ಪೊಲೀಸರಿಗೆ 'ಭಡ್ತಿ ಭಾಗ್ಯ' ಸಿದ್ದರಾಮಯ್ಯ ಘೋಷಣೆ
ಹೊಸ ವರ್ಷದ ಕೊಡುಗೆ

ಬೆಂಗಳೂರು, ಡಿ.7: ಹೊಸ ವರ್ಷದ ಕೊಡುಗೆಯಾಗಿ ರಾಜ್ಯದ ಸಾವಿರಾರು ಪೊಲೀಸ್ ಸಿಬ್ಬಂದಿಗೆ ಭಡ್ತಿ ಅವಕಾಶ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆದೇಶದ ಹಿನ್ನೆಲೆಯಲ್ಲಿ 11 ಸಾವಿರ ಪೊಲೀಸ್ ಸಿಬ್ಬಂದಿ ಕೆಲವೇ ದಿನಗಳಲ್ಲಿ ಏಕ ಕಾಲಕ್ಕೆ ಭಡ್ತಿ ಆದೇಶವನ್ನು ಪಡೆದುಕೊಳ್ಳಲಿದ್ದು, ಈ ಆದೇಶದ ಪ್ರಕಾರ ಪೊಲೀಸ್ ಪೇದೆಗಳು ಮುಖ್ಯ ಪೇದೆ ಹುದ್ದೆಗೆ, ಮುಖ್ಯ ಪೇದೆಗಳು ಸಹಾಯಕ ಸಬ್ ಇನ್ ಸ್ಪೆಕ್ಟರ್, ಸಹಾಯಕ ಸಬ್ ಇನ್ ಸ್ಪೆಕ್ಟರ್ ಗಳು ಸಬ್ ಇನ್ ಸ್ಪೆಕ್ಟರ್ ಹುದ್ದೆಗೆ ಭಡ್ತಿ ಪಡೆಯಲಿದ್ದಾರೆ. ಭಡ್ತಿ ಆದೇಶ ಪತ್ರಗಳನ್ನು ಆಯಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಗಳು ಸಿಬ್ಬಂದಿಗೆ ನೇರವಾಗಿ ವಿತರಿಸಲಿರುವುದು ವಿಶೇಷ.
ಭಡ್ತಿ ಜೊತೆಗೆ ಸರಕಾರದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪೇದೆಗಳು ಸೇರಿದಂತೆ 26,702 ಸಿಬ್ಬಂದಿಯನ್ನು ನೇಮಕ ಮಾಡಿಕೊಂಡ ಹೆಗ್ಗಳಿಕೆಗೂ ಪೊಲೀಸ್ ಇಲಾಖೆ ಪಾತ್ರವಾಗಿದೆ. ಜೊತೆಗೆ ಕಳೆದ ಮೂರು ವರ್ಷದ ಅವಧಿಯಲ್ಲಿ ಹಲವಾರು ಸೌಲಭ್ಯಗಳನ್ನು ಇಲಾಖೆ ಪಡೆದುಕೊಂಡಿದೆ.
2014-15ನೇ ಸಾಲಿಗೆ 31 ಹೊಸ ಪೊಲೀಸ್ ಠಾಣೆಗಳಿಗೆ 1,445 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. 2015-16ನೇ ಸಾಲಿನಲ್ಲಿ 30 ಹೊಸ ಠಾಣೆಗಳಿಗೆ 1,356, 2016-17ನೇ ಸಾಲಿನಲ್ಲಿ 5 ಹೊಸ ಮಹಿಳಾ ಠಾಣೆಗಳಿಗೆ 220 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ ಎಂದು ಅಧಿಕಾರಿಗಳು ಸಭೆಯಲ್ಲಿ ವಿವರಿಸಿದರು.
ರಾಮದುರ್ಗ, ಅಥಣಿ, ಹೊಸಕೋಟೆ ಮತ್ತು ಶೋರಾಪುರ ಹೊಸ ಉಪ ವಿಭಾಗಗಳಾಗಿದ್ದು, 30 ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಕಂಗ್ರಾಳಿಯಲ್ಲಿ ಕೆಎಸ್‍ಆರ್‍ಪಿ ತರಬೇತಿ ಶಾಲೆ ಮತ್ತು ಅದಕ್ಕೆ 76 ಹುದ್ದೆಗಳನ್ನು ಮಂಜೂರು ಮಾಡಿದೆ.
6 ತರಬೇತಿ ಶಾಲೆಗಳಿಗೆ 468, ಭ್ರಷ್ಟಾಚಾರ ನಿಗ್ರಹ ದಳಕ್ಕೆ 322, ನ್ಯಾಯ ವಿಧಿ ಪ್ರಯೋಗಾಲಯದ ಬಲವರ್ಧನೆಗೆ 309, ಆರು ಹೊಸ ಹೊರ ಪೊಲೀಸ್ ಠಾಣೆಗಳಿಗೆ 45, ಬೆಂಗಳೂರು ನಗರ ಸಂಚಾರ ವಿಭಾಗಕ್ಕೆ 1557 ಹುದ್ದೆಗಳನ್ನು ಸರಕಾರ ಮಂಜೂರು ಮಾಡಿದೆ. ಬಳ್ಳಾರಿ ಹೊಸ ವಲಯವಾಗಿದ್ದು, ಬೆಳಗಾವಿಯನ್ನು ಕಮಿಷನರೇಟ್ ದರ್ಜೆಗೆ ಏರಿಸಿದ ಬಳಿಕ 1559 ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದೆ.
