ಕಂದೀಲ್ ಬಲೂಚ್ ಹತ್ಯೆ: ಸೋದರ ಸೇರಿದಂತೆ ನಾಲ್ವರ ವಿರುದ್ಧ ದೋಷಾರೋಪ

ಲಾಹೋರ್, ಡಿ. 7: ಸಾಮಾಜಿಕ ಮಾಧ್ಯಮಗಳಲ್ಲಿ ಸಕ್ರಿಯವಾಗಿದ್ದ ಪಾಕಿಸ್ತಾನಿ ಮಹಿಳೆ ಕಂದೀಲ್ ಬಲೂಚ್ ಹತ್ಯೆಗೆ ಸಂಬಂಧಿಸಿ, ಆಕೆಯ ಸಹೋದರ ಸೇರಿದಂತೆ ನಾಲ್ವರ ವಿರುದ್ಧ ಪಾಕಿಸ್ತಾನದ ನ್ಯಾಯಾಲಯವೊಂದು ದೋಷಾರೋಪ ಹೊರಿಸಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದ ಮಹಿಳೆ ದೇಶದಲ್ಲಿ ಭಾರೀ ಪ್ರಸಿದ್ಧಿ ಗಳಿಸಿದ್ದರು. ಆದರೆ, ಅದೇ ವೇಳೆ, ತನ್ನ ದಿಟ್ಟ ನಿಲುವುಗಳಿಗಾಗಿ ವಿರೋಧವನ್ನೂ ಎದುರಿಸಿದ್ದರು.
ಫೌಝಿಯಾ ಅಝೀಮ್ ಎಂಬ ಮೂಲ ಹೆಸರಿನ ಮಹಿಳೆಯನ್ನು ಮುಲ್ತಾನ್ ನಗರದ ಆಕೆಯ ಮನೆಯಲ್ಲೇ ಜುಲೈ 16ರಂದು ಕತ್ತು ಹಿಸುಕು ಕೊಲ್ಲಲಾಗಿತ್ತು.
ಹತ್ಯೆಯ ಒಂದು ದಿನದ ಬಳಿಕ, ಪೊಲೀಸ್ ಕಸ್ಟಡಿಯಲ್ಲಿದ್ದ ಆಕೆಯ ಸಹೋದರ ಮುಹಮ್ಮದ್ ವಸೀಮ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ತನ್ನ ಕುಟುಂಬದ ‘ಗೌರವ’ವನ್ನು ಕಾಪಾಡುವ ಅಗತ್ಯವಿತ್ತು ಎಂದು ಹೇಳಿರುವುದನ್ನು ಸ್ಮರಿಸಬಹುದಾಗಿದೆ.
ಹತ ಮಹಿಳೆಯ ಸಹೋದರ, ಸೋದರ ಸಂಬಂಧಿ, ಟ್ಯಾಕ್ಸಿ ಚಾಲಕ ಅಬ್ದುಲ್ ಬಸಿತ್ ಮತ್ತು ಇನ್ನೋರ್ವ ವ್ಯಕ್ತಿಯ ವಿರುದ್ಧ ನ್ಯಾಯಾಲಯವು ದೋಷಾರೋಪ ಹೊರಿಸಿದೆ.ಆದರೆ, ಆರೋಪಿಗಳೆಲ್ಲರೂ ತಮ್ಮ ಮೇಲಿನ ಆರೋಪಗಳನ್ನು ತಿರಸ್ಕರಿಸಿದ್ದಾರೆ.







