ಮುಂದುವರಿದ ನೋಟು ಗದ್ದಲ, ಸದನ ಕಲಾಪಕ್ಕೆ ಅಡ್ಡಿ
ಧೈರ್ಯವಿದ್ದರೆ ಚರ್ಚೆಗೆ ಬನ್ನಿ: ವಿಪಕ್ಷಗಳಿಗೆ ಸರಕಾರದ ಸವಾಲು
ಹೊಸದಿಲ್ಲಿ, ಡಿ.7: ಅಧಿಕ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಿದ ಸರಕಾರದ ಕ್ರಮವನ್ನು ವಿರೋಧಿಸಿ ಸದನದಲ್ಲಿ ವಿರೋಧ ಪಕ್ಷಗಳು ನಡೆಸುತ್ತಿರುವ ಪ್ರತಿಭಟನೆ ಮುಂದುವರಿದಿದ್ದು ಇಂದು ಗದ್ದಲದ ಕಾರಣ ರಾಜ್ಯಸಭೆಯ ಕಲಾಪ ಬಹುತೇಕ ಸ್ಥಗಿತಗೊಂಡಿತು. ಈ ಮಧ್ಯೆ ಸದನ ಕಲಾಪಕ್ಕೆ ಅಡ್ಡಿ ಮಾಡುವ ಬದಲು ವಿಷಯದ ಕುರಿತ ಚರ್ಚೆ ಮುಂದುವರಿಸಿ ಎಂದು ವಿಪಕ್ಷಗಳಿಗೆ ಸರಕಾರ ಸವಾಲು ಹಾಕಿತು.
ಇಂದು ರಾಜ್ಯ ಸಭೆಯಲ್ಲಿ ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರು ಘೋಷಣೆ ಕೂಗತೊಡಗಿದಾಗ ಗದ್ದಲದ ವಾತಾವರಣ ಉಂಟಾಗಿ ಶೂನ್ಯ ವೇಳೆ ಮತ್ತು ಪ್ರಶ್ನೋತ್ತರ ಅವಧಿಯ ಕಾರ್ಯ ಕಲಾಪಕ್ಕೆ ತೊಂದರೆಯಾಯಿತು. ಈ ಸಂದರ್ಭ ಸದನದ ಉಪಾಧ್ಯಕ್ಷ ಪಿ.ಜೆ.ಕುರಿಯನ್ ಅಪರಾಹ್ನದವರೆಗೆ ಕಲಾಪವನ್ನು ಮುಂದೂಡಿದರು. ಅಪರಾಹ್ನದ ಬಳಿಕವೂ ಇದೇ ಸ್ಥಿತಿ ಮುಂದುವರಿದಾಗ ಸದನವನ್ನು ಅಪರಾಹ 2ಕ್ಕೆ ಮುಂದೂಡಲಾಯಿತು. ಸೂಕ್ತ ಯೋಜನೆಯಿಲ್ಲದೆ ಅನುಷ್ಠಾನಗೊಳಿಸ ಲಾದ ನೋಟು ಅಮಾನ್ಯ ನಿರ್ಧಾರದ ಬಳಿಕ ದೇಶದಾದ್ಯಂತ ಸಂಭವಿಸಿದ 84ಕ್ಕೂ ಹೆಚ್ಚು ಮಂದಿಯ ಸಾವಿಗೆ ಹೊಣೆ ಯಾರು ಎಂದು ಕಾಂಗ್ರೆಸ್ ಸದಸ್ಯರು ಪ್ರಶ್ನಿಸಿದರು. ಇದಕ್ಕೆ ಎಸ್ಪಿ ಮತ್ತು ಬಿಎಸ್ಪಿ ಸದಸ್ಯರೂ ಧ್ವನಿಗೂಡಿಸಿ, ಈ ವಿಷಯಕ್ಕೆ ಸಂಬಂಧಿಸಿ ಪ್ರಧಾನಿ ನರೇಂದ್ರ ಮೋದಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲೀ, ವಿಪಕ್ಷಗಳಿಗೆ ಈ ವಿಷಯದ ಬಗ್ಗೆ ಚರ್ಚೆ ನಡೆಸುವ ಇಚ್ಛೆ ಇಲ್ಲ. ದಿನಕ್ಕೊಂದು ಕಾರಣ ಹಿಡಿದು ಕಲಾಪವನ್ನು ಭಂಗಗೊಳಿಸುತ್ತಿವೆ ಎಂದರು. ವಿಷಯದ ಬಗ್ಗೆ ಚರ್ಚೆ ನಡೆಸಬೇಕೆಂದು ವಿಪಕ್ಷಗಳು ಒತ್ತಾಯಿಸಿದಾಗ ಸರಕಾರ ಒಪ್ಪಿದೆ. ಪ್ರಧಾನಿ ಮೋದಿಯವರು ಸದನದಲ್ಲಿ ಉಪಸ್ಥಿತರಿರಬೇಕು ಎಂಬ ಬೇಡಿಕೆಗೂ ಒಪ್ಪಿದೆ. ಸದನದ ಒಂದು ನಿಮಿಷವನ್ನೂ ವ್ಯರ್ಥಗೊಳಿಸಬಾರದು ಎಂಬುದು ಸರಕಾರದ ಇರಾದೆಯಾಗಿದೆ. ಆದರೆ ಚರ್ಚೆಯಲ್ಲಿ ಪಾಲ್ಗೊಂಡು ವಿಷಯಕ್ಕೆ ಒಂದು ಅಂತ್ಯ ಹಾಡಲು ವಿಪಕ್ಷಗಳಿಗೆ ಮನಸ್ಸಿಲ್ಲ. ವಿಪಕ್ಷಗಳಿಗೆ ತಾಕತ್ತಿದ್ದರೆ ಚರ್ಚೆಗೆ ಮುಂದಾಗಬೇಕು ಎಂದು ಸವಾಲು ಹಾಕಿದರು. ಇದರ ಬೆನ್ನಲ್ಲೇ ಬಿಜೆಪಿ ಸದಸ್ಯರು- ‘ಹಿಮ್ಮತ್ ಹೈ ತೋ ಚರ್ಚಾ ಕರೋ’ (ಧೈರ್ಯವಿದ್ದರೆ ಚರ್ಚೆಗೆ ಬನ್ನಿ) ಎಂದು ಘೋಷಣೆ ಕೂಗತೊಡಗಿದರು. ಒಂದು ವಿಷಯದ ಮೇಲೆ ಬಹಳಷ್ಟು ಚರ್ಚೆ ನಡೆದ ಮೇಲೆ ಆ ವಿಷಯವನ್ನು ಶೂನ್ಯ ವೇಳೆಯಲ್ಲಿ ಚರ್ಚಿಸಲು ಸದನದ ಅಧ್ಯಕ್ಷರು ಹೇಗೆ ಅವಕಾಶ ಮಾಡಿಕೊಡಲು ಸಾಧ್ಯ ಎಂದು ಸದನದ ನಾಯಕರೂ ಆಗಿರುವ ಜೇಟ್ಲೀ ಪ್ರಶ್ನಿಸಿದರು. ಇದಕ್ಕೆ ಸಮ್ಮತಿ ಸೂಚಿಸಿದ ಸದನದ ಉಪಾಧ್ಯಕ್ಷ ಕುರಿಯನ್, ಚರ್ಚೆಗೆ ಸಿದ್ದರಿದ್ದೀರಾ ಎಂದು ವಿಪಕ್ಷಗಳನ್ನು ಪ್ರಶ್ನಿಸಿದರು. ಈ ವೇಳೆ ಬಿಜೆಪಿ ಸದಸ್ಯರ ಘೋಷಣೆ ನಡುವೆ ವಿಪಕ್ಷ ಸದಸ್ಯರು ಪ್ರಧಾನಿ ಮೋದಿ ಸದನಕ್ಕೆ ಆಗಮಿಸಬೇಕು ಎಂದು ಪಟ್ಟು ಹಿಡಿದಾಗ ಸದನವನ್ನು ಮುಂದೂಡಲಾಯಿತು.





