13 ಸಾವಿರ ಕೋಟಿ ರೂ. ಕಪ್ಪುಹಣ ಘೋಷಿಸಿದ್ದ ಗುಜರಾತ್ ಉದ್ಯಮಿಗೆ ಜೈಲು ಶಿಕ್ಷೆ ಭೀತಿ

ಅಹ್ಮದಾಬಾದ್, ಡಿ.7: ಕೇಂದ್ರದ ಆದಾಯ ಘೋಷಣೆ ಯೋಜನೆಯಡಿ(ಐಡಿಎಸ್) ಕಳೆದ ಸೆಪ್ಟಂಬರ್‌ನಲ್ಲ್ಲಿ 13, 860 ಕೋಟಿ ರೂ. ಕಪ್ಪುಹಣವನ್ನು ಘೋಷಿಸಿದ್ದ ಗುಜರಾತ್‌ನ ವ್ಯಾಪಾರಿ ಮಹೇಶ್ ಶಾ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆಯಿದೆ.
ಐಡಿಎಸ್ ಪ್ರಕಾರ ತಪ್ಪು ಮಾಹಿತಿ ನೀಡುವುದು ಅಪರಾಧ. ಶಾ ತಪ್ಪು ಮಾಹಿತಿ ನೀಡಿರುವುದು ಸಾಬೀತಾದರೆ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ. ಐಡಿಎಸ್ ಪ್ರಕಾರ ವ್ಯಕ್ತಿಯೋರ್ವ ತನ್ನ ಆಸ್ತಿ-ಪಾಸ್ತಿಯನ್ನು ಮಾತ್ರ ಘೋಷಿಸಬೇಕು. ತಾನು ಘೋಷಿಸಿದ್ದ ಹಣ ರಾಜಕಾರಣಿಗಳು, ಅಧಿಕಾರಿಗಳು ಹಾಗೂ ಬಿಲ್ಡರ್‌ಗಳ ಸಹಿತ ಹಲವರಿಗೆ ಸೇರಿದ್ದು ಎಂದು ಶಾ ಈಗಾಗಲೇ ಆದಾಯ ತೆರಿಗೆ ಅಧಿಕಾರಿಗಳಿಗೆ ತಿಳಿಸಿದ್ದ. ಹೀಗಾಗಿ ಅವರ ವಿರುದ್ಧ ಸೆಕ್ಷನ್ 277ರ ಕಾಯ್ದೆ ಅಡಿ ಕೇಸು ದಾಖಲಾಗುವ ಸಾಧ್ಯತೆಯಿದೆ.
ವ್ಯಕ್ತಿಯೊಬ್ಬ ತಪ್ಪು ಮಾಹಿತಿ ನೀಡಿದ್ದು ಸಾಬೀತಾದರೆ ಸೆಕ್ಷನ್ 277ರ ಕಾಯ್ದೆ ಅಡಿ ಮೂರು ತಿಂಗಳಿಂದ ಮೂರು ವರ್ಷಗಳ ತನಕ ಕಠಿಣ ಶಿಕ್ಷೆ ಎದುರಿಸಬೇಕಾಗುತ್ತದೆ. ಶಿಕ್ಷೆಯು ವ್ಯಕ್ತಿ ಎಸಗಿರುವ ಅಪರಾಧವನ್ನು ಅವಲಂಬಿಸಿರುತ್ತದೆ. ಮತ್ತಷ್ಟು ತನಿಖೆಯ ವೇಳೆ ಶಾ ಕಾನೂನು ಉಲ್ಲಂಘಿಸಿರುವುದು ಗೊತ್ತಾದರೆ ಆತನ ವಿರುದ್ಧ ಐಪಿಸಿ ಸೆಕ್ಷನ್ ದಾಖಲಿಸಲಾಗುತ್ತದೆ. ಇದೀಗ ಶಾ ತೀವ್ರ ವಿಚಾರಣೆ ಎದುರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.





