ಈಶ್ವರಪ್ಪ ವಿರುದ್ಧ ಕಠಿಣ ಕ್ರಮಕ್ಕೆ ಯಡ್ಡಿ ಪಟ್ಟು...? ಇಕ್ಕಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ !
ಗೊಂದಲದಲ್ಲಿ ಕಾರ್ಯಕರ್ತರು
_0.jpg)
ಶಿವಮೊಗ್ಗ, ಡಿ. 7: ಸಂಗೋಳ್ಳಿ ರಾಯಣ್ಣ ಬ್ರಿಗೇಡ್ ಇದೀಗ ಮತ್ತೊಮ್ಮೆ ಬಿಜೆಪಿ ಪಾಳೇಯದಲ್ಲಿ ತೀವ್ರ ತಳಮಳ ಸೃಷ್ಟಿಸಿದೆ. ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೆ.ಎಸ್. ಈಶ್ವರಪ್ಪನಡುವೆ ಮತ್ತೊಂದು ಸುತ್ತಿನ ಹಣಾಹಣಿಗೆ ಕಾರಣವಾಗಿದೆ. ಇದೀಗ ಈ ಇಬ್ಬರು ಮುಖಂಡರು ನೇರ ಅಖಾಡಕ್ಕಿಳಿದಿದ್ದು, ನಿರ್ಣಾಯಕ ಹಂತ ತಲುಪಿದೆ. ಇದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ.
ಬ್ರಿಗೇಡ್ ಕಾರ್ಯಚಟುವಟಿಕೆಗೆ ಮೊದಲಿನಿಂದಲೂ ಆಕ್ಷೇಪ ವ್ಯಕ್ತಪಡಿಸುತ್ತಲೇ ಬಂದಿದ್ದ ಬಿಎಸ್‌ವೈ, ಇತ್ತೀಚೆಗೆ ಬ್ರಿಗೇಡ್ ಕಾರ್ಯಕ್ರಮದಲ್ಲಿ ಪಕ್ಷದ ಯಾರೊಬ್ಬರೂ ಪಾಲ್ಗೊಳ್ಳಬಾರದು ಎಂದು ಫರ್ಮಾನು ಹೊರಡಿಸಿದ್ದರು. ಆದೇಶ ಉಲ್ಲಂಘಿಸುವವರ ವಿರುದ್ಧ ಶಿಸ್ತು ಕ್ರಮ ಜರಗಿಸುವ ಎಚ್ಚರಿಕೆಯ ಸಂದೇಶವನ್ನೂ ರವಾನಿಸಿದ್ದರು. ಮತ್ತೊಂದೆಡೆ ಸಂಘಟನೆಯ ಸಂಸ್ಥಾಪಕ ಈಶ್ವರಪ್ಪನವರು, ಬ್ರಿಗೇಡ್ ಚಟುವಟಿಕೆ ಮುಂದುವರಿಸಿಯೇ ಸಿದ್ಧ. ಯಾವುದೇ ಕಾರಣಕ್ಕೂ ಸಂಘಟನೆಯಿಂದ ಹೊರಬರುವ ಪ್ರಶ್ನೆಯೇ ಇಲ್ಲ. ಬ್ರಿಗೇಡ್‌ನ ಪೂರ್ವ ನಿರ್ಧರಿತ ಕಾರ್ಯಕ್ರಮಗಳು ಎಂದಿನಂತೆಯೇ ನಡೆಯಲಿವೆ. ಯಾವುದೇ ನೋಟಿಸ್‌ಗೂ ಹೆದರುವ ಪ್ರಶ್ನೆಯೇ ಇಲ್ಲ ಎಂದು ಘೋಷಿಸಿದ್ದಾರೆ.
