‘ನೋಟು ರದ್ಧತಿ ಮೂರ್ಖತನದ ನಿರ್ಧಾರ’
ಪ್ರಧಾನಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಹೊಸದಿಲ್ಲಿ, ಡಿ.8: ನೋಟು ಬ್ಯಾನ್‌ನಿಂದ ಬಡವರಿಗೆ ತೀವ್ರ ತೊಂದರೆಯಾಗಿದೆ. ಈ ನಿರ್ಧಾರ ಮುಂದಾಲೋಚನೆಯಿಲ್ಲದೆ ಮಾಡಲಾಗಿದ್ದು, ಇದೊಂದು ಮೂರ್ಖತನದ ನಿರ್ಧಾರ ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಕ್ಯಾಶ್‌ಲೆಸ್(ನಗದುರಹಿತ) ವ್ಯವಹಾರದಿಂದ ಜನಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ. ಇದರಿಂದ 4-5 ಕಂಪೆನಿಗಳಿಗೆ ಮಾತ್ರ ಪ್ರಯೋಜನವಾಗಿದೆ. ನನಗೆ ಲೋಕಸಭೆಯಲ್ಲಿ ಮಾತನಾಡಲು ಅವಕಾಶ ಲಭಿಸಿದರೆ ‘ಪೇಟಿಎಂ’ ಹೇಗೆ ಪೇ ಟು ಮೋದಿ ಆಗಿದೆ ಎಂದು ವಿವರಿಸುವೆ ಎಂದು 14 ಪಕ್ಷಗಳ ಸದಸ್ಯರೊಂದಿಗೆ ಸಂಸತ್ ಭವನದ ಹೊರಗೆ ಧರಣಿ ನಡೆಸುತ್ತಿರುವ ರಾಹುಲ್ ಗಾಂಧಿ ಮಾತನಾಡುತ್ತಿದ್ದರು.
ಮೋದಿ ತಮ್ಮ ಮಾತಿನ ವರಸೆ ಬದಲಿಸುತ್ತಿದ್ದಾರೆ. ಆರಂಭದಲ್ಲಿ ನೋಟು ಅಮಾನ್ಯ ಕಪ್ಪು ಹಣದ ವಿರುದ್ಧ ಎಂದು ಘೋಷಿಸಿದರು. ಆ ನಂತರ ಭಯೋತ್ಪಾದನೆ ವಿರುದ್ಧ ಈ ಕ್ರಮ ಎಂದು ಹೇಳಿದರು. ಬಳಿಕ ನಕಲಿ ನೋಟುಗಳ ವಿರುದ್ಧ ಸಮರ ಇದಾಗಿದೆ ಎಂದು ಹೇಳಿದರು. ಇದೀಗ ನಗದುರಹಿತ ಆರ್ಥಿಕತೆ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ರಾಹುಲ್ ಕಿಡಿಕಾರಿದರು.





