ಈ ಸ್ಟೋರ್ ನಲ್ಲಿ ಕೇವಲ ಶಾಪಿಂಗ್ ಮಾಡಿ, 'ಹಣ ಪಾವತಿಸಬೇಡಿ' !
ನಿಮ್ಮಲ್ಲಿಗೂ ಬೇಕೇ ಇಂತಹ ಸೂಪರ್ ಮಾರ್ಕೆಟ್ ?

ವಾಶಿಂಗ್ಟನ್, ಡಿ. 7: ಸರದಿ ಸಾಲುಗಳಿಲ್ಲದ ಹಾಗೂ ಹಣ ಪಾವತಿ (ಚೆಕೌಟ್) ಕೌಂಟರ್‌ಗಳಿಲ್ಲದ ಸಾಂಪ್ರದಾಯಿಕ ದಿನಸಿ ಅಂಗಡಿಯೊಂದನ್ನು ಸಿಯಾಟಲ್‌ನಲ್ಲಿ ಆರಂಭಿಸಿರುವುದಾಗಿ ಅಮೆಝಾನ್.ಕಾಮ್ ಸೋಮವಾರ ಹೇಳಿದೆ.
ಇದರೊಂದಿಗೆ, ಅಮೆಝಾನ್ ಆನ್‌ಲೈನ್ ಕಂಪೆನಿಯು ಸೂಪರ್‌ಮಾರ್ಕೆಟ್ ಸಮೂಹಗಳೊಂದಿಗೆ ಹೊಸ ಸುತ್ತಿನ ಸ್ಪರ್ಧೆಯೊಂದಕ್ಕೆ ನಾಂದಿ ಹಾಡಿದೆ.
ಆನ್‌ಲೈನ್ ಖರೀದಿ ಕಂಪೆನಿಯ ನೂತನ 1,800 ಚದರ ಅಡಿ ವಿಸ್ತೀರ್ಣದ ಅಂಗಡಿ ‘ಅಮೆಝಾನ್ ಗೋ’ನಲ್ಲಿ ಖರೀದಿದಾರರು ಕಪಾಟುಗಳಿಂದ ಯಾವ ವಸ್ತುಗಳನ್ನು ತೆಗೆದುಕೊಂಡಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಸೆನ್ಸರ್‌ಗಳನ್ನು ಬಳಸಲಾಗುತ್ತದೆ. ಅವರು ವಸ್ತುಗಳನ್ನು ತೆಗೆದ ಸ್ಥಳದಲ್ಲಿ ಇಡದಿದ್ದರೆ ಅವರ ಅಮೆಝಾನ್ ಖಾತೆಗಳಿಗೆ ಬಿಲ್ ಕಳುಹಿಸಲಾಗುತ್ತದೆ.
ಅಮೆಝಾನ್ ದಿನಸಿ ವಸ್ತುಗಳ ಮಾರುಕಟ್ಟೆಗೆ ಹೊಸದಾಗಿ ಪ್ರವೇಶಿಸಿದ್ದು, ಈ ಬೃಹತ್ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಅದು ಇನ್ನಷ್ಟೇ ಪಳಗಬೇಕಾಗಿದೆ. ಅಮೆಝಾನ್ ಈಗ ತನ್ನ ‘ಅಮೆಝಾನ್ ಫ್ರೆಶ್ ಸರ್ವಿಸ್’ ಮೂಲಕ ದಿನಸಿ ವಸ್ತುಗಳನ್ನು ಮನೆಗಳಿಗೆ ಪೂರೈಸುತ್ತಿದೆ.
‘‘ಪ್ರತಿಯೊಂದು ಉತ್ಪನ್ನಕ್ಕೆ ಅವರ ಇ-ಕಾಮರ್ಸ್ ಮಾದರಿ ಹೊಂದುವುದಿಲ್ಲ ಎನ್ನುವುದನ್ನು ಅವರು ಈ ಮೂಲಕ ಒಪ್ಪಿಕೊಂಡಂತಾಗಿದೆ’’ ಎಂದು ವಿಶ್ಲೇಷಕ ಜಾಕ್‌ಡಾ ರಿಸರ್ಚ್‌ನ ಜನ್ ಡಾಸನ್ ಹೇಳುತ್ತಾರೆ. ಮೂರ್ತ ಅಂಗಡಿಗಳು ಅಮೆಝಾನ್ ಫ್ರೆಶ್‌ಗೆ ಪೂರಕವಾಗಿರುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
‘‘ದೇಶಾದ್ಯಂತ ಇಂಥ ನೂರಾರು ಅಂಗಡಿಗಳು ತಲೆಯೆತ್ತಿದರೆ, ಅದು ಸೂಪರ್‌ಮಾರ್ಕೆಟ್ ಅಂಗಡಿ ಸಮೂಹಗಳಿಗೆ ದೊಡ್ಡ ಬೆದರಿಕೆಯಾಗಿರುತ್ತದೆ’’ ಎಂದರು.
‘ಅಮೆಝಾನ್ ಗೋ’ ಅಂಗಡಿ ಈಗ ಕಂಪೆನಿಯ ಉದ್ಯೋಗಿಗಳಿಗೆ ಮಾತ್ರ ತೆರೆದಿರುತ್ತದೆ. ಮುಂದಿನ ವರ್ಷದ ಆರಂಭದಲ್ಲಿ ಅದು ಸಾರ್ವಜನಿಕರಿಗೆ ತೆರೆದುಕೊಳ್ಳುವ ನಿರೀಕ್ಷೆಯಿದೆ.
ಈ ಪ್ರಯೋಗ ಯಶಸ್ವಿಯದರೆ, ಅಮೆಝಾನ್ 2,000ಕ್ಕೂ ಅಧಿಕ ದಿನಸಿ ಅಂಗಡಿಗಳನ್ನು ತೆರೆಯುವ ಯೋಜನೆಯನ್ನು ಹೊಂದಿದೆ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಸೋಮವಾರ ವರದಿ ಮಾಡಿದೆ.