ಈ ಮೂಲಕ ಬಿಎಸ್‌ವೈ ಏಟಿಗೆ ತಕ್ಕ ತಿರುಗೇಟು ನೀಡಿದ್ದು, ಅವರ ಎಚ್ಚರಿಕೆಯ ಮಾತುಗಳಿಗೆ ಯಾವುದೇ ಸೊಪ್ಪು ಹಾಕಿಲ್ಲ. ಇದೀಗ ಬ್ರಿಗೇಡ್‌ನಲ್ಲಿರುವ ವಿವಿಧ ಸಂಘಟನೆ, ವರ್ಗಗಳ ಮುಖಂಡರು ಕೂಡ ಪರೋಕ್ಷವಾಗಿ ಬಿಎಸ್‌ವೈ ವಿರುದ್ಧ ಟೀಕಾಪ್ರಹಾರ ನಡೆಸಲಾರಂಭಿಸಿದ್ದು, ಈಶ್ವರಪ್ಪನವರಿಗೆ ಬೆಂಬಲವಾಗಿ ನಿಲ್ಲಲಾರಂಭಿಸಿದ್ದಾರೆ.
ಇದು ಬಿಎಸ್‌ವೈಗೆ ದೊಡ್ಡ ತಲೆನೋವಾಗಿ ಪರಿಣಮಿಸಲಾರಂಭಿಸಿದೆ. ಶತಾಯಗತಾಯ ಬ್ರಿಗೇಡ್ ಕಾರ್ಯಚಟುವಟಿಕೆಗಳನ್ನು ಸ್ಥಗಿತಗೊಳಿಸಲು ಇನ್ನಿಲ್ಲದ ಕಸರತ್ತು ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
ಕ್ರಮಕ್ಕೆ ಪಟ್ಟು:
ಪಕ್ಷದ ವರಿಷ್ಠರ ಆಕ್ಷೇಪದ ಹೊರತಾಗಿಯೂ ಈಶ್ವರಪ್ಪ ಬ್ರಿಗೇಡ್ ಕಾರ್ಯಚಟುವಟಿಕೆಗಳನ್ನು ಮುಂದುವರಿಸುವುದಾಗಿ ಬಹಿರಂಗವಾಗಿಯೇ ಹೇಳಿರುವುದು ಹಾಗೂ ನೋಟಿಸ್‌ಗೆ ಹೆದರುವುದಿಲ್ಲ ಎಂದು ಸವಾಲು ಹಾಕಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಎಸ್‌ವೈ, ಈಶ್ವರಪ್ಪನವರ ವಿರುದ್ಧ ಶಿಸ್ತು ಕ್ರಮ ಜರಗಿಸಬೇಕು ಎಂದು ಪಕ್ಷದ ರಾಷ್ಟ್ರೀಯ ಮುಖಂಡರಿಗೆ ಒತ್ತಾಯಿಸಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ.
ಇಕ್ಕಟ್ಟು:
ಮತ್ತೊಂದೆಡೆ ಬಿಜೆಪಿಯಲ್ಲಿರುವ ಬಿಎಸ್‌ವೈ ವಿರೋಧಿ ಪಾಳೇಯವು ಗುಪ್ತವಾಗಿ ಈಶ್ವರಪ್ಪಗೆ ಬೆಂಬಲವಾಗಿ ನಿಂತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಬಿಎಸ್‌ವೈ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ಇತರ ಮುಖಂಡರ ಅಭಿಪ್ರಾಯ ಆಲಿಸುತ್ತಿಲ್ಲ. ತಮ್ಮ ಮೂಗಿನ ನೇರಕ್ಕೆ ನಡೆದುಕೊಳ್ಳಲಾರಂಭಿಸಿದ್ದಾರೆ. ತಮ್ಮ ಆಪ್ತರಿಗಷ್ಟೇ ಪಕ್ಷದ ಪ್ರಮುಖ ಸ್ಥಾನಮಾನ ಕಲ್ಪಿಸುತ್ತಿದ್ದಾರೆ ಎಂಬುವುದು ಅವರ ವಿರೋಧಿ ಪಾಳೇಯದ ಆಕ್ಷೇಪವಾಗಿದೆ.
