ಮಮತಾ ವಿಮಾನ ವಿವಾದ: ಆರು ಪೈಲಟ್‌ಗಳ ಅಮಾನತು
ಹೊಸದಿಲ್ಲಿ, ಡಿ.7: ಪಶ್ಚಿಮ ಬಂಗಾಳದಲ್ಲಿ ವಿವಾದದ ಬಿರುಗಾಳಿ ಎಬ್ಬಿಸಿದ ವಿಮಾನ ವಿವಾದದ ಹಿನ್ನೆಲೆಯಲ್ಲಿ ನಾಗರಿಕ ವಿಮಾನಯಾನದ ಮಹಾನಿರ್ದೇಶಕರು ಆರು ಪೈಲಟ್‌ಗಳನ್ನು ಅಮಾನತು ಮಾಡಿದ್ದಾರೆ. ಇಂಡಿಗೊ, ಸ್ಪೈಸ್ ಜೆಟ್ ಹಾಗೂ ಏರ್ ಇಂಡಿಯಾದ ತಲಾ ಇಬ್ಬರು ಪೈಲಟ್‌ಗಳು ಅಮಾನತುಗೊಂಡಿದ್ದಾರೆ.
ಕಡಿಮೆ ಇಂಧನ ಇದ್ದಾಗ್ಯೂ ವಿಮಾನ ಚಾಲನೆ ಮಾಡಿದ ಆರೋಪದಲ್ಲಿ ಇವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪಾಟ್ನ-ಕೊಲ್ಕತ್ತಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ವಿಮಾನ ನಿಲ್ದಾಣದಲ್ಲಿ ವಿಮಾನ ಇಳಿಯುವ ಹಂತದಲ್ಲಿ ಸ್ಪೈಸ್‌ಜೆಟ್ ವಿಮಾನ ಹಾಗೂ ಏರ್‌ಇಂಡಿಯಾ ವಿಮಾನಗಳು ಈ ವಿಮಾನಕ್ಕಿಂತ ಮುಂದಿದ್ದವು. ಕಡಿಮೆ ಇಂಧನ ಇದ್ದ ಕಾರಣದಿಂದ ತುರ್ತಾಗಿ ವಿಮಾನವನ್ನು ಇಳಿಸಲು ಕೂಡಾ ನಿರಾಕರಿಸಲಾಗಿತ್ತು ಎಂದು ಟಿಎಂಸಿ ಆಪಾದಿಸಿದ್ದರಿಂದ ವಿವಾದ ಸೃಷ್ಟಿಯಾಗಿತ್ತು.
ವಿಮಾನಯಾನ ನಿಯಂತ್ರಣದ ಅತ್ಯುನ್ನತ ಸಂಸ್ಥೆಯಾಗಿರುವ ನಾಗರಿಕ ವಿಮಾನ ನಿರ್ದೇಶನಾಲಯ ಎಲ್ಲ ವಿಮಾನಯಾನ ಕಂಪೆನಿ ಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಅದರಲ್ಲೂ ಪ್ರಮುಖವಾಗಿ ಚಳಿಗಾಲದಲ್ಲಿ ಕಡಿಮೆ ಇಂಧನದೊಂದಿಗೆ ಚಲಿಸದಂತೆ ಸೂಚಿಸಲಾಗಿದೆ. ಮಂಜು ಮುಸುಕಿರುವ ಕಾರಣದಿಂದ ಕೆಲವೊಮ್ಮೆ ವಿಮಾನಗಳು ನಿಗದಿತ ನಿಲ್ದಾಣದಲ್ಲಿ ಇಳಿಯಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಡಿಜಿಸಿಎ ಪೈಲಟ್‌ಗಳನ್ನು ಅಮಾನತು ಮಾಡಿ, ಸೂಕ್ತ ತರಬೇತಿ ನೀಡುವಂತೆ ಸೂಚಿಸಿದ್ದಾಗಿ ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಡಿಜಿಸಿಎ ಕ್ರಮದಿಂದ ಏರ್‌ಲೈನ್ಸ್ ಸಂಸ್ಥೆಗಳು ಮುನಿಸಿಕೊಂಡಿವೆ. ಕೊಲ್ಕತ್ತಾ ವಿಮಾನದಲ್ಲಿ ಸಾಕಷ್ಟು ಇಂಧನ ಇತ್ತು. ಪರ್ಯಾಯ ವಿಮಾನ ನಿಲ್ದಾಣವಾದ ಭುವನೇಶ್ವರಕ್ಕೆ ತಲುಪುವಷ್ಟು ಇಂಧನ ಇತ್ತು ಎಂದು ಹೇಳಿಕೊಂಡಿವೆ. ವಿಮಾನ ಆಗಸಕ್ಕೆ ಏರುವ ವೇಳೆ ನಿಗದಿತ ಸ್ಥಳಕ್ಕೆ ತಲುಪಲು ಬೇಕಾಗುವುದಕ್ಕಿಂತ 30 ನಿಮಿಷ ಹೆಚ್ಚುಕಾಲ ಹಾರಾಡಲು ಅಗತ್ಯವಾದ ಮತ್ತು ಪರ್ಯಾಯ ವಿಮಾನ ನಿಲ್ದಾಣವನ್ನು ತಲುಪಲು ಬೇಕಾಗುವಷ್ಟು ಇಂಧನ ಹೊಂದಿರಬೇಕಾಗುತ್ತದೆ. ಇಷ್ಟು ಪ್ರಮಾಣದ ಇಂಧನ ನಮ್ಮ ವಿಮಾನದಲ್ಲಿತ್ತು ಎಂದು ವಿಮಾನಯಾನ ಸಂಸ್ಥೆ ಪ್ರತಿಪಾದಿಸಿದೆ.
ಕೊಲ್ಕತ್ತಾ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆ (ಎಟಿಸಿ) ಹಾಗೂ ಪೈಲಟ್ ನಡುವಿನ ಸಂವಹನದ ಕೊರತೆಯಿಂದಾಗಿ ಈ ಗೊಂದಲ ಸೃಷ್ಟಿಯಾಗಿದೆ.





