2016ನೇ ಸಾಲಿನ ವರ್ಷದ ವ್ಯಕ್ತಿಯನ್ನು ಘೋಷಿಸಿದ ಟೈಮ್ ಮ್ಯಾಗಝಿನ್

ವಾಶಿಂಗ್ಟನ್, ಡಿ. 7: ‘ಟೈಮ್’ ಮ್ಯಾಗಝಿನ್‌ನ ‘ವರ್ಷದ ವ್ಯಕ್ತಿ 2016’ ಆಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ರನ್ನು ಆಯ್ಕೆ ಮಾಡಲಾಗಿದೆ. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಗಳಿಸಿದ ಅಭೂತಪೂರ್ವ ವಿಜಯಕ್ಕಾಗಿ ಅವರನ್ನು ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ.
‘‘ವ್ಯವಸ್ಥೆ ವಿರೋಧಿ, ಜನಮರುಳು ಅಭ್ಯರ್ಥಿಯಾಗಿ ತನ್ನ ಚುನಾವಣಾ ಪ್ರಚಾರ ಆರಂಭಿಸಿದ 70 ವರ್ಷದ ಟ್ರಂಪ್, ಅಮೆರಿಕದ 45ನೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದು ಅವರ ಅಧ್ಯಕ್ಷೀಯ ಅಭಿಯಾನಕ್ಕೆ ದೊರಕಿದ ಭವ್ಯ ಕೊನೆಯಾಗಿದೆ’’ ಎಂದು ‘ಟೈಮ್’ ಹೇಳಿದೆ.
‘ವರ್ಷದ ವ್ಯಕ್ತಿ’ ದ್ವಿತೀಯ ಸ್ಥಾನಿಯಾಗಿ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್‌ರ ಡೆಮಾಕ್ರಟಿಕ್ ಎದುರಾಳಿಯಾಗಿದ್ದ ಹಿಲರಿ ಕ್ಲಿಂಟನ್ ಆಯ್ಕೆಯಾದರೆ, ತೃತೀಯ ಸ್ಥಾನಿಯಾಗಿ ‘ಆನ್‌ಲೈನ್ ಹ್ಯಾಕರ್’ (ಇಂಟರ್‌ನೆಟ್ ಕನ್ನಗಾರರು) ಆಯ್ಕೆಯಾಗಿದ್ದಾರೆ.
ವರ್ಷದ ಆಗುಹೋಗುಗಳ ಮೇಲೆ ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ಭಾರೀ ಪ್ರಭಾವ ಬೀರಿರುವ ವ್ಯಕ್ತಿಯನ್ನು ‘ಟೈಮ್’ ಮ್ಯಾಗಝಿನ್ ಪ್ರತಿ ಡಿಸೆಂಬರ್‌ನಲ್ಲಿ ‘ವರ್ಷದ ವ್ಯಕ್ತಿ’ ಎಂಬುದಾಗಿ ಘೋಷಿಸುತ್ತದೆ.
ಈ ವಾರದ ಆರಂಭದಲ್ಲಿ ನಡೆದ ‘ಟೈಮ್ ವರ್ಷದ ವ್ಯಕ್ತಿ’ ಓದುಗರ ಮತದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮುಂದಿದ್ದರು.







