ಜಯಾ ಸಮಾಧಿ ದರ್ಶನಕ್ಕೆ ಜನಸಾಗರ
ಚೆನ್ನೈ, ಡಿ.7: ಇಲ್ಲಿನ ಮರಿನಾ ಬೀಚ್‌ನಲ್ಲಿರುವ ಎಂಜಿಆರ್ ಸ್ಮಾರಕ ನಿವೇಶನದಲ್ಲಿ ನಿನ್ನೆ ಸಮಾಧಿ ಮಾಡಲಾಗಿರುವ ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾರಿಗೆ ಶ್ರದ್ಧಾಂಜಲಿ ಸಲ್ಲಿಸಲು ತಮಿಳುನಾಡಿನಾದ್ಯಂತದಿಂದ ಸಾವಿರಾರು ಜನರು ಇಂದು ಕೂಡ ಆಗಮಿಸಿದ್ದಾರೆ.
ಪ್ರೀತಿಯ ‘ಅಮ್ಮನಿಗೆ’ ಗೌರವ ಸಲ್ಲಿಸಲು ಒದ್ದೆಗಣ್ಣುಗಳ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉದ್ದದ ಸರತಿಯ ಸಾಲುಗಳಲ್ಲಿ ನಿಂತಿದ್ದರು.
ಎಡಿಎಂಕೆಯ ದಿವಂಗತ ನಾಯಕಿಯ ಬಗ್ಗೆ ತಮ್ಮ ಪ್ರೀತಿ ಹಾಗೂ ಮಮತೆಯ ದ್ಯೋತಕವಾಗಿ ಜನರ ಗುಂಪೊಂದು ತಲೆಗಳನ್ನು ಬೋಳಿಸಿಕೊಂಡಿತ್ತು. ಕುಟುಂಬದ ನಿಕಟ ಸದಸ್ಯನೊಬ್ಬ ಮೃತನಾದಾಗ ತಲೆ ಬೋಳಿಸುವುದು ಪದ್ಧತಿಯಾಗಿದೆ.
ಜಯಲಲಿತಾ ನಿಧನಾನಂತರ ನಗರದಲ್ಲಿ ಶಾಂತಿ- ಸುವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ಕಾಪಾಡಿದುದಕ್ಕಾಗಿ ಸಾರ್ವಜನಿಕರ ಶ್ಲಾಘನೆಗೆ ಪಾತ್ರರಾಗಿರುವ ಪೊಲೀಸರು ಜನಸಂದಣಿಯನ್ನು ನಿಯಂತ್ರಿಸುತ್ತಿದ್ದರು.
ಮುಂದಿನ ತನ್ನ ಚಿತ್ರದ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹೋಗಿದ್ದ ಜನಪ್ರಿಯ ತಮಿಳು ನಟ ಅಜಿತ್‌ಕುಮಾರ್ ವಿದೇಶದಿಂದ ಬಂದೊಡನೆಯೇ ನಟಿ ಪತ್ನಿ ಶಾಲಿನಿಯೊಂದಿಗೆ ಸಮಾಧಿ ಸ್ಥಳಕ್ಕೆ ಹೋಗಿ ಜಯಲಲಿತಾಗೆ ಗೌರವ ಸಲ್ಲಿಸಿದರು.
ಅಮ್ಮ ಜನರ ಹೃದಯಗಳಲ್ಲಿ ಜೀವಂತವಾಗಿರುತ್ತಾರೆಂದು ಜಯಾರ ಚಿತ್ರವಿದ್ದ ಉಂಗುರ ಧರಿಸಿದ್ದ ಎಡಿಎಂಕೆಯ ಭಾವುಕ ಕಾರ್ಯಕರ್ತೆಯೊಬ್ಬಳು ಹೇಳಿದ್ದಾಳೆ. ಕೆಲವು ಕಾರ್ಯಕರ್ತರು ಪೊಯಸ್ ಗಾರ್ಡನ್‌ನಲ್ಲಿರುವ ಜಯಲಲಿತಾರ ನಿವಾಸ ‘ವೇದ ನಿಲಯಂ’ಗೂ ಭೇಟಿ ನೀಡಿದರು.
ತಮ್ಮ ನೆಚ್ಚಿನ ನಾಯಕಿಯ ನಿವಾಸವನ್ನು ಸ್ಮಾರಕ ವನ್ನಾಗಿ ಮಾಡಬೇಕೆಂದು ಕೆಲವು ಕಾರ್ಯಕರ್ತರು ಅಭಿಪ್ರಾಯಿಸಿದರು.