ಬಿಎಸ್‌ವೈ ವರ್ತನೆಯ ಬಗ್ಗೆ ಈಗಾಗಲೇ ವಿರೋಧಿ ಪಾಳೇಯವು ರಾಷ್ಟ್ರೀಯ ಮುಖಂಡರಿಗೂ ದೂರು ನೀಡಿದೆ. ಅವರ ವರ್ತನೆಯಿಂದ ಬೇಸತ್ತು ಈಶ್ವರಪ್ಪನವರು ಬ್ರಿಗೇಡ್ ಸ್ಥಾಪಿಸುವಂತಾಗಿದೆ. ಯಾವುದೇ ಕಾರಣಕ್ಕೂ ಈಶ್ವರಪ್ಪ ವಿರುದ್ಧ ಕ್ರಮಕೈಗೊಳ್ಳಬಾರದು. ಪ್ರಸ್ತುತ ಪಕ್ಷದಲ್ಲಿರುವ ಗೊಂದಲ ಸರಿಪಡಿಸಲು ಕ್ರಮಕೈಗೊಳ್ಳಬೇಕು. ಬಿಎಸ್‌ವೈ ಮತ್ತವರ ಬೆಂಬಲಿಗರ ಏಕಪಕ್ಷೀಯ ನಿರ್ಧಾರಗಳಿಗೆ ಕಡಿವಾಣ ಹಾಕಿದರೆ ಎಲ್ಲವೂ ಸರಿ ಹೋಗಲಿದೆ ಎಂದು ವಿರೋಧಿ ಬಣವು ರಾಷ್ಟ್ರೀಯ ಮುಖಂಡರಿಗೆ ತಮ್ಮ ಅಹವಾಲು ಸಲ್ಲಿಸಿದೆ ಎನ್ನಲಾಗಿದೆ.
ಇದರಿಂದ ರಾಷ್ಟ್ರೀಯ ಮುಖಂಡರು ಇಕ್ಕಟ್ಟಿಗೆ ಸಿಲುಕುವಂತಾಗಿದೆ. ಬಿಎಸ್‌ವೈ ಒತ್ತಾಯಿಸಿದರೂ ಈಶ್ವರಪ್ಪ ವಿರುದ್ಧ ವರಿಷ್ಠರು ಕಠಿಣ ಕ್ರಮ ಜರಗಿಸುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದ್ದು, ಕಾದು ನೋಡಲು ನಿರ್ಧರಿಸಿದ್ದಾರೆ. ಜೊತೆಗೆ ಈ ಇಬ್ಬರು ಮುಖಂಡರ ನಡುವೆ ಏರ್ಪಟ್ಟಿರುವ ಭಿನ್ನಾಭಿಪ್ರಾಯ ಶಮನಕ್ಕೆ ಮುಂದಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಬಿಎಸ್‌ವೈ ಹಾಗೂ ಈಶ್ವರಪ್ಪ ನಡುವೆ ನೇರಾನೇರ ಸಮರಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗೆಯೇ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲವೆಂಬುವುದನ್ನು ತೋರಿಸಿಕೊಟ್ಟಿದ್ದು, ಈ ಕಲಹ ಮುಂದೆ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಇನ್ನಷ್ಟೆ ಕಾದು ನೋಡಬೇಕಾಗಿದೆ.
ಶಿವಮೊಗ್ಗ ಜಿಲ್ಲಾಧ್ಯಕ್ಷರ ನೇಮಕವೇ ಆಕ್ರೋಶಕ್ಕೆ ಕಾರಣ ...!
