ಹಣ ಬಿಡುಗಡೆಗೆ ಬಿಸಿಸಿಐಗೆ ಸುಪ್ರೀಂಕೋರ್ಟ್ ಅನುಮತಿ
ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿ

ಹೊಸದಿಲ್ಲಿ, ಡಿ.7: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಉಳಿದೆರಡು ಪಂದ್ಯಗಳಿಗೆ 1.33 ಕೋಟಿ ರೂ. ಹಣ ಬಿಡುಗಡೆ ಮಾಡಲು ಬಿಸಿಸಿಐಗೆ ಸುಪ್ರೀಂಕೋರ್ಟ್ ಬುಧವಾರ ಅನುಮತಿ ನೀಡಿದೆ.
ಸರಣಿಯ ಎಲ್ಲ ಟೆಸ್ಟ್ ಪಂದ್ಯಗಳಲ್ಲಿ ಸಂಗ್ರಹಿಸಿರುವ ಆದಾಯದ ಬಗ್ಗೆ ಅಫಿಡಾವಿತ್ ಸಲ್ಲಿಸುವಂತೆ ನ್ಯಾಯಾಲಯ ಬಿಸಿಸಿಐಗೆ ನಿರ್ದೇಶನ ನೀಡಿದೆ. ಮುಂಬರುವ ಇಂಗ್ಲೆಂಡ್ ವಿರುದ್ಧದ ಸ್ವದೇಶದಲ್ಲಿ ನಡೆಯಲಿರುವ ಏಕದಿನ ಹಾಗೂ ಟ್ವೆಂಟಿ-20 ಪಂದ್ಯಗಳಿಗೆ ತಲಾ 25 ಲಕ್ಷ ರೂ. ವ್ಯಯಿಸಲು ಬಿಸಿಸಿಐಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ.
ಭಾರತ ಹಾಗೂ ಇಂಗ್ಲೆಂಡ್ ಟೆಸ್ಟ್ ಸರಣಿಯ ಆತಿಥ್ಯಕ್ಕೆ ಸಂಬಂಧಿಸಿ ರಾಜ್ಯ ಕ್ರಿಕೆಟ್ ಸಂಸ್ಥೆಗಳು ನಿರ್ಮಿಸಿರುವ ಅಡೆ-ತಡೆಯನ್ನು ಸುಪ್ರೀಂಕೋರ್ಟ್ ನ.8 ರಂದು ನೀಡಿರುವ ತನ್ನ ತೀರ್ಪಿನಲ್ಲಿ ನಿವಾರಿಸಿತ್ತು. ನ.9 ರಂದು ರಾಜ್‌ಕೋಟ್‌ನಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯಕ್ಕೆ 58.66 ಲಕ್ಷ ರೂ. ವೆಚ್ಚ ಮಾಡಲು ಬಿಸಿಸಿಐಗೆ ಅವಕಾಶ ನೀಡಿತ್ತು. ಆತಿಥೇಯ ಸೌರಾಷ್ಟ್ರ ರಾಜ್ಯ ಸಂಸ್ಥೆಗೆ ನಿಧಿಯ ಭಾಗವನ್ನು ನೀಡುವಂತಿಲ್ಲ ಎಂದು ಎಚ್ಚರಿಕೆ ನೀಡಿತ್ತು.
ಟೆಸ್ಟ್ ಸರಣಿಯ ವೇಳೆ ಆಗಿರುವ ಖರ್ಚುವೆಚ್ಚವನ್ನು ಪುಸ್ತಕದಲ್ಲಿ ಬರೆದಿಟ್ಟು ಜಸ್ಟಿಸ್ ಆರ್‌ಎಂ ಲೋಧಾ ಸಮಿತಿಗೆ ಸಲ್ಲಿಸಬೇಕು. ಸಮಿತಿಯ ಲೆಕ್ಕಪರಿಶೋಧಕರು ಇದನ್ನು ಪರಿಶೀಲಿಸಲಿದ್ದಾರೆ ಎಂದು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ.
ಬಿಸಿಸಿಐಗೆ ಕೇಂದ್ರ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿ ಲೋಧಾ ಸಮಿತಿ ಸಲ್ಲಿಸಿರುವ ಅರ್ಜಿಯನ್ನು ಡಿ.9 ರಂದು ವಿಚಾರಣೆಗೆ ಕೈಗೆತ್ತಿಕೊಳ್ಳಲು ನ್ಯಾಯಾಲಯ ಈಗಾಗಲೇ ನಿರ್ಧರಿಸಿದೆ.







