ಅಲೆಪ್ಪೊ ಹಳೆ ನಗರದ ನಿಯಂತ್ರಣ ಪಡೆದ ಸರಕಾರಿ ಪಡೆಗಳು

ಬೆರೂತ್, ಡಿ. 7: ಬಂಡುಕೋರರ ನಿಯಂತ್ರಣದಲ್ಲಿದ್ದ ಅಲೆಪ್ಪೊ ಹಳೆನಗರದ ಎಲ್ಲ ಭಾಗಗಳನ್ನು ಸಿರಿಯದ ಸೇನೆ ತನ್ನ ವಶಕ್ಕೆ ಪಡೆದುಕೊಂಡಿದೆ ಎಂದು ಸಿರಿಯದ ಮಾನವ ಹಕ್ಕುಗಳ ವೀಕ್ಷಣಾಲಯ ಬುಧವಾರ ಹೇಳಿದೆ.
ಇದರೊಂದಿಗೆ, ಬಂಡುಕೋರರು ಕಳೆದ ಎರಡು ವಾರಗಳಲ್ಲಿ ತಮ್ಮ ನಿಯಂತ್ರಣದಲ್ಲಿದ್ದ ಭದ್ರಕೋಟೆಯ ಮೂರನೆ ಎರಡರಷ್ಟು ಭಾಗಗಳನ್ನು ಕಳೆದುಕೊಂಡಂತಾಗಿದೆ.
ಸಿರಿಯ ಸೇನೆ ಮತ್ತು ಮಿತ್ರ ಪಡೆಗಳು ಹಳೆಯ ನಗರವನ್ನು ಮಂಗಳವಾರ ಪ್ರವೇಶಿಸಿದವು. ಈಗ ಸಿರಿಯ ಸೇನೆಯು ಆಕ್ರಮಣಕ್ಕೊಳಗಾಗಿರುವ ನಗರದ ಪೂರ್ವ ಭಾಗದಿಂದ ಬಂಡುಕೋರರನ್ನು ಹೊರಗಟ್ಟಿ ಐದು ವರ್ಷಗಳ ಆಂತರಿಕ ಯುದ್ಧದಲ್ಲಿ ಮಹತ್ವದ ವಿಜಯವೊಂದನ್ನು ಸಂಪಾದಿಸುವ ಸಾಧ್ಯತೆಗೆ ಅತ್ಯಂತ ನಿಕಟವಾಗಿದೆ.
ಸಿರಿಯ ಸೇನೆಯು ಮಂಗಳವಾರ ಹಗಲು ಮತ್ತು ರಾತ್ರಿ ಅಲೆಪ್ಪೊ ಹಳೆನಗರವನ್ನು ಪ್ರವೇಶಿಸಿದೆ ಹಾಗೂ ಭಾರೀ ವಾಯು ದಾಳಿ ಮತ್ತು ಶೆಲ್ ದಾಳಿ ನಡೆಸುವ ಮೂಲಕ ಅದಕ್ಕೆ ಬೆಂಬಲ ನೀಡಲಾಗುತ್ತಿದೆ. ಸೇನೆಯ ದಾಳಿಯನ್ನು ಎದುರಿಸಲಾಗದೆ ಬಂಡುಕೋರರು ಐತಿಹಾಸಿಕ ಹಳೆನಗರದಿಂದ ಹಿಂದೆ ಸರಿದಿದ್ದಾರೆ.
ಸರಕಾರಿ ಪಡೆಗಳು ಹಳೆನಗರದ ಕೆಲವು ಭಾಗಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿವೆ, ಆದರೆ, ಎಲ್ಲ ಪ್ರದೇಶಗಳನ್ನು ಅಲ್ಲ ಎಂದು ಟರ್ಕಿಯಲ್ಲಿ ನೆಲೆ ಹೊಂದಿರುವ ಬಂಡುಕೋರ ಬಣಗಳ ಪ್ರತಿನಿಧಿಯೊಬ್ಬರು ‘ರಾಯ್ಟರ್ಸ್’ಗೆ ಹೇಳಿದರು.