ತವರೂರು ಶಿವಮೊಗ್ಗ ಜಿಲ್ಲಾ ಬಿಜೆಪಿ ಪಾಳೇಯದ ಮೇಲೆ ಹಿಡಿತ ಸಾಧಿಸಲು ಮೊದಲಿನಿಂದಲು ಯಡಿಯೂರಪ್ಪ ಹಾಗೂ ಈಶ್ವರಪ್ಪ ಪೈಪೋಟಿ ನಡೆಸಿಕೊಂಡು ಬರುತ್ತಿರುವುದು ಸುಳ್ಳಲ್ಲ. ಮೊದಲಿನಿಂದಲೂ ಬಿಎಸ್‌ವೈ ಜಿಲ್ಲಾ ಬಿಜೆಪಿ ಪಾಳೇಯದಲ್ಲಿ ಹಿಡಿತ ಹೊಂದಿದ್ದರು. ಅವರು ಪಕ್ಷ ತೊರೆದು ಕೆಜೆಪಿ ಪಕ್ಷ ಕಟ್ಟಿದಾಗ ಈಶ್ವರಪ್ಪ ಅವರೇ ಜಿಲ್ಲಾ ಬಿಜೆಪಿಯ ನಿರ್ಣಾಯಕ ನಾಯಕರಾಗಿದ್ದರು. ಆದರೆ, ಯಡಿಯೂರಪ್ಪ ಮತ್ತೆ ಬಿಜೆಪಿಗೆ ಹಿಂದಿರುಗಿದಾಗ ಈ ಹಿಂದೆ ಪಕ್ಷದಲ್ಲಿ ಹೊಂದಿದ್ದ ಪ್ರಾಬಲ್ಯ ಅವರಿಗಿಲ್ಲವಾಗಿತ್ತು. ಅವರ ಬೆಂಬಲಿಗರಿಗೂ ಪಕ್ಷದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗದಂತಾಗಿತ್ತು. ಈಶ್ವರಪ್ಪ ಬೆಂಬಲಿಗರಿಗೆ ಹೆಚ್ಚಿನ ಆದ್ಯತೆ ದೊರಕಿತ್ತು. ಇದರಿಂದ ತೀವ್ರ ಅಸಮಾಧಾನಗೊಂಡಿದ್ದ ಬಿಎಸ್‌ವೈ ಮೌನಕ್ಕೆ ಶರಣಾಗಿದ್ದರು.
ರಾಜ್ಯಾಧ್ಯಕ್ಷರಾಗಿ ನಿಯೋಜನೆ ಆದ ದಿನಗಂದಲೇ ಜಿಲ್ಲಾ ಬಿಜೆಪಿಯಲ್ಲಿ ಮತ್ತೆ ತಮ್ಮ ಅಧಿಪತ್ಯ ಸ್ಥಾಪಿಸಲು ಮುಂದಾದರು. ತಮ್ಮ ಆಪ್ತೇಷ್ಟರನ್ನು ಪಕ್ಷದ ಜಿಲ್ಲಾಧ್ಯಕ್ಷ ಸೇರಿದಂತೆ ವಿವಿಧ ಘಟಗಳಿಗೆ ನಿಯೋಜನೆ ಮಾಡಿದರು. ಈಶ್ವರಪ್ಪ ಅಭಿಪ್ರಾಯಕ್ಕೆ ಯಾವುದೇ ಮನ್ನಣೆಯಿಲ್ಲದಂತೆ ಮಾಡಿದರು. ಉದ್ದೇಶಪೂರ್ವಕವಾಗಿ ಅವರನ್ನು ನಿರ್ಲಕ್ಷ್ಯ ಮಾಡಲಾಯಿತು. ಬಿಎಸ್‌ವೈ ವರ್ತನೆಯಿಂದ ಅಸಮಾಧಾನಗೊಂಡ ಈಶ್ವರಪ್ಪ ಅವರು ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪನೆ ಮಾಡಲು ಮುಖ್ಯ ಕಾರಣವಾಯಿತು ಎಂದು ಹೇಳಲಾಗುತ್ತಿದೆ.
ಈಶ್ವರಪ್ಪಗೆ ಟಿಕೆಟ್ ಕೈ ತಪ್ಪುವ ಆತಂಕ !
