ಸರಣಿಯಿಂದ ರಹಾನೆ ಔಟ್: ಮನೀಷ್ ಪಾಂಡೆಗೆ ಅವಕಾಶ

ಹೊಸದಿಲ್ಲಿ, ಡಿ.7: ಭಾರತದ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಅಭ್ಯಾಸದ ವೇಳೆ ಬಲಮಧ್ಯ ಬೆರಳಿಗೆ ಗಾಯ ಮಾಡಿಕೊಂಡಿದ್ದು, ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಉಳಿದೆರಡು ಪಂದ್ಯಗಳಿಂದ ಹೊರಗುಳಿದಿದ್ದಾರೆ.
ಕರ್ನಾಟಕದ ಬ್ಯಾಟ್ಸ್‌ಮನ್ ಮನೀಷ್ ಪಾಂಡೆ ಟೆಸ್ಟ್ ತಂಡಕ್ಕೆ ಇದೇ ಮೊದಲ ಬಾರಿ ಆಯ್ಕೆಯಾಗಿದ್ದಾರೆ. ಮೊಹಾಲಿ ಟೆಸ್ಟ್‌ನ ವೇಳೆ ಗಾಯಗೊಂಡಿರುವ ಮುಹಮ್ಮದ್ ಶಮಿ ಬದಲಿಗೆ ಮುಂಬೈ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಅವರಿಗೆ ಮುಂಬೈ ಟೆಸ್ಟ್ ಪಂದ್ಯಕ್ಕೆ ಅವಕಾಶ ನೀಡಲಾಗಿದೆ ಎಂದು ಬಿಸಿಸಿಐ ಹೇಳಿದೆ.
ರಹಾನೆಗೆ ಪ್ರಾಕ್ಟೀಸ್ ನಡೆಸುತ್ತಿದ್ದಾಗ ಬಲ ಮಧ್ಯ ಬೆರಳಿಗೆ ಗಾಯವಾಗಿದೆ. ಗುರುವಾರ ಮುಂಬೈನಲ್ಲಿ ಆರಂಭವಾಗಲಿರುವ ನಾಲ್ಕನೆ ಟೆಸ್ಟ್ ಹಾಗೂ ಚೆನ್ನೈನಲ್ಲಿ ಡಿ.16 ರಿಂದ ಆರಂಭವಾಗಲಿರುವ ಐದನೆ ಟೆಸ್ಟ್ ಪಂದ್ಯದಲ್ಲಿ ರಹಾನೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐ ಬುಧವಾರ ಪ್ರಕಟನೆಯೊಂದರಲ್ಲಿ ತಿಳಿಸಿದೆ.
27ರ ಹರೆಯದ ಕನ್ನಡಿಗ ಪಾಂಡೆ ಇದೇ ಮೊದಲ ಬಾರಿ ಟೆಸ್ಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಪಾಂಡೆ ಈ ತನಕ 12 ಏಕದಿನ ಹಾಗೂ 6 ಟ್ವೆಂಟಿ-20 ಅಂತಾರಾಷ್ಟ್ರಿಯ ಪಂದ್ಯಗಳನ್ನು ಆಡಿದ್ದಾರೆ.
ಇತ್ತೀಚೆಗೆ ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿಯಲ್ಲಿ 75 ಹಾಗೂ 58 ರನ್ ಗಳಿಸಿದ್ದ ಪಾಂಡೆ ಕರ್ನಾಟಕದ ಗೆಲುವಿನಲ್ಲಿ ಪ್ರಮುಖ ಕಾಣಿಕೆ ನೀಡಿದ್ದರು. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 79 ಪಂದ್ಯಗಳಲ್ಲಿ ಆಡಿರುವ ಪಾಂಡೆ 49.28ರ ಸರಾಸರಿಯಲ್ಲಿ 16 ಶತಕ ಬಾರಿಸಿದ್ದಾರೆ.
ರಹಾನೆ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಕಳಪೆ ಪ್ರದರ್ಶನ ನೀಡಿದ್ದರು. ಅವರು 12.60ರ ಸರಾಸರಿಯಲ್ಲಿ 13, 1, 23, 26 ಹಾಗೂ 0 ಗಳಿಸಿದ್ದರು. ಪಾಂಡೆ ಪ್ರಸ್ತುತ ಕರ್ನಾಟಕದ ಪರ ಮೊಹಾಲಿಯಲ್ಲಿ ರಣಜಿ ಪಂದ್ಯ ಆಡುತ್ತಿದ್ದಾರೆ.
ಹಾಗಾಗಿ ನಾಲ್ಕನೆ ಟೆಸ್ಟ್‌ನಲ್ಲಿ ಪಾಂಡೆ ಆಡುವ ಸಾಧ್ಯತೆಯಿಲ್ಲ. ಅವರ ಬದಲಿಗೆ ಅವರದೇ ರಾಜ್ಯದ ಕರುಣ್ ನಾಯರ್ ಮಧ್ಯಮ ಕ್ರಮಾಂಕದಲ್ಲಿ ಆಡಲಿದ್ದಾರೆ. ನಾಯರ್ ಮೊಹಾಲಿ ಟೆಸ್ಟ್‌ನಲ್ಲಿ ಚೊಚ್ಚಲ ಪಂದ್ಯ ಆಡಿದ್ದರು.
ಈ ವರ್ಷಾರಂಭದಲ್ಲಿ ವೆಸ್ಟ್‌ಇಮಡೀಸ್ ಪ್ರವಾಸ ಕೈಗೊಂಡಿದ್ದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದ 25ರ ಪ್ರಾಯದ ಠಾಕೂರ್ ಇನ್ನಷ್ಟೇ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆಯಬೇಕಾಗಿದೆ. ಮುಂಬೈ ಪರ ಆಡಿದ್ದ ಕಳೆದ ರಣಜಿ ಪಂದ್ಯದಲ್ಲಿ ಮೊದಲ ಇನಿಂಗ್ಸ್‌ನಲ್ಲಿ 31 ರನ್‌ಗೆ 6 ವಿಕೆಟ್ ಕಬಳಿಸಿದ್ದರು.







