ಜನರು ಮಲೇಶ್ಯಕ್ಕೆ ಹೋಗುವುದನ್ನು ನಿಷೇಧಿಸಿದ ಮ್ಯಾನ್ಮಾರ್
ರೊಹಿಂಗ್ಯ ಮುಸ್ಲಿಮರ ಮೇಲಿನ ದೌರ್ಜನ್ಯ ವಿರುದ್ಧ ಆಕ್ರೋಶ ಹಿನ್ನೆಲೆ

ಯಾಂಗನ್, ಡಿ. 7: ತನ್ನ ಪ್ರಜೆಗಳು ಮುಸ್ಲಿಮ್ ಬಾಹುಳ್ಯದ ಮಲೇಶ್ಯಕ್ಕೆ ಕೆಲಸಕ್ಕೆ ಹೋಗುವುದನ್ನು ಮ್ಯಾನ್ಮಾರ್ ನಿಷೇಧಿಸಿದೆ. ಅಲ್ಪಸಂಖ್ಯಾತ ರೊಹಿಂಗ್ಯ ಮುಸ್ಲಿಮರ ವಿರುದ್ಧ ಮ್ಯಾನ್ಮಾರ್ ಸೇನೆ ನಡೆಸಿದೆಯೆನ್ನಲಾದ ಹತ್ಯಾಕಾಂಡಕ್ಕೆ ಸಂಬಂಧಿಸಿ ನೆರೆಯ ದೇಶಗಳ ನಡುವಿನ ಸಂಬಂಧ ಹಳಸಿದ ಬಳಿಕ ಈ ಬೆಳವಣಿಗೆ ನಡೆದಿದೆ.
ಮಲೇಶ್ಯ ರಾಜಧಾನಿ ಕೌಲಾಲಂಪುರದಲ್ಲಿ ರವಿವಾರ ನಡೆದ ಬೃಹತ್ ಸಾರ್ವಜನಿಕ ಸಭೆಯೊಂದರಲ್ಲಿ ಮಲೇಶ್ಯ ಪ್ರಧಾನಿ ನಜೀಬ್ ರಝಕ್, ರೊಹಿಂಗ್ಯ ಮುಸ್ಲಿಮರ ಹತ್ಯಾಕಾಂಡದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ತನ್ನ ಉಸ್ತುವಾರಿಯ ದೇಶದಲ್ಲಿ ‘ಜನಾಂಗೀಯ ಹತ್ಯೆ’ ನಡೆಸುವುದಕ್ಕೆ ಅವಕಾಶ ನೀಡಿರುವುದಕ್ಕಾಗಿ ಅವರು ಮ್ಯಾನ್ಮಾರ್‌ನ ವಾಸ್ತವಿಕ ನಾಯಕಿ ಆಂಗ್ ಸಾನ್ ಸೂ ಕಿ ವಿರುದ್ಧ ಹರಿಹಾಯ್ದಿದ್ದರು.
ಮ್ಯಾನ್ಮಾರ್‌ನ ಪಶ್ಚಿಮದ ರಾಜ್ಯ ರಖೈನ್‌ನಲ್ಲಿ ನಡೆಸಿದ ದೌರ್ಜನ್ಯವನ್ನು ಪ್ರತಿಭಟಿಸಲು ಸಭೆ ನಡೆಸಲಾಗಿತ್ತು. ಸೇನಾ ದೌರ್ಜನ್ಯದಿಂದಾಗಿ 20,000ಕ್ಕೂ ಅಧಿಕ ರೊಹಿಂಗ್ಯ ಮುಸ್ಲಿಮರು ಬಾಂಗ್ಲಾದೇಶಕ್ಕೆ ಪಲಾಯನಗೈದಿದ್ದಾರೆ ಎಂದು ಹೇಳಲಾಗಿದೆ.
ಮ್ಯಾನ್ಮಾರ್‌ನ ಭದ್ರತಾ ಪಡೆಗಳು ನಡೆಸಿರುವ ಸಾಮೂಹಿಕ ಅತ್ಯಾಚಾರ, ಚಿತ್ರಹಿಂಸೆ ಮತ್ತು ಹತ್ಯಾಕಾಂಡದ ಭಯಾನಕ ಕತೆಗಳನ್ನು ಸಂತ್ರಸ್ತರು ಅಂತಾರಾಷ್ಟ್ರೀಯ ಸಂಘಟನೆಗಳಿಗೆ ವಿವರಿಸಿದ್ದಾರೆ. ನದಿಯನ್ನು ದಾಟಿ ಬಾಂಗ್ಲಾದೇಶ ತಲುಪಲು ಪ್ರಯತ್ನಿಸುವ ವೇಳೆ ಡಝನ್‌ಗಟ್ಟಳೆ ಮಂದಿ ಮೃತಪಟ್ಟಿದ್ದಾರೆ.