ಮುಂದಿನ ಮೂರು ವರ್ಷಗಳ ನೇಮಕಾತಿಗೂ ಏಕ ಆದೇಶವನ್ನು ಹೊರಡಿಸಲಾಗಿದೆ. 2015-16ನೇ ಸಾಲಿನಲ್ಲಿ 215 ಪಿಎಸ್‍ಐ, 6389 ಪೇದೆಗಳು, 2016-17ನೇ ಸಾಲಿನಲ್ಲಿ 659 ಪಿಎಸ್‍ಐ, 7815 ಪೇದೆಗಳು, 2017-18ನೇ ಸಾಲಿಗೆ 333 ಪಿಎಸ್‍ಐ, 4560 ಪೇದೆಗಳು ಮತ್ತು 2018-19ನೇ ಸಾಲಿಗೆ 312 ಪಿಎಸ್‍ಐ ಮತ್ತು 4,045 ಪೇದೆಗಳನ್ನು ನೇಮಕ ಮಾಡಿಕೊಳ್ಳಲಾಗುವುದು.
ಬೆಂಗಳೂರಿನ ಕಾಡಗೊಂಡನಹಳ್ಳಿ, ಮೈಸೂರಿನ ಮೇಘಲಾಪುರ, ಬಿಳಿಗೆರೆ, ಶಹಾಬಾದ್, ಚಿಂತಾಮಣಿ, ಚಿಗಟೇರಿ, ರಾಯಬಾಗ ಮತ್ತು ಕೊಳಾಲ ಪೊಲೀಸ್ ಠಾಣೆಗಳ ಆಧುನೀಕರಣಕ್ಕೆ 14.17 ಕೋಟಿ ರೂ. ಒದಗಿಸಲಾಗಿದೆ.
ಪೊಲೀಸರಿಗೆ ವಸತಿ ಗೃಹಗಳನ್ನು ನಿರ್ಮಿಸಲು 446.25 ಕೋಟಿ ರೂ.ಗಳನ್ನು ಹಣಕಾಸು ಇಲಾಖೆ ಒದಗಿಸಿದೆ. 2782 ವಸತಿ ಗೃಹಗಳು ಈಗಾಗಲೇ ನಿರ್ಮಾಣವಾಗಿದ್ದು, 4016 ವಸತಿ ಗೃಹಗಳ ಕಾಮಗಾರಿ ಪ್ರಗತಿಯಲ್ಲಿದೆ. 4202 ವಸತಿ ಗೃಹಗಳ ಕಾಮಗಾರಿಯನ್ನು ಮುಂದೆ ಕೈಗೆತ್ತಿಕೊಳ್ಳಲಾಗುವುದು. ಇದರಿಂದ ಶೇ. 48ರಷ್ಟು ಸಿಬ್ಬಂದಿಗೆ ವಸತಿ ಸೌಕರ್ಯ ಕಲ್ಪಿಸಿದಂತೆ ಆಗುತ್ತದೆ ಎಂದು ಅಧಿಕಾರಿಗಳು ಮುಖ್ಯಮಂತ್ರಿಯವರಿಗೆ ವಿವರಿಸಿದರು.
ದಾವಣಗೆರೆಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ನಿರ್ಮಾಣಕ್ಕೆ 5 ಕೋಟಿ ರೂ., ಮೈಸೂರು ಪೊಲೀಸ್ ಪಬ್ಲಿಕ್ ಶಾಲೆ ಮೇಲ್ದರ್ಜೆಗೇರಿಸಲು 2.50 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಸಲ್ಲಿಸಲಾಗಿದೆ. ತುಮಕೂರಿನಲ್ಲಿ ಕೆಎಸ್‍ಆರ್‍ಪಿ ಬೆಟಾಲಿಯನ್, ಬೆಂಗಳೂರು ನಗರದಲ್ಲಿ ಮೂರು ನಗರ ಸಶಸ್ತ್ರ ಮೀಸಲು ಪಡೆ ಘಟಕಗಳ ಸ್ಥಾಪನೆಗೂ ಪ್ರಸ್ತಾವನೆ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಲಾಗಿದೆ ಎಂದು ಹೇಳಿದರು.
ಸರಕಾರದ ಆದೇಶ ಪ್ರಕಾರ 500 ಠಾಣೆಗಳನ್ನು ಜನಸ್ನೇಹಿ ಠಾಣೆಗಳಾಗಿ ಮಾಡಲು 5 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಬೆಂಗಳೂರು ನಗರದ ಠಾಣೆಗಳಿಗೆ 100 ವಾಹನಗಳನ್ನು ಒದಗಿಸಲಾಗುವುದು ಎಂದು ತಿಳಿಸಿದರು.
ಒಟ್ಟಾರೆ ಪೊಲೀಸ್ ಇಲಾಖೆಗೆ ಸರಕಾರ ಹಿಂದೆಂದೂ ಇಲ್ಲದಂತೆ ಅನುದಾನ ಒದಗಿಸಿದ್ದು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೆ ತರಲು ಸಾಧ್ಯವಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಗೃಹ ಸಚಿವ ಡಾ. ಜಿ. ಪರಮೇಶ್ವರ, ಮುಖ್ಯಮಂತ್ರಿಯವರು ಸಂಸದೀಯ ಕಾರ್ಯದರ್ಶಿ ಗೋವಿಂದರಾಜು, ಪ್ರಧಾನ ಕಾರ್ಯದರ್ಶಿ ಎಲ್.ಕೆ ಅತೀಕ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್, ನಗರ ಪೊಲೀಸ್ ಆಯುಕ್ತ ಮೇಘರಿಕ್ ಸೇರಿದಂತೆ ಪೊಲೀಸ್, ಹಣಕಾಸು ಮತ್ತು ಕಾನೂನು ಇಲಾಖೆಯ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.







