ನೋಟು ನಿಷೇಧ: ರಷ್ಯಾ ಬಳಿಕ ಇತರ ದೇಶಗಳಿಂದಲೂ ಕೇಂದ್ರಕ್ಕೆ ಒತ್ತಡ
ಹೊಸದಿಲ್ಲಿ, ಡಿ.7: ದೇಶದಲ್ಲಿ ನೋಟು ಅಮಾನ್ಯ ನಿರ್ಧಾರ ಕೈಗೊಂಡ ಬಳಿಕ ವಿದೇಶಿ ರಾಯಭಾರ ಕಚೇರಿಗಳಿಗೂ ನಗದು ಕೊರತೆಯ ಬಿಸಿ ತಟ್ಟಿದ್ದು, ಹಲವು ದೇಶಗಳು ಒಂದೊಂದಾಗಿ ಅಸಮಾಧಾನ ವ್ಯಕ್ತಪಡಿಸುತ್ತಿವೆ. ರಷ್ಯಾ ಮೊದಲ ಬಾರಿಗೆ ಕರೆನ್ಸಿ ಕೊರತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ಹಲವು ದೇಶಗಳು ಕೇಂದ್ರ ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ತಮ್ಮ ಲಿಖಿತ ಮನವಿ ಹಾಗೂ ಪ್ರತಿಭಟನಾತ್ಮಕ ಅರ್ಜಿಗಳನ್ನು ಸಲ್ಲಿಸಿವೆ.
ವಿದೇಶಿ ರಾಯಭಾರ ಕಚೇರಿಗಳು ಎದುರಿಸುತ್ತಿರುವ ಸಮಸ್ಯೆಗಳ ಪರಿಹಾರದ ನಿಟ್ಟಿ ನಲ್ಲಿ ಅಂತರ ಸಚಿವಾಲಯ ಕಾರ್ಯಪಡೆ ಕ್ರಮ ಕೈಗೊಳ್ಳಬೇಕು. ಇದು ವಿದೇಶಿ ರಾಯ ಭಾರ ಕಚೇರಿಗಳ ಸಮಸ್ಯೆ ಪರಿಹಾರಕ್ಕೆ ಶಿಫಾರಸುಗಳನ್ನು ಮಾಡಿದ್ದರೂ, ಇದ್ಯಾವುದನ್ನೂ ಕೇಂದ್ರ ಹಣಕಾಸು ಸಚಿವಾಲಯ ಅನುಷ್ಠಾನಗೊಳಿಸದಿರುವುದು ಸಮಸ್ಯೆಯ ಮೂಲ.
ರಷ್ಯಾದ ರಾಯಭಾರಿ ಅಲೆಕ್ಸಾಂಡರ್ ಕೊಡಕಿನ್ ಅವರು ಈ ಬಗ್ಗೆ ಕೇಂದ್ರಕ್ಕೆ ಪತ್ರ ಬರೆದು, ಮಾಸ್ಕೊದಲ್ಲಿರುವ ಭಾರತೀಯ ರಾಯಭಾರ ಕಚೇರಿ ವಿರುದ್ಧ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿರುವುದು ಮಾಧ್ಯಮಗಳಿಗೆ ತಿಳಿದು ಬಂದಿದೆ. ಡೊಮಿನಿಕನ್ ರಿಪಬ್ಲಿಕ್‌ನ ರಾಯಭಾರಿ ಹನ್ಸ್ ಡೆನ್ನೆನ್‌ಬರ್ಗ್ ಕ್ಯಾಸ್ಟಲಿನೊ ಅವರು ಕೂಡಾ ಇಂಥದ್ದೇ ಪತ್ರ ಬರೆದಿದ್ದಾರೆ ಎನ್ನಲಾಗಿದೆ. ಇಥಿಯೋಪಿಯಾದ ರಾಯಭಾರಿ, ಶ್ರೀಲಂಕಾ ಹಾಗೂ ಪಾಕಿಸ್ತಾನದ ರಾಯಭಾರಿಗಳು ಕೂಡಾ ಇದೇ ರೀತಿ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ. ಭಾರತೀಯ ಕರೆನ್ಸಿ ಚಲಾವಣೆಯಲ್ಲಿರುವ ಭೂತಾನ್ ಹಾಗೂ ನೇಪಾಳ ಕೂಡಾ ತೀವ್ರ ಸಂಕಷ್ಟ ಎದುರಿಸುತ್ತಿವೆ. ಇದನ್ನು ತಕ್ಷಣ ಪರಿಹರಿಸುವಂತೆ ಈ ಎರಡು ದೇಶಗಳು ಮನವಿ ಮಾಡುತ್ತಲೇ ಇವೆ.





