ನೋಟು ಸಮಸ್ಯೆ: ಸಾಲಕಂತು ಪಾವತಿಸಲಾಗದ ದಲಿತ ಕುಟುಂಬದ ಮನೆ ಜಪ್ತಿ ಮಾಡಿದ ಬ್ಯಾಂಕ್ ಅಧಿಕಾರಿಗಳು

ಅಂಞಾಲ್‌ಮೂಡ್, ಡಿ.7: ನೋಟು ಅಮಾನ್ಯಗೊಂಡದ್ದರಿಂದ ಬವಣೆಗೊಂಡಿದ್ದ ದಲಿತ ಕುಟುಂಬವೊಂದರ ಮನೆಯ ಸಾಲದ ಕಂತು ಕಟ್ಟಿಲ್ಲ ಎಂಬ ನೆಪ ಮುಂದೊಡ್ಡಿ ಬ್ಯಾಂಕ್ ಅಧಿಕಾರಿಗಳು ಜಪ್ತಿಮಾಡಿದ ಘಟನೆ ವರದಿಯಾಗಿದೆ. ಸಾಲದ ಕಂತು ಕಟ್ಟಲು ಒಂದುವಾರದ ಸಮಯಕೇಳಿದರೂ ಬ್ಯಾಂಕ್ ಅಧಿಕಾರಿಗಳು ಕಿವಿಗೊಡದೆ ನಿರ್ವಿಕಾರವಾಗಿ ಮನೆಮಂದಿಯನ್ನು ಹೊರಹಾಕಿ ಮನೆ ಮುಟ್ಟುಗೋಲು ಹಾಕಿದ್ದಾರೆ. ತೃಕ್ಕಡವೂರ್ ನೀರಾವಿಲ್ ಪುನ್ನವಿಳ ಲಕ್ಷಂವೀಡ್ ಕಾಲನಿಯ ಪುಳಿಯರ ಮನೆಯ ಆಟೊ ಚಾಲಕ ರಮೇಶನ್ ಮತ್ತು ಕುಟುಂಬದ ಮನೆ ಜಪ್ತಿಗೊಳಗಾಗಿದ್ದು ಅವರೀಗ ಅಕ್ಷರಶಃ ಬೀದಿಗೆ ಬಿದ್ದಂತಾಗಿದೆ ಎಂದು ತಿಳಿದು ಬಂದಿದೆ.
ಮೂರುವರ್ಷಗಳ ಹಿಂದೆ ರಮೇಶನ್ ಸೆಂಟ್ರಲ್ ಬ್ಯಾಂಕ್‌ನಿಂದ ಅಂಙಾಲಮೂಡ್ ಶಾಖೆಯಿಂದ ನಾಲ್ಕೂವರೆ ಲಕ್ಷ ರೂಪಾಯಿ ಸಾಲ ತೆಗೆದಿದ್ದರು. ಹಲವು ಕಂತುಗಳಲ್ಲಿ 70,000 ರೂಪಾಯಿಯನ್ನು ಬ್ಯಾಂಕ್‌ಗೆ ಪಾವತಿಸಿದ್ದರು. ಆದರೆ ಬಡ್ಡಿ ಸಹಿತ 4,61,000ರೂಪಾಯಿ ಸಾಲ ಬಾಕಿ ಉಳಿದಿತ್ತು. ಇದನ್ನು ಪಾವತಿಸದಿದ್ದರೆ ಜಪ್ತಿ ನಡೆಸಲಾಗುವುದು ಎಂದು ಬ್ಯಾಂಕ್ ಅಧಿಕಾರಿಗಳು ನೋಟಿಸ್ ಕಳುಹಿಸಿದ್ದರು.
ರಮೇಶನ್ ಗಲ್ಫ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲಿ ಕೆಲಸ ಇಲ್ಲದಾದಾಗ ಊರಿಗೆ ಬಂದು ಆಟೊದಲ್ಲಿ ದುಡಿಯತೊಡಗಿದ್ದರು. ಈ ನಡುವೆ ಇವರ ತಾಯಿ ಚೆಲ್ಲಮ್ಮ(85) ಮನೆಯಲ್ಲಿ ಬಿದ್ದು ಗಾಯಮಾಡಿಕೊಂಡದ್ದರಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನೋಟಿಸ್ ಬಂದದ್ದರಿಂದ ಕಳೆದ ತಿಂಗಳು ಬ್ಯಾಂಕಿಗೆ ಹೋಗಿ ಮನೆ ಮಾರಿ ಸಾಲ ಸಂದಾಯ ಮಾಡುತ್ತೇನೆಂದು ಒಂದು ವಾರ ಸಮಯ ಬೇಕೆಂದು ಬ್ಯಾಂಕ್ ಶಾಖಾ ಮ್ಯಾನೇಜರ್‌ರಿಗೆ ರಮೇಶನ್ ವಿನಂತಿಸಿದರೂ ಪ್ರಯೋಜನವಾಗಲಿಲ್ಲ
ಸೋಮವಾರ ಸಂಜೆ ಮನೆಗೆ ಬಂದ ಬ್ಯಾಂಕ್ ಅಧಿಕಾರಿಗಳು ಮನೆಯವರನ್ನು ಹೊರಗೆ ಮಾಡಿ ಮನೆಯನ್ನು ಜಪ್ತಿ ಮಾಡಿದ್ದಾರೆ. ಕೋರ್ಟು ಆದೇಶದಂತೆ ಮನೆ ಜಪ್ತಿ ಮಾಡಿದ್ದೇವೆಂದು ಬ್ಯಾಂಕ್ ಮ್ಯಾನೇಜರ್ ಹೇಳಿದ್ದಾರೆಂದು ವರದಿ ತಿಳಿಸಿದೆ.







