ಲಕ್ಷಾಂತರ ರೂ ಅಕ್ರಮ ಹಣ ಸಾಗಾಟ: ಕಲ್ಲಡ್ಕ ಮೂಲದ ಮೂವರು ಆರೋಪಿಗಳ ಬಂಧನ

ಪುತ್ತೂರು, ಡಿ.7 : ಕಾರೊಂದರಲ್ಲಿ ಅಕ್ರಮವಾಗಿ ಹಣ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಬುಧವಾರ ಸಂಜೆ ಪತ್ತೆ ಹಚ್ಚಿದ ಪೊಲೀಸರು ರೂ. 18.80 ಲಕ್ಷ ಹಣದೊಂದಿಗೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಮಾಣಿ ಮೈಸೂರು ರಾಜ್ಯ ಹೆದ್ದಾರಿಯಲ್ಲಿನ ಪುತ್ತೂರು ನಗರದ ಹೊರವಲಯದ ಮುಕ್ರಂಪಾಡಿ ಎಂಬಲ್ಲಿ ಆರೋಪಿಗಳನ್ನು ಪತ್ತೆ ಹಚ್ಚಿದ ಪೊಲೀಸರು ವಶಕ್ಕೆ ಪಡೆದುಕೊಂಡರು.
ಬಂಟ್ವಾಳ ತಾಲೂಕಿನ ಗೋಳ್ತಮಜಲು ಗ್ರಾಮದ ಕಲ್ಲಡ್ಕ ನಿವಾಸಿ ಇಬ್ರಾಹಿಂ ಎಂಬವರ ಪುತ್ರ ಜಾಫರ್ ಶರೀಫ್(28), ಗೋಳ್ತಮಜಲು ಗ್ರಾಮದ ಮಾಣಿಮಜಲು ನಿವಾಸಿ ಅಬೂಬಕ್ಕರ್ ಎಂಬವರ ಪುತ್ರ ನಝೀರ್(25) ಮತ್ತು ಗೋಳ್ತಮಜಲು ಗ್ರಾಮದ ಕೆ.ಸಿ.ರೋಡು ನಿವಾಸಿ ಮಹಮ್ಮದ್ ಇಕ್ಬಾಲ್(26) ಬಂಧಿತ ಆರೋಪಿಗಳು.
ಇವರು ರಿಡ್ಝ್ ಕಾರಿನಲ್ಲಿ ಅಕ್ರಮವಾಗಿ ನಗದು ಸಾಗಾಟ ಮಾಡುತ್ತಿದ್ದರು ಎನ್ನಲಾಗಿದ್ದು, ಇವರಿಂದ ರೂ. 2 ಸಾವಿರ ಮುಖಬೆಲೆಯ ರೂ. 16.80 ಲಕ್ಷ, ರೂ. 100 ಮುಖಬೆಲೆಯ ರೂ. 1,90,700 ಹಾಗೂ ರೂ. 50 ಮುಖಬೆಲೆಯ ರೂ.9,300 ಹಣವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ಭೂಷಣ್ ಗುಲಾಬ್ ರಾವ್ ಬೋರಸೆ ಅವರ ನಿರ್ದೇಶನದಂತೆ, ಹೆಚ್ಚುವರಿ ಪೊಲಿಸ್ ಅಧೀಕ್ಷಕ ಡಾ. ವೇದಮೂರ್ತಿ ಅವರ ಮಾರ್ಗದರ್ಶನದಲ್ಲಿ ಪುತ್ತೂರು ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ರಿಷ್ಯಂತ್ ಸಿ.ಬಿ ಅವರ ಅದೇಶದಂತೆ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಸಂಪ್ಯ ಠಾಣಾ ಎಸ್‌ಐ ಅಬ್ದುಲ್ ಖಾದರ್, ಸಿಬ್ಬಂದಿಗಳಾದ ಚಂದ್ರ ಹೆಚ್. ಸಿ, ವಿನಯ ಕುಮಾರ್, ರವೂಫ್, ನಗರ ಠಾಣೆಯ ಸಿಬ್ಬಂದಿಗಳಾದ ಸ್ಕರಿಯಾ ಹೆಚ್.ಸಿ, ಪ್ರಶಾಂತ್ ರೈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.







