಗುವ ತೊಂದರೆ ಏನು? ಅನೇಕ ಕಡೆಗಳಲ್ಲಿ ಸಿಸಿ ಕ್ಯಾಮರಾಗಳಿರುವ ಕಾರಣ ಅಪಘಾತಗಳು ಸಂಭವಿಸಿದ ನಂತರ ಕಾರಣಗಳನ್ನು ಹುಡುಕಿ ಶಿಕ್ಷೆಯನ್ನಷ್ಟೇ ಕೊಡಬಹುದು. ಆದರೆ ಸಂಭವಿಸಬಹುದಾದ ಅಪಾಯಗಳನ್ನು ತಡೆಯುವುದು ಅಥವಾ ಅಪಘಾತದಲ್ಲಿ ಅಮೂಲ್ಯ ಜೀವಗಳನ್ನು ರಕ್ಷಿಸುವುದು ಕ್ಯಾಮರಾಗಳಿಂದ ಸಾಧ್ಯವಿಲ್ಲ. ಆದರೆ ಸಿಗ್ನಲ್ ದೀಪಗಳಿದ್ದಲ್ಲಿ ಈ ಅವಘಡಗಳನ್ನು ತಪ್ಪಿಸಬಹುದಲ್ಲವೇ? ಸಂಬಂಧಪಟ್ಟವರು ಈ ಸಮಸ್ಯೆಯ ಬಗ್ಗೆ ಗಮನ ನೀಡಿಯಾರೇ?





