ಚರ್ಚೆಗೆ ಅವಕಾಶ ನೀಡದ ವಿಪಕ್ಷದ ವಿರುದ್ಧ ಮೋದಿ ವಾಗ್ದಾಳಿ
ಹೊಸದಿಲ್ಲಿ, ಡಿ.7: ನೋಟು ರದ್ದತಿಯ ಕುರಿತು ಚರ್ಚೆಗೆ ಅವಕಾಶ ನೀಡದ ಅಪ್ರಜಾಸತ್ತಾತ್ಮಕ ಕೃತ್ಯಕ್ಕಾಗಿ ವಿಪಕ್ಷಗಳ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಇಂದು ವಾಗ್ದಾಳಿ ನಡೆಸಿದ್ದಾರೆ. ಈ ಮಹತ್ವದ ಸುಧಾರಣಾ ಕ್ರಮಕ್ಕೆ ಜನರ ಬೆಂಬಲವಿದೆಯೆಂದು ಅವರು ಒತ್ತಿ ಹೇಳಿದ್ದಾರೆ.
ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ಸಂಸತ್ತು ಕಳೆದ ದಶಕಗಳಲ್ಲಿ ಉದ್ವಿಗ್ನತೆ ಹಾಗೂ ಸಾಮಾಜಿಕ ಸಂಘರ್ಷಕ್ಕೆ ಕಾರಣವಾಗಿದ್ದ. ಅಸಂಖ್ಯಾತ ಸರಕಾರಿ ನಿರ್ಣಯಗಳ ಕುರಿತು ಚರ್ಚೆ ನಡೆಸಿದೆ. ಆದರೆ, ಅದೀಗ ನೋಟು ರದ್ದತಿಯಂತಹ ‘ರಚನಾತ್ಮಕ ನಿರ್ಧಾರದ’ ಕುರಿತು ವಿರೋಧಿ ಪಕ್ಷಗಳಿಂದ ಸ್ತಬ್ಧವಾಗಿದೆಯೆಂದು ಕಿಡಿಕಾರಿದರು.
ಆದಾಗ್ಯೂ, ಸಭೆಯ ಕುರಿತು ಪತ್ರಕರ್ತರಿಗೆ ಮಾಹಿತಿ ನೀಡಿದ ಸಂಸದೀಯ ವ್ಯವಹಾರ ಸಚಿವ ಅನಂತಕುಮಾರ್, ಪ್ರಧಾನಿ ಉಲ್ಲೇಖಿಸಿದ ಹಿಂದಿನ ನಿರ್ಣಯಗಳ ಬಗ್ಗೆ ವಿವರ ನೀಡಲಿಲ್ಲ.
ಭಾರತವು ಕಡಿಮೆ ನಗದು ಹಾಗೂ ಡಿಜಿಟಲ್ ಆರ್ಥಿಕತೆಯತ್ತ ಸಾಗುತ್ತಿದೆ ಎಂದು ಒತ್ತಿ ಹೇಳಿದ ಮೋದಿ, ಚುನಾವಣೆಯ ವೇಳೆ ವಿದ್ಯುನ್ಮಾನ ಯಂತ್ರ ಹಾಗೂ ಮತದಾರರ ಪಟ್ಟಿಯ ಬಗ್ಗೆ ತಿಳುವಳಿಕೆ ನೀಡುವಂತೆಯೇ ಈ ಕುರಿತಾಗಿಯೂ ಜಾಗೃತಿ ಹರಡುವಂತೆ ಸಂಸದರಿಗೆ ಕರೆ ನೀಡಿದರು.
ನೋಟು ರದ್ದತಿಯ ವಿಷಯದಲ್ಲಿ ‘ಜನಶಕ್ತಿ’ ಸರಕಾರದ ಪರವಿದೆ. ಕೆಲವು ರಾಜಕೀಯ ಪಕ್ಷಗಳು ಮಾಡುತ್ತಿರುವುದು ಅಪ್ರಜಾಸತ್ತಾತ್ಮಕವಾಗಿದೆ. ವಿಷಯವನ್ನು ಸಂಸತ್ತಿನಲ್ಲಿ ಚರ್ಚಿಸಬೇಕೆಂದು ಅವರು ಹೇಳಿದರು.





