ಪಾಕ್‌ನಲ್ಲಿ ಬಂಧಿತ ಭಾರತೀಯ ಜಾಧವ್ ವಿರುದ್ಧ ಇಲ್ಲ ಸಾಕ್ಷ್ಯಾಧಾರ

ಇಸ್ಲಾಮಾಬಾದ್, ಡಿ.8: ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧಿತರಾಗಿ ಪಾಕಿಸ್ತಾನ ಸೇನೆಯ ವಶದಲ್ಲಿರುವ ಭಾರತೀಯ ಯೋಧ, ಕುಲಭೂಷಣ ಜಾಧವ್ ಅವರ ವಿರುದ್ಧ ಸಮರ್ಪಕ ಸಾಕ್ಷ್ಯಾಧಾರಗಳು ಇಲ್ಲ ಎಂದು ಪಾಕಿಸ್ತಾನದ ಪ್ರಧಾನಿಯ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್ ಅಝೀಝ್ ಒಪ್ಪಿಕೊಂಡಿದ್ದಾಗಿ ಪಾಕಿಸ್ತಾನ ಮಾಧ್ಯಮಗಳು ವರದಿ ಮಾಡಿವೆ.
ಆದರೆ ಇದರ ಬೆನ್ನಲ್ಲೇ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿ ಅಝೀಝ್ ಅವರನ್ನು ಉಲ್ಲೇಖಿಸಿದ ಈ ಹೇಳಿಕೆಗಳು ಸಂಪೂರ್ಣವಾಗಿ ತಪ್ಪು ಎಂದಿದೆ. ಅಝೀಝ್ ಹೇಳಿಕೆ ಭಾರತದ ನಿಲುವನ್ನು ಪುಷ್ಟೀಕರಿಸುವಂತಿದ್ದರೂ, ಈ ಹೇಳಿಕೆಯನ್ನು ಇನ್ನೂ ದೃಢಪಡಿಸಿಕೊಳ್ಳಬೇಕಿದೆ ಎಂದು ಭಾರತ ಸರಕಾರದ ಮೂಲಗಳು ಹೇಳಿವೆ. "ಪಾಕಿಸ್ತಾನದ ಸೆನೆಟ್ ಅಧಿವೇಶನ ನಡೆಯುತ್ತಿಲ್ಲ" ಎಂದು ಸರಕಾರಿ ಮೂಲಗಳು ಹೇಳಿವೆ.
ಅಮೃತಸರದಲ್ಲಿ ಡಿಸೆಂಬರ್ 3-4ರಂದು ನಡೆದ ಹಾರ್ಟ್ ಆಫ್ ಏಷ್ಯಾ ಸಮ್ಮೇಳನದಲ್ಲಿ ಅಝೀಝ್ ಭಾಗವಹಿಸಿದ್ದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ ಕೂಡಾ ಇದರಲ್ಲಿ ಪಾಲ್ಗೊಂಡಿದ್ದರು.
"ಪಾಕಿಸ್ತಾನ- ಭಾರತ ಸಂಬಂಧ ಹಾಗೂ ವಾಸ್ತವ ನಿಯಂತ್ರಣ ರೇಖೆಯ ಉದ್ವಿಗ್ನ ಪರಿಸ್ಥಿತಿ ಬಗ್ಗೆ ಸೆನೆಟ್‌ಗೆ ವಿವರಣೆ ನೀಡುವ ವೇಳೆ ಅಝೀಝ್, ಜಾಧವ್ ವಿರುದ್ಧ ಯಾವುದೇ ನಿರ್ಧಾರಕ್ಕೆ ಬರುವಂಥ ಸಾಕ್ಷ್ಯ ಇಲ್ಲ" ಎಂದು ಹೇಳಿದ್ದಾಗಿ ಜಿಯೊ ಟಿವಿ ಮತ್ತು ಡಾನ್ ವರದಿ ಮಾಡಿವೆ. ಇದೀಗ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಈ ಏಜೆಂಟ್ ಬಗ್ಗೆ ಯಾವ ಮಾಹಿತಿ ನೀಡುತ್ತಾರೆ ಎಂದು ಕಾದುನೋಡಬೇಕಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಜಾಧವ್ ಇರಾನ್‌ನಿಂದ ಪ್ರವೇಶಿಸುತ್ತಿದ್ದಾಗ ಬಲೂಚಿಸ್ತಾನ ಬಳಿ ಬಂಧಿಸಲಾಗಿದೆ ಎನ್ನಲಾಗಿದ್ದು, ದೇಶದ ವಿರುದ್ಧ ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಪಾಕಿಸ್ತಾನ ಸೇನೆ ಜಾಧವ್ ಅವರನ್ನು ವಶಕ್ಕೆ ಪಡೆದಿತ್ತು. ಪಾಕಿಸ್ತಾನ ಸೇನೆ, ಜಾಧವ್ ಅವರ ತಪ್ಪೊಪ್ಪಿಗೆ ವೀಡಿಯೊವನ್ನು ಕೂಡಾ ಬಹಿರಂಗಪಡಿಸಿದ್ದು, ಭಾರತದ ನೌಕಾಪಡೆ ಅಧಿಕಾರಿ ಎಂದು ಒಪ್ಪಿಕೊಂಡಿದ್ದಾಗಿ ಹೇಳಿದೆ.







