ನೋಟು ಅಮಾನ್ಯಕ್ಕೆ ಒಂದು ತಿಂಗಳು: ನಿಲ್ಲದ ಜನರ ಪರದಾಟ

ಹೊಸದಿಲ್ಲಿ, ಡಿ.8: ಪ್ರಧಾನಮಂತ್ರಿ ನರೇಂದ್ರ ಮೋದಿ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿ ಇಂದಿಗೆ ಭರ್ತಿ ಒಂದು ತಿಂಗಳಾಗಿದೆ. ಆದರೆ, ಹಣಕ್ಕಾಗಿ ಜನರ ಪರದಾಟ ಈಗಲೂ ಮುಂದುವರಿದಿದೆ.
ದೇಶದ ಎಲ್ಲ ಎಟಿಎಂಗಳಲ್ಲಿ ‘ನೋ ಕ್ಯಾಶ್’ ಎಂಬ ಫಲಕ ರಾರಾಜಿಸುತ್ತಿದೆ. ಜನರು ತಮ್ಮದೇ ಹಣವನ್ನು ಪಡೆಯಲು ಎಲ್ಲ ಕೆಲಸವನ್ನು ಬಿಟ್ಟು ಗಂಟೆಗಟ್ಟಲೆ ಬ್ಯಾಂಕ್‌ನಲ್ಲಿ ಕ್ಯೂನಲ್ಲಿ ನಿಲ್ಲಬೇಕಾದ ದಯನೀಯ ಸ್ಥಿತಿ ಈಗಲೂ ಮುಂದುವರಿದಿದೆ.
ಆರ್‌ಬಿಐ ದಿನಕ್ಕೊಂದು ನಿಯಮ ಜಾರಿಗೆ ತರುತ್ತಿರುವುದರಿಂದ ಬ್ಯಾಂಕ್ ಅಧಿಕಾರಿಗಳು ಹಾಗೂ ಗ್ರಾಹಕರು ಗೊಂದಲದಲ್ಲಿ ಸಿಲುಕಿದ್ದಾರೆ. ಗ್ರಾಮೀಣ ಪ್ರದೇಶಗಳಲ್ಲಿ ನೋಟು ರದ್ಧತಿಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.
ಚಿಲ್ಲರೆ ವ್ಯಾಪಾರದಲ್ಲಿ ಗಣನೀಯ ಇಳಿಕೆಯಾಗಿದೆ. ಸರಕಾರ ನಗದು ರಹಿತ ವ್ಯವಹಾರಕ್ಕೆ ಕರೆ ನೀಡುತ್ತಿರುವ ಹಿನ್ನೆಲೆಯಲ್ಲಿ ಮಾಲ್‌ಗಳಲ್ಲಿ ವ್ಯಾಪಾರ-ವಹಿವಾಟು ಜೋರಾಗಿದೆ. ಆದರೆ, ಬೀದಿ-ಬದಿಯ ಬಡ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ.
2000 ರೂ. ಹೊಸ ನೋಟು ಜಾರಿಗೆ ತಂದಿರುವ ಕಾರಣ ಜನರಿಗೆ ಚಿಲ್ಲರೆ ಸಮಸ್ಯೆ ಎದುರಾಗಿದೆ. 500 ರೂ. ಹೊಸ ನೋಟು ಇನ್ನೂ ಬ್ಯಾಂಕ್‌ಗಳಿಗೆ ಸರಿಯಾಗಿ ತಲುಪಿಲ್ಲ.
ಪ್ರತಿಪಕ್ಷಗಳ ಧರಣಿ:
ಈ ನಡುವೆ ನೋಟು ಬ್ಯಾನ್ ವಿರೋಧಿಸಿ ಪ್ರತಿಪಕ್ಷಗಳು ಲೋಕಸಭೆಯಲ್ಲಿ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿವೆ. ಗುರುವಾರ ಕಾಂಗ್ರೆಸ್ ನೇತೃತ್ವದಲ್ಲಿ 14 ಪಕ್ಷಗಳು ಕಪ್ಪುಪಟ್ಟಿ ಧರಿಸಿ ಸಂಸತ್ ಭವನದ ಎದುರು ಧರಣಿ ನಡೆಸಿವೆ. ಧರಣಿಯಲ್ಲಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಿದ್ದಾರೆ.