ಮುಂದಿನ ವಿಧಾನಸಭೆ ಚುನಾವಣೆಗೆ ಶಿವಮೊಗ್ಗ ಕ್ಷೇತ್ರದಿಂದ ಮತ್ತೆ ಅಖಾಡಕ್ಕಿಳಿಯಲು ಈಗಾಗಲೇ ಕೆ.ಎಸ್. ಈಶ್ವರಪ್ಪ ಅಗತ್ಯ ಪೂರ್ವಬಾವಿ ಸಿದ್ಧತೆ ಮಾಡಿಕೊಳ್ಳಲಾರಂಭಿಸಿದ್ದಾರೆ. ಮತ್ತೊಂದೆಡೆ ಬಿ.ಎಸ್.ಯಡಿಯೂರಪ್ಪನವರೂ ಈಶ್ವರಪ್ಪ ಅವರ ಟಿಕೆಟ್ ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂಬ ಮಾತು ಸ್ವತಃ ಬಿಜೆಪಿ ಪಾಳೇಯದಿಂದಲೇ ಕೇಳಿಬರುತ್ತಿದೆ. ತಮ್ಮ ಪುತ್ರ ಬಿ.ವೈ.ರಾಘವೇಂದ್ರ ಅಥವಾ ಬೆಂಬಲಿಗರಲ್ಲಿ ಓರ್ವರನ್ನು ಶಿವಮೊಗ್ಗದಿಂದ ಅಖಾಡಕ್ಕಿಳಿಸುವ ಕಾರ್ಯತಂತ್ರ ರೂಪಿಸುತ್ತಿದ್ದಾರೆನ್ನಲಾಗಿದೆ. ಇದೂ ಕೂಡ ಈಶ್ವರಪ್ಪ ಅವರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಹಿನ್ನೆಲೆಯಲ್ಲಿ ಬಿಎಸ್‌ವೈ ವಿರುದ್ಧ ಅವರು ಬುಸುಗುಡಲಾರಂಭಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಈಶ್ವರಪ್ಪ ಬೆಂಬಲಿಗರು ಮಾತ್ರ ಇದನ್ನು ಅಲ್ಲಗಳೆಯುತ್ತಾರೆ. ‘ಈಶ್ವರಪ್ಪ ಅವರು ಬಿಜೆಪಿ ಅಭ್ಯರ್ಥಿಯಾಗಿ ಶಿವಮೊಗ್ಗದಿಂದ ಕಣಕ್ಕಿಳಿಯುವುದು ನಿಶ್ಚಿತ. ಅವರ ಗೆಲುವು ಖಚಿತ. ಇದರಲ್ಲಿ ಯಾವುದೇ ಅನುಮಾನ ಬೇಡ’ ಎಂದು ಬೆಂಬಲಿಗರು ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.
ಈಶ್ವರಪ್ಪ ಉಚ್ಚಾಟನೆ..?
ಈಶ್ವರಪ್ಪ ಅವರು ಪಕ್ಷದ ಶಿಸ್ತು ಉಲ್ಲಂಘಿಸುತ್ತಿದ್ದಾರೆ. ಇದು ಪಕ್ಷದ ಸಂಘಟನೆಯ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣ ಮುಂದಿಟ್ಟು ಈಶ್ವರಪ್ಪ ಅವರನ್ನು ಶಿಸ್ತು ಕ್ರಮದ ನೆಲೆಯಲ್ಲಿ ಕೆಲ ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಬೇಕು ಎಂದು ಬಿಎಸ್‌ವೈ, ಪಕ್ಷದ ಹೈಕಮಂಡ್ ಕದ ತಟ್ಟಿದ್ದಾರೆ ಎಂಬ ವಿಚಾರಗಳು ಪಕ್ಷದ ಒಳಗಿಂದಲೇ ಕೇಳಿ ಬರುತ್ತಿವೆ.







