ನೋಟು ರದ್ದತಿಯ ಬಳಿಕ ಆರ್‌ಬಿಐ ಬಿಡುಗಡೆ ಮಾಡಿದ ಹೊಸನೋಟು ಎಷ್ಷು ಗೊತ್ತೇ ?

ಹೊಸದಿಲ್ಲಿ, ಡಿ.7: ನೋಟು ರದ್ದತಿಯ ಬಳಿಕ 19 ಶತಕೋಟಿಗೂ ಹೆಚ್ಚು ಹೊಸ ನೋಟುಗಳನ್ನು ಬಿಡುಗಡೆ ಮಾಡಿದೆಯೆಂದು ಭಾರತೀಯ ರಿಸರ್ವ್ ಬ್ಯಾಂಕ್‌ನ(ಆರ್‌ಬಿಐ) ಗವರ್ನರ್ ಊರ್ಜಿತ್ ಪಟೇಲ್ ಬುಧವಾರ ಮುಂಬೈಯಲ್ಲಿ ಪತ್ರಿಕಾಗೋಷ್ಠಿಯೊಂದರಲ್ಲಿ ತಿಳಿಸಿದ್ದಾರೆ. ನ.8ರ ಬಳಿಕ ಬಿಡುಗಡೆಗೊಳಿಸಿರುವ ನೋಟುಗಳ ಸಂಖ್ಯೆಯ ಕುರಿತು ಆರ್‌ಬಿಐ ಮಾಡಿರುವ ಮೊದಲ ಅಧಿಕೃತ ಘೋಷಣೆ ಇದಾಗಿದೆ.
ಇದುವರೆಗೆ ಹಳೆಯ ನೋಟುಗಳ ರೂಪದಲ್ಲಿ ಬ್ಯಾಂಕ್‌ಗಳಲ್ಲಿ ಠೇವಣಿಯಾಗಿರುವ ಒಟ್ಟು ಮೊತ್ತ ರೂ.11.55 ಲಕ್ಷ ಕೋಟಿಯಾಗಿದೆ. ರೂ.500 ಹಾಗೂ 100ರ ಹೆಚ್ಚು ನೋಟುಗಳ ಮುದ್ರಣಕ್ಕಾಗಿ ಕಳೆದೆರಡು ವಾರಗಳಲ್ಲಿ ಉತ್ಪಾದನೆಯನ್ನು ಮರು ಹೊಂದಾಣಿಕೆ ಮಾಡಲಾಗಿತ್ತೆಂದು ಪಟೇಲ್ ತಿಳಿಸಿದರು.
ನೋಟು ರದ್ದತಿಯಿಂದ ಜನರಿಗೆ ಸ್ವಲ್ಪ ಅನನುಕೂಲವಾಗಿದೆಯಾದರೂ ನೋಟುಗಳಲ್ಲಿ ಹೆಚ್ಚಿನ ಭದ್ರತೆ, ಪಾರದರ್ಶಕತೆ, ತೆರಿಗೆ ಅನುಸರಣೆ ಹಾಗೂ ಡಿಜಿಟೈಸೇಶನ್‌ಗೆ ಹೆಚ್ಚು ಒತ್ತು. ಇವು ಅದರಿಂದಾದ ಲಾಭಗಳಾಗಿವೆ ಎಂದವರು ಹೇಳಿದರು.
ಹಣ ಹಿಂದೆಗೆತ ಮಿತಿಗಿರುವ ನಿರ್ಬಂಧವನ್ನು ಯಾವಾಗ ಹಿಂದೆಗೆಯಲಾಗುವುದೆಂಬುದು ಸ್ಪಷ್ಟವಾಗಿಲ್ಲವೆಂದು ಪಟೇಲ್ ತಿಳಿಸಿದರು.





