ನೋಟು ನಿಷೇಧ ಅವಸರದ ಕ್ರಮವಲ್ಲ: ಊರ್ಜಿತ್
ಮುಂಬೈ,ಡಿ.7: ವಿಸ್ತೃತವಾದ ಸಮಾಲೋಚನೆಗಳನ್ನು ನಡೆಸಿದ ಬಳಿಕವೇ ಉನ್ನತ ವೌಲ್ಯದ ನೋಟುಗಳ ನಿಷೇಧಿಸುವ ನಿರ್ಧಾರಕ್ಕೆ ಬರಲಾಗಿದೆಯೇ ಹೊರತು ಅದೊಂದು ಅವಸರದಿಂದ ಕೈಗೊಂಡ ಕ್ರಮವಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಬುಧವಾರ ಸ್ಪಷ್ಟಪಡಿಸಿದ್ದಾರೆ.
ನಗದು ಅಮಾನ್ಯತೆಯ ಬಳಿಕ ಸುಮಾರು 11.85 ಲಕ್ಷ ಕೋಟಿ ರೂ. ಬ್ಯಾಂಕಿಗೆ ಹರಿದುಬಂದಿರುವುದಾಗಿ ಅವರು ತಿಳಿಸಿದರು. 1000 ರೂ. ಹಾಗೂ 500 ರೂ. ಮುಖಬೆಲೆಯ ನೋಟುಗಳ ನಿಷೇಧದಿಂದಾಗಿ ಉಂಟಾಗಿರುವ ನಗದು ಕೊರತೆಯ ಸಮಸ್ಯೆಯನ್ನು ನಿವಾರಿಸಲು, ನೂತನ ಕರೆನ್ಸಿ ನೋಟುಗಳನ್ನು ಆರ್‌ಬಿಐ ಸ್ಥಿರವಾಗಿ ಪೂರೈಕೆ ಮಾಡಲಿದೆಯೆಂದು ಅವರು ಭರವಸೆ ನೀಡಿದರು.
ಮುಂಬೈಯ ಆರ್‌ಬಿಐ ಕಚೇರಿಯಲ್ಲಿ ಬುಧವಾರ ನಡೆದ ದ್ವೈಮಾಸಿಕ ವಿತ್ತ ನೀತಿಯ ಪರಾಮರ್ಶನಾ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಅವರು, ನೋಟು ನಿಷೇಧದಿಂದಾಗಿ ದೊಡ್ಡ ಸಂಖ್ಯೆಯ ಜನರಿಗೆ ತೊಂದರೆಯಾಗಿರುವುದು ಆರ್‌ಬಿಐ ಹಾಗೂ ಕೇಂದ್ರ ಸರಕಾರಕ್ಕೆ ಅರಿವಿದೆ. ಅವುಗಳನ್ನು ಬಗೆಹರಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸಲಾಗುವುದೆಂದು ಊರ್ಜಿತ್ ತಿಳಿಸಿದರು.
ನವೆಂಬರ್ 10ರಿಂದ ಡಿಸೆಂಬರ್ 5ರ ಮಧ್ಯದ ಅವಧಿಯಲ್ಲಿ ಆರ್‌ಬಿಐ ಸುಮಾರು 4 ಲಕ್ಷ ಕೋಟಿ ರೂ. ವೌಲ್ಯದ ವಿವಿಧ ಮುಖಬೆಲೆಯ ನೋಟುಗಳನ್ನು ಪೂರೈಕೆ ಮಾಡಿದೆಯೆಂದು ಅವರು ತಿಳಿಸಿದರು.
ರೂ.500 ಹಾಗೂ 100ರ ಮುಖಬೆಲೆಯ ಹೆಚ್ಚು ನೋಟುಗಳ ಮುದ್ರಣಕ್ಕಾಗಿ ಕಳೆದೆರಡು ವಾರಗಳಲ್ಲಿ ಉತ್ಪಾದನೆಯನ್ನು ಮರು ಹೊಂದಾಣಿಕೆ ಮಾಡಲಾಗಿತ್ತೆಂದು ಪಟೇಲ್ ತಿಳಿಸಿದರು.
ನೋಟು ರದ್ದತಿಯಿಂದ ಜನರಿಗೆ ಸ್ವಲ್ಪ ಅನನುಕೂಲ ವಾಗಿದೆಯಾದರೂ ನೋಟುಗಳಲ್ಲಿ ಹೆಚ್ಚಿನ ಭದ್ರತೆ, ಪಾರದರ್ಶಕತೆ, ತೆರಿಗೆ ಅನುಸರಣೆ ಹಾಗೂ ಡಿಜಿಟೈಸೇಶನ್‌ಗೆ ಹೆಚ್ಚು ಒತ್ತು. ಇವು ಅದರಿಂದಾದ ಲಾಭಗಳಾಗಿವೆ ಎಂದವರು ಹೇಳಿದರು.
ಹಣ ಹಿಂದೆಗೆತ ಮಿತಿಗಿರುವ ನಿರ್ಬಂಧವನ್ನು ಯಾವಾಗ ಹಿಂದೆಗೆಯಲಾಗುವುದೆಂಬುದು ಸ್ಪಷ್ಟವಾಗಿಲ್ಲವೆಂದು ಪಟೇಲ್ ತಿಳಿಸಿದರು.





